ಎತ್ತಿನಹೊಳೆ ವಿಫಲ: ಅಘನಾಶಿನಿಯತ್ತ ಮುಖ: ಪ್ರಿಫಿಸಿಬಿಲಿಟಿ ವರದಿಯಲ್ಲಿ ಬಹಿರಂಗ

ಎತ್ತಿನ ಹೊಳೆ ಯೋಜನೆಯ ವಿಫಲತೆ ಕಾರಣ ಅಘನಾಶಿನಿಯಿಂದ ಬೆಂಗಳೂರಿಗೆ ನೀರು ಕೊಡಲು ಅಘನಾಶಿನಿ ಯೋಜನೆ. ನೀರಾವರಿ ಇಲಾಖೆಯ ಸಾಧ್ಯತಾ ವರದಿಯಲ್ಲಿ ಬಹಿರಂಗ

Jan 27, 2026 - 20:01
 0  391
ಎತ್ತಿನಹೊಳೆ ವಿಫಲ: ಅಘನಾಶಿನಿಯತ್ತ ಮುಖ: ಪ್ರಿಫಿಸಿಬಿಲಿಟಿ ವರದಿಯಲ್ಲಿ ಬಹಿರಂಗ
ಆಪ್ತ ನ್ಯೂಸ್‌ ಬೆಂಗಳೂರು:

ಅಘನಾಶಿನಿ ನದಿ ಯೋಜನೆಯ ಕುರಿತಂತೆ ಫ್ರಿಫಿಸಿಬಿಲಿಟಿ ವರದಿ ಇದೀಗ ವೃಕ್ಷಲಕ್ಷ ಆಂದೋಲನದ ಕೈಸೇರಿದ್ದು, ಎತ್ತಿನಹೊಳೆ ಯೋಜನೆ ವಿಫಲವಾದ ಕಾರಣ ಅಘನಾಶಿನಿ ನದಿ ನೀರನ್ನು ಬೆಂಗಳೂರಿಗೆ ಒಯ್ಯಲು ನಿರ್ಧರಿಸಲಾಗಿದೆ ಎನ್ನುವ ಅಂಶ ಈ ವರದಿಯಲ್ಲಿದೆ.
 
ಅಘನಾಶಿನಿ ಪ್ರಿಫಿಸಿಬಿಲಿಟಿ ವರದಿಯನ್ನು ವೃಕ್ಷಲಕ್ಷ ಆಂದೋಲನ ಸಂಗ್ರಹಿಸಿ ಇದೀಗ ಕಣಿವೆ ಜನತೆಗೆ ನೀಡಿದೆ. ೩ ತಿಂಗಳ ಹಿಂದೆ ಅಘನಾಶಿನಿ ವೇದಾವತಿ ನದೀ ತಿರುವು ಯೋಜನೆ ಬಗ್ಗೆ ಮಾಹಿತಿ ಸಂಗ್ರಹಿಸಿ ವೃಕ್ಷ ಆಂದೋಲನ ಕಾರ್ಯಕರ್ತರು ನೀಡಿದ್ದರು. ಆದರೆ ಅಧಿಕೃತ ಫ್ರಿಫೀಸಿಬಿಲಿಟಿ ವರದಿ ಕೈಗೆ ಸಿಕ್ಕಿರಲಿಲ್ಲ. ಇದೀಗ ಈ ವರದಿ ಲಭ್ಯವಾಗಿದೆ.

ಇದೀಗ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ತಯಾರಿಸಿದ ಅಘನಾಶಿನಿ ಸಾಧ್ಯತಾ ವರದಿ ಲಭ್ಯವಾಗಿದೆ. ಅಘನಾಶಿನಿ ನದಿಯನ್ನು ವೇದಾವತಿ ನದಿಗೆ ಸೇರಿಸುವ ಅತಿದೊಡ್ಡ ನೀರಾವರಿ ಯೋಜನೆಯ ಹುನ್ನಾರು ಇದೀಗ ಬಯಲಾಗಿದೆ. ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಈಗಾಗಲೇ ಭದ್ರಾ ಆಣೆಕಟ್ಟೆಯಿಂದಲೂ ನೀರು ಸಾಗಿಸುವ ಯೋಜನೆ ಕಾರ್ಯಗತ ಆಗಿದೆ. ಆದಾಗ್ಯೂ ಸುದ್ದಿ ಗದ್ದಲ ಇಲ್ಲದೇ ಅಘನಾಶಿನಿ ವೇದಾವತಿ ಪ್ರಸ್ತಾಪ ಯಾಕೆ ಬಂತು ಎಂಬುದಕ್ಕೆ ಪ್ರಿಫಿಸಿಬಿಲಿಟಿ ವರದಿಯಲ್ಲೇ ಅಸಲಿ ಕಾರಣ ಸಿಕ್ಕಿದೆ.
 
ಎತ್ತಿನಹೊಳೆಯಲ್ಲಿ ೨೪ ಟಿಎಂಸಿ ಸಿಗಬೇಕಾದ ನೀರು ಸಿಗುತ್ತಿಲ್ಲ ಆದ್ದರಿಂದ ಬೆಂಗಳೂರು ಕೋಲಾರಕ್ಕೆ ನೀರು ಬೇಕೇ ಬೇಕು. ಶರಾವತಿ ಜಲಾಶಯದಿಂದ ಬೆಂಗಳೂರಿಗೆ ನೀರು ಸಾಗಿಸುವ ಯೋಜನೆಗೆ ಸಾಗರ-ಶಿವಮೊಗ್ಗ ಜಿಲ್ಲೆಯವರು ೬ ವರ್ಷ ಹಿಂದೇ ಭಾರೀ ವಿರೋಧ ವ್ಯಕ್ತ ಮಾಡಿದರು. ಆದ್ದರಿಂದ ನೀರಾವರಿ ಇಲಾಖೆ ಅಘನಾಶಿನಿ ತಿರುವು ಯೋಜನೆಯನ್ನು ಸದ್ದಿಲ್ಲದೇ ಸಿದ್ಧಪಡಿಸಿ ಬಿಟ್ಟಿದ್ದಾರೆ. ೨೪೦೦೦ ಕೋಟಿ ರೂ, ೩೫ಟಿಎಂಸಿ ನೀರು ಸಾಗಿಸುವುದು, ೪ ಸ್ಥಳಗಳಲ್ಲಿ ನೀರೆತ್ತುವ ಪ್ರಸ್ತಾಪಕಗಳು, ೧೯೪ ಕಿಮೀ ಉದ್ದದ ಕಾಲುವೆ-ಪೈಪಲೈನ್, ಚ್ಯಾನೆಲ್, ವಿದ್ಯುತ್ ಮಾರ್ಗ, ರಸ್ತೆ ಕಾಮಗಾರಿ, ಮುಳುಗಡೆ, ಅರಣ್ಯನಾಶ, ಕಟ್ಟಡ ನಿರ್ಮಾಣ. ಇವೆಲ್ಲವೂ ಇವೆ. ೧೩೦೦ ಮೆಗಾ ವ್ಯಾಟ್ ವಿದ್ಯುತ್ ಈ ನೀರಾವರಿ ಯೋಜನೆಗೆ ಬೇಕು.
೧೯೯೯ರಲ್ಲಿ ರಾಜ್ಯ ನೀರಾವರಿ ಇಲಾಖೆ ಅಘನಾಶಿನಿ-ವರದಾ ನದೀ ಜೋಡಣೆ ಯೋಜನೆಗೆ ತಯಾರಿ ಮಾಡಿತ್ತು. ಇದೀಗ ಏಕಾಏಕಿ ಅಘನಾಶಿನಿ-ವೇದಾವತಿ ತಿರುವು ಪ್ರಸ್ತಾವನೆ ಮಾಡಿ ಫಿಸಿಬಿಲಿಟಿ ವರದಿ ತಯಾರಿಸಿದ್ದರ ಗುಟ್ಟು ರಟ್ಟಾಗಿದೆ. ಬೇಡ್ತಿಯಿಂದ ವರದಾ ನೀರು ಸಾಗಿಸಬಹುದು, ಆಗ ಅಘನಾಶಿನಿ ನೀರನ್ನು ಬೆಂಗಳೂರಿಗೆ ನೀಡಬಹುದು ಎಂಬ ನೀರಾವರಿ ಪರಿಣತರ ಹುನ್ನಾರ ಇದಾಗಿದೆ.
ವೃಕ್ಷಲಕ್ಷ ಆಂದೋಲನದ ತಜ್ಞರ ತಂಡ ಈ ವಿಶ್ಲೇಷಣೆ ಮಾಡಿದೆ.
 
ಇದೀಗ ಅಘನಾಶಿನಿ ನದೀ ತಿರುವು ಯೋಜನೆ ಫಿಸಿಬಿಲಿಟಿ ವರದಿ ಬೆಂಗಳೂರಿನಿಂದ ದೆಹಲಿ ತಲುಪಿದೆ. ಕೇಂದ್ರ ಸರ್ಕಾರದ ನೀರಾವರಿ ಇಲಾಖೆ ಕೈಯಲ್ಲಿದೆ. ಪರಿಶೀಲನೆ ನಂತರ ಅಲ್ಲಿಂದ ಈ ವರದಿ ರಾಜ್ಯ ನೀರಾವರಿ ಇಲಾಖೆಗೆ ಬರಲಿದೆ, ಇದು ರಾಜ್ಯ ಸರ್ಕಾರ ಜಾರಿ ಮಾಡಬೇಕಾದ ಯೋಜನೆ ಆಗಿರುತ್ತದೆ.|

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 4
Sad Sad 0
Wow Wow 0