ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ವಿಸ್ತೃತ ಯೋಜನಾ ವರದಿ: ಡಿಕೆಶಿ ಹೇಳಿಕೆಗೆ ಕಾಗೇರಿ ಖಂಡನೆ

Dec 28, 2025 - 12:28
 0  43
ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ವಿಸ್ತೃತ ಯೋಜನಾ ವರದಿ: ಡಿಕೆಶಿ ಹೇಳಿಕೆಗೆ ಕಾಗೇರಿ ಖಂಡನೆ
ಆಪ್ತ ನ್ಯೂಸ್‌ ಶಿರಸಿ:

ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಮತ್ತು ಜಿಲ್ಲೆಯ ಜೀವನಾಡಿಗಳ ಮೇಲೆ ನೇರ ಪರಿಣಾಮ ಬೀರುವ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಅತ್ಯಂತ ಖೇದಕರ ಮತ್ತು ಅವಿವೇಕದ ನಿರ್ಧಾರವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಉತ್ತರ ಕನ್ನಡ ಸಂಸದ 
ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಕೇಂದ್ರ ಜಲಶಕ್ತಿ ಸಚಿವರ ಸಮ್ಮುಖದಲ್ಲಿ ನಡೆದ ಚರ್ಚೆಯಂತೆ, ಈ ಯೋಜನೆಯನ್ನು ಮುಂದುವರಿಸಲು ರಾಜ್ಯ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ತೋರುತ್ತಿರುವ ಉತ್ಸಾಹವು ಜಿಲ್ಲೆಯ ಜನತೆಗೆ ಎಸಗುತ್ತಿರುವ ಘೋರ ದ್ರೋಹವಾಗಿದೆ ಎಂದು ಕಾಗೇರಿ ಕಿಡಿಕಾರಿದ್ದಾರೆ.
 
​ಯಾವುದೇ ನದಿ ಜೋಡಣೆ ಯೋಜನೆಗೆ ರಾಜ್ಯ ಸರ್ಕಾರವೇ ಪೂರ್ಣ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗುತ್ತದೆ ಎಂಬ ಸ್ಪಷ್ಟ ನಿಯಮವಿದ್ದರೂ, ಜನಜೀವನ ಮತ್ತು ಇಡೀ ಪರಿಸರವನ್ನು ನಾಶಮಾಡುವ ಈ ಯೋಜನೆಯನ್ನು 'ಕಾರ್ಯಸಾಧುವಲ್ಲ' ಎಂದು ತಿರಸ್ಕರಿಸುವ ಬದಲು ರಾಜ್ಯ ಸರ್ಕಾರವು ಇದಕ್ಕೆ ಮನ್ನಣೆ ನೀಡುತ್ತಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಈ ಯೋಜನೆ ಕುರಿತಂತೆ ಕೆಲವರು ಕೇಂದ್ರ ಸರ್ಕಾರದ ಮೇಲೆ ಜವಾಬ್ದಾರಿಯನ್ನು ಹಾಕುತ್ತಿರುವುದು ಸ್ಪಷ್ಟ ರಾಜಕೀಯ ಉದ್ದೇಶ ಇದರಲ್ಲಿ ಕಾಣಿಸುತ್ತದೆ. ವಾಸ್ತವದಲ್ಲಿ, ಕೇವಲ ಕೇಂದ್ರ ಸರ್ಕಾರ ನೀಡುವ ಜಲ ಸಂಪನ್ಮೂಲ ಯೋಜನೆಯ ಅನುದಾನದ ಆಸೆಗಾಗಿ ಅಮೂಲ್ಯ ಕೃಷಿಯ ಬದುಕನ್ನು ಮತ್ತು ಅರಣ್ಯ ಸಂಪತ್ತನ್ನು ಬಲಿಗೊಡಲು ಹೊರಟಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
​ನಮ್ಮ ಭಾಗಕ್ಕೆ ನೈಸರ್ಗಿಕವಾಗಿ ಬೀಳುವ ಮಳೆಯಿಂದಲೇ ಇಲ್ಲಿನ ರೈತರು ಹಾಗೂ ಪರಿಸರ ಬದುಕುತ್ತಿದ್ದು, ಬೇಸಿಗೆಯ ಅವಧಿಯಲ್ಲಿ ಈ ಭಾಗದಲ್ಲಿಯೇ ತೀವ್ರ ನೀರಿನ ಕೊರತೆ ಇರುತ್ತದೆ. ಇಲ್ಲಿನ ಜನರಿಗೆ ನೀರಿನ ಅವಶ್ಯಕತೆ ತೀರಾ ಇರುವಾಗ, ಇಲ್ಲಿಂದ ನೀರನ್ನು ತೆಗೆದುಕೊಂಡು ಹೋಗಿ ವರದಾ ನದಿಗೆ ಸೇರಿಸುವುದು ಒಂದು ಅವೈಜ್ಞಾನಿಕ ಯೋಜನೆಯಾಗಿದ್ದು, ಇದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ಈ ತರದ ಯೋಜನೆಗಳ ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ಇದೆ. ಈಗಾಗಲೇ ವಿವಿಧ ಬೃಹತ್ ಯೋಜನೆಗಳಿಂದ ಪಶ್ಚಿಮ ಘಟ್ಟದ ಪರಿಸರ ತತ್ತರಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ ಬೇಡ್ತಿ-ವರದಾ ಜೋಡಣೆಯಂತಹ ಯೋಜನೆಗಳು ಸಹ್ಯಾದ್ರಿಯ ಉಳಿವಿಗೇ ಅಂತಿಮ ಕೊಡಲಿ ಪೆಟ್ಟು ನೀಡಲಿವೆ. ನಾವು ಈಗಾಗಲೇ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ, ಈ ಯೋಜನೆಯಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿ ಮರುಪರಿಶೀಲನೆಗೆ ವಿನಂತಿಸಿದ್ದೇವೆ.
 
ಸ್ವರ್ಣವಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಪಶ್ಚಿಮ ಘಟ್ಟಗಳ ಸಂರಕ್ಷಣಾ ಸಮಾವೇಶಗಳ ಮೂಲಕ ನಾವು ಈ ನದಿ ತಿರುವು ಯೋಜನೆಯ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ. ಈ ಯೋಜನೆಯನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ ಮತ್ತು ಇದು ಯಾವುದೇ ಕಾರಣಕ್ಕೂ ಜಾರಿಗೆ ಬರದಂತೆ ತಡೆಯಲು ಅಗತ್ಯವಾದ ಎಲ್ಲಾ ವಿಧದ ಪ್ರಯತ್ನ ಹಾಗೂ ಕಾನೂನಾತ್ಮಕ ಮತ್ತು ಜನಪರ ಹೋರಾಟಗಳನ್ನು ಸಂಘಟಿತವಾಗಿ ಮಾಡುತ್ತೇವೆ.
 
​ನಮ್ಮ ಜಿಲ್ಲೆಯ ನೈಸರ್ಗಿಕ ಸಂಪತ್ತನ್ನು ಬಲಿಗೊಟ್ಟು ಪಡೆಯುವ ಯಾವುದೇ "ಅಭಿವೃದ್ಧಿ" ನಮಗೆ ಬೇಕಿಲ್ಲ. ರಾಜಕೀಯ ಲಾಭಕ್ಕಾಗಿ ಈ ಜನವಿರೋಧಿ ಯೋಜನೆಯನ್ನು ಮುಂದುವರಿಸಿದರೆ ನಾವು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಜಿಲ್ಲೆಯ ಹಿತರಕ್ಷಣೆಗಾಗಿ ಮತ್ತು ಸಹ್ಯಾದ್ರಿಯ ಉಳಿವಿಗಾಗಿ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇನೆ ಎಂದು ಎಚ್ಚರಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0