ಯಲ್ಲಾಪುರದ ಅರಬೈಲ್ ಬಳಿ ಲಾರಿಗೆ ಡಿಕ್ಕಿ, ಚಾಲಕ ಸೇರಿ ಆರು ಸಾವು – ನಾಲ್ವರಿಗೆ ಗಂಭೀರ ಗಾಯ
ಆಪ್ತ ನ್ಯೂಸ್ ಯಲ್ಲಾಪುರ:
ಧರ್ಮಸ್ಥಳ ಹಾಗೂ ಚಿಕ್ಕಮಗಳೂರಿಗೆ ಪ್ರವಾಸಕ್ಕಾಗಿ ಅಂಕೋಲಾ ಮಾರ್ಗವಾಗಿ ತೆರಳುತ್ತಿದ್ದ ಧಾರವಾಡ ಮೂಲದ ಸ್ನೇಹಿತರ ತಂಡದ ಕ್ರೂಸರ್ ವಾಹನ ರಾಷ್ಟ್ರೀಯ ಹೆದ್ದಾರಿ-52ರಲ್ಲಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ, ವಾಹನ ಚಾಲಕ ಸೇರಿ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಮುಂಜಾನೆ ಯಲ್ಲಾಪುರ ತಾಲೂಕಿನ ಅರಬೈಲ್ ಬಳಗಾರ್ ಕ್ರಾಸ್ ಸಮೀಪ ನಡೆದಿದೆ.
ಮೃತರನ್ನು ಸಂಜೀವ್ ಮುರಳೀಧರ ಅಂಗಡಿ (33), ಕುರುಬಗಟ್ಟಿ, ಧಾರವಾಡ, ಅಕ್ಷಯ ತೇಜಪ್ಪ ಮುರಳವರ, ಅಭಿಷೇಕ, ಈಶ್ವರ, ಅಭಿಷೇಕ ಮಲ್ಲೇಶ ಮಡಬಾವಿ, ಬಸಪ್ಪ ದೇವಪ್ಪ ಕನನವರ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಶಿವರಾಜ್ ಗುರುಪ್ಪ ಮಡಿವಾಳಕರ, ಸಚಿನ್, ಚೆನ್ನಬಸು ಸಂಬರಗೊಂದಿಮಠ ಹಾಗೂ ಮುನ್ನಾಧಿ ಚೌಕಳಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮುರುಳೀಧರ ಅಭಿಷೇಕ್, ಅಭಿಷೇಕ್ ಮಲ್ಲಪ್ಪ ಮಡಿವಾಳ ಹಾಗೂ ಬಸಪ್ಪ ದೇವಪ್ಪ ಕನಕನ್ನವರ ಸೇರಿದಂತೆ ಇತರರಿಗೆ ಗಾಯಗಳಾಗಿವೆ.
ಪೊಲೀಸರು ನೀಡಿದ ಮಾಹಿತಿಯಂತೆ, ಜುಲೈ 9ರಂದು ಮುಂಜಾನೆ ಸುಮಾರು 1.30 ಗಂಟೆ ವೇಳೆಗೆ ಕೆಎ-19/ಎನ್-5920 ಸಂಖ್ಯೆಯ ಕ್ರೂಸರ್ ವಾಹನದಲ್ಲಿ ಧಾರವಾಡ ಮೂಲದ ಸ್ನೇಹಿತರ ತಂಡ ಧರ್ಮಸ್ಥಳ ಹಾಗೂ ಚಿಕ್ಕಮಗಳೂರಿಗೆ ಪ್ರವಾಸಕ್ಕಾಗಿ ಹೊರಟಿದ್ದ ತಂಡ ಅಂಕೋಲಾ ಕಡೆಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಯಲ್ಲಾಪುರ ತಾಲೂಕಿನ ಅರಬೈಲ್ ಬಳಗಾರ್ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ-52ರಲ್ಲಿ ಎದುರಿನಿಂದ ಬರುತ್ತಿದ್ದ ಕೆಎ-22/ಎನ್-1008 ಸಂಖ್ಯೆಯ ಲಾರಿಗೆ ವಾಹನ ಡಿಕ್ಕಿ ಹೊಡೆದಿದೆ.
ಪ್ರಾಥಮಿಕ ತನಿಖೆಯಲ್ಲಿ, ಚಾಲಕ ಸಂಜೀವ್ ಮುರಳೀಧರ ಅಂಗಡಿ ಅವರು ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿರುವ ಸಾಧ್ಯತೆ ವ್ಯಕ್ತವಾಗಿದೆ. ಡಿಕ್ಕಿಯ ರಭಸಕ್ಕೆ ಕ್ರೂಸರ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾಹನದಲ್ಲಿದ್ದ ಇತರ ಪ್ರಯಾಣಿಕರು ಗಂಭೀರ ಹಾಗೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಯಲ್ಲಾಪುರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡರು. ಗಾಯಾಳುಗಳನ್ನು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ವ್ಯವಸ್ಥೆ ಮಾಡಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಗಾಯಾಳು ಶಿವರಾಜ್ ಗುರುಪ್ಪ ಮಡಿವಾಳಕರ ನೀಡಿದ ದೂರಿನ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ದುರ್ಘಟನೆಯಿಂದ ಧಾರವಾಡ ಮೂಲದ ಸ್ನೇಹಿತರ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಪ್ರವಾಸದ ಸಂತಸದ ಕ್ಷಣಗಳು ಕ್ಷಣಾರ್ಧದಲ್ಲೇ ದುರಂತವಾಗಿ ಮಾರ್ಪಟ್ಟಿವೆ.
What's Your Reaction?
Like
0
Dislike
0
Love
1
Funny
0
Angry
1
Sad
2
Wow
0



