ಸಪ್ತಸ್ವರ ಸೇವಾ ಸಂಸ್ಥೆಯವರ ಕಾರ್ಯವೈಖರಿ ಶ್ಲಾಘನೀಯ: ಧವಳೋ ಸಾವರ್ಕರ್

ಆಪ್ತ ನ್ಯೂಸ್ ಜೋಯಿಡಾ:
ಸಪ್ತಸ್ವರ ಸೇವಾ ಸಂಸ್ಥೆಯವರು ಕಳೆದ 22 ವರ್ಷಗಳಿಂದ, 23ಯ ವರ್ಷಕ್ಕೆ ಪಾದಾರ್ಪಣೆ ಮಾಡಿ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಸಾಮಾಜಿಕ ಕ್ಷೇತ್ರ, ಸೇರಿದಂತೆ ಯಕ್ಷಗಾನ ರಂಗದಲ್ಲಿ ಮಕ್ಕಳು, ಯುವಕರು, ಯುವತಿಯರು, ಪುರುಷರು, ಮಹಿಳೆಯರು ಸೇರಿದಂತೆ ಹಿರಿಯರನ್ನು ಸನ್ಮಾನಿಸಿ, ಗೌರವಿಸುವ ಮೂಲಕ ವರ್ಷದಿಂದ ವರ್ಷಕ್ಕೆ ತಮ್ಮ ಛಾಪನ್ನು ಮೂಡಿಸಿ ಉತ್ತುಂಗದ ದಾಪುಗಾಲನ್ನೀಡುತ್ತಾ ಕಲೆ, ಊರಿನ, ಪರ ಊರಿನ ಕಲಾವಿದರನ್ನು ಉಳಿಸಿ, ಬೆಳೆಸುವ ಕಾರ್ಯವೈಖರಿ ಶ್ಲಾಘನೀಯ, ಯಾವುದೇ ವ್ಯಕ್ತಿ, ಸಂಘಟನೆ, ಸಂಸ್ಥೆಯಾಗಲಿ ತಾನು ಬೆಳೆದು, ತಮ್ಮವರನ್ನು ಬೆಳೆಸುವ ಭಾವನೆ ಇದ್ದಲ್ಲಿ ಅದು ಸಮಾಜದಲ್ಲಿ ನಿರಂತರವಾಗಿ ಇರುತ್ತದೆ,ಅದಕ್ಕೆ ವಿರುದ್ಧ ಹೋದಲ್ಲಿ ಕಾಲ ಕ್ರಮೇಣ ನಶಿಸಿಹೋಗುತ್ತದೆ ಎಂದು ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಸಾವರ್ಕರ್ ಹೇಳಿದರು.
ಅವರು ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಸಪ್ತಸ್ವರ ಸೇವಾ ಸಂಸ್ಥೆ,ಊರ ನಾಗರೀಕರ ಸಂಯುಕ್ತ ಆಶ್ರಯದಲ್ಲಿ ಯಕ್ಷಗಾನ ದಶಮಾನೋತ್ಸವ ಏಳನೇಯ ದಿನದ ಕಾರ್ಯಕ್ರಮದ ದಿವಂಗತ ಸದಾನಂದ ನರಸಿಂಹ ಹೆಗಡೆ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಭಾಸ್ಕರ ಗಾಂವ್ಕರ ಬಿದ್ರಮನೆ ಸಮೂಹ ಸಂಪನ್ಮೂಲ ವ್ಯಕ್ತಿ ಶಿಕ್ಷಣ ಇಲಾಖೆ, ಜೋಯಿಡಾ, ಚಂದ್ರಕಾಂತ ರಾಮಯ್ಯ ನಾಯ್ಕ ಮೂರ್ತಿ ರಚನಕಾರರು ಅಂಕೋಲಾ ಅವರನ್ನು ಸಪ್ತಸ್ವರ ಸೇವಾ ಸಂಸ್ಥೆಯ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು.
ಸನ್ಮಾನಿತರಾದ ಭಾಸ್ಕರ ಗಾಂವ್ಕರ ಮಾತನಾಡಿ ಸಪ್ತಸ್ವರ ಸೇವಾ ಸಂಸ್ಥೆಯವರು ಹಲವು ತೊಂದರೆ, ತೊಡಕುಗಳ ಮಧ್ಯೆಯೂ ಮಕ್ಕಳಿಗೆ ಯಕ್ಷಗಾನದ ಕಲೆಯನ್ನು ಬಾಲ್ಯದಲ್ಲಿ ಕಲಿಸಿ ಮುಂದಿನ ಪೀಳಿಗೆಗೆ ಒಯ್ಯುವ ಪ್ರಯತ್ನ ಶ್ಲಾಘನೀಯ. ಬಹಳ ವರ್ಷಗಳಿಂದ ಭಾಂಧವ್ಯ ಹೊಂದಿದ, ಕಾರ್ಯ ಕ್ಷೇತ್ರವಾದ ಗುಂದದ ಪರಿಸರದಲ್ಲಿ ಸನ್ಮಾನ ಮಾಡುತ್ತಿರುವುದು ಸಂತಸದ ವಿಷಯ. ಮುಂದಿನ ದಿನಗಳಲ್ಲಿ ಯಕ್ಷಗಾನ ಪ್ರದರ್ಶನದ ಸಮಯ ಹಾಗೂ ಗುಣಮಟ್ಟದ ಪ್ರದರ್ಶನಕ್ಕೆ ಒತ್ತು ನೀಡುವ ಕಡೆ ಗಮನ ಇರಲಿ ಎಂದು ಹೇಳಿದರು.
ಯಕ್ಷಭಿಮಾನಿಗಳಾದ ಇಂದುಮತಿ ದೇಸಾಯಿ ಮಾತನಾಡಿ ಸಪ್ತಸ್ವರ ಸೇವಾ ಸಂಸ್ಥೆಯ ಕಾರ್ಯವೈಖರಿ, ಪದಾಧಿಕಾರಿಗಳ ಪಾಲ್ಗೊಳ್ಳುವಿಕೆ, ಕುಟುಂಬದವರ ಸಹಕಾರ, ಮಕ್ಕಳಿಗೆ ಯಕ್ಷಗಾನ ಕಲಿಸುವಿಕೆಯಲ್ಲಿನ ಆಸಕ್ತಿಯ ಕುರಿತು ಭಾಗವತರಾದ ಆನಂದು ಆಗೇರ ಹಾಗೂ ಸಂಸ್ಥೆಯ ಪಾತ್ರದ ಕುರಿತು ಹೇಳಿದರು. ವೇದಿಕೆಯಲ್ಲಿ ಸುಬ್ರಾಯ ದಾನಗೇರಿ ಅಧ್ಯಕ್ಷತೆಯ ಮಾತಿನಲ್ಲಿ 22 ವರ್ಷಗಳ ಹಿಂದೆ ಚಿಕ್ಕ ಸಸಿಯ ರೂಪದಲ್ಲಿದ್ದ ಸಪ್ತಸ್ವರ ಸೇವಾ ಸಂಸ್ಥೆಯು ಎಲ್ಲರ ಸಹಕಾರದಿಂದ ರೆಂಬೆ, ಕೊಂಬೆಗಳು ಸೇರಿ ಹೆಮ್ಮರವಾಗಿ ಬೆಳೆದಿದೆ. ನಮ್ಮೆಲ್ಲರ ಸಹಕಾರ ನಿರಂತರ ಇರಲಿದೆ ಎಂದು ಹೇಳಿದರು.
ಯಕ್ಷಭಿಮಾನಿಗಳಾದ ನರಸಿಂಹ ಹೆಗಡೆ, ಸೋಮಣ್ಣ ಮಹಾದೇವ ಕಾಡಪೋಡಕರ, ಚಂದ್ರಕಾಂತ ರಾಮಯ್ಯ ನಾಯ್ಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಆನಂದು ಆಗೇರ, ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ, ಪದಾಧಿಕಾರಿಗಳು ಉಪಸ್ಥಿತರಿದ್ದರು. ಸರೋಜಾ ದೇಸಾಯಿ ಸನ್ಮಾನಿತರ ವಾಚನ ಮಾಡಿದರೆ,ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸದಸ್ಯೆ ಸೀತಾ ದಾನಗೇರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಸಹ್ಯಾದ್ರಿ ಬಳಗದ ಸುದರ್ಶನ ಹೆಗಡೆ ಇವರ ನೇತೃತ್ವದಲ್ಲಿ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರಸಂಗದ ಪ್ರದರ್ಶನ ನೆರೆದಿದ್ದ ಯಕ್ಷಭಿಮಾನಿಗಳ ಮನಸೂರೆ ಗೊಂಡಿತು.
What's Your Reaction?






