ಸೇತುವೆ ನಿರ್ಮಾಣವೆಂಬುದು ಪುಣ್ಯದ ಕೆಲಸ: ಪದ್ಮಶ್ರೀ ಗಿರೀಶ್ ಭಾರಧ್ವಾಜ ಅವರ ಸಂದರ್ಶನ
ಗಿರೀಶ್ ಭಾರದ್ವಾಜ್ ಅವರು ಸುಳ್ಯದವರಾದರೂ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ ಮನೆಯಲ್ಲೂ ಚಿರಪರಿಚಿತರು. ಸದ್ಯ ಡೋಂಗ್ರಿ ವ್ಯಾಪ್ತಿಯಲ್ಲಿ ತೂಗು ಸೇತುವೆ ನಿರ್ಮಿಸುತ್ತಿರುವ ಇವರಿಗೆ ಜನ 'ಶತ ಸೇತುವೆ ಸರದಾರ' ಎಂದು ಪ್ರೀತಿಯಿಂದ ಕರೆಯುತ್ತಾರೆ. ಇವರಿಗೆ ಪದ್ಮಶ್ರೀ ಪುರಸ್ಕಾರ ಲಭಿಸಿರುವುದು ಅಲ್ಲಿನ ಜನರಿಗೆ ಹೇಳಲಾರದಷ್ಟು ಸಂಭ್ರಮ ತಂದಿದೆ. ಹಳ್ಳಿ-ಹಳ್ಳಿಗಳಲ್ಲಿ ಅಂಥ ಅಭಿಮಾನಿಗಳನ್ನು ಹೊಂದಿದ ಸರಳಜೀವಿ, ಕಾಯಕಯೋಗಿ, ಮಾಡುವ ಕೆಲಸದಲ್ಲಿ ದೇವರನ್ನು ಕಾಣುವ ಗಿರೀಶ್ ಭಾರದ್ವಾಜ್ ಅವರು ಪದ್ಮಶ್ರೀ ಗೌರವ ಲಭಿಸಿದ ನಂತರ, ತಾವು ನಿರ್ಮಿಸುತ್ತಿರುವ 128ನೇ ತೂಗು ಸೇತುವೆಯ ಕಾಮಗಾರಿ ಸ್ಥಳದಲ್ಲಿಯೇ ಮಾತಿಗೆ ಸಿಕ್ಕರು. ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಸಂದರ್ಶನ: ಹೆಗ್ಗಾರ ಪ್ರಶಾಂತ
ಪ್ರಶಸ್ತಿ ಬಂದುದರ ಬಗ್ಗೆ ಅಭಿಪ್ರಾಯ ಹೇಳಿ.
ಪ್ರಶಸ್ತಿಯ ನಿರೀಕ್ಷೆ ಖಂಡಿತವಾಗಿಯೂ ಇರಲಿಲ್ಲ. ಸರಕಾರವೇ ನೇರವಾಗಿ ನನ್ನನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ತುಂಬಾ ಸಂತಸ ತಂದಿದೆ. ಗ್ರಾಮಾಂತರ ಪ್ರದೇಶದಲ್ಲಿ ಸೇತುವೆ ನಿರ್ಮಿಸಿದಾಗ, ಗ್ರಾಮಸ್ಥರು ನನ್ನನ್ನು ಬೀಳ್ಕೊಡುವಾಗ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಸೇತುವೆ ನಿರ್ಮಿಸಿದ ಬಗ್ಗೆ ಧನ್ಯವಾದ ಹೇಳುವುದಿದೆಯಲ್ಲ, ಅದೇ ನನಗೆ ದೊಡ್ಡ ಪ್ರಶಸ್ತಿ. ಸೇತುವೆ ನಿರ್ಮಾಣ ಎಂಬ ಕೆಲಸದಲ್ಲಿಯೇ ತೃಪ್ತಿ ಕಾಣುತ್ತಿದ್ದೇನೆ. ಈ ಊರಿನಲ್ಲಿ ಕೆಲಸ ಮಾಡುತ್ತಿರುವಾಗಲೇ ಪದ್ಮಶ್ರೀ ಪ್ರಶಸ್ತಿ ಬಂದದ್ದು ವಿಶೇಷ. ಇದರಲ್ಲಿ ನನ್ನದು ಎಂಬುದು ಯಾವುದೂ ಇಲ್ಲ, ಎಲ್ಲ ದೇವರು ನಡೆಸಿದಂತೆ. ಈ ಜನರ ಪ್ರೀತಿ-ವಿಶ್ವಾಸ, ಸಹೋದ್ಯೋಗಿಗಳ(ತಮ್ಮ ಕೆಲಸಗಾರರನ್ನು ಸಹೋದ್ಯೋಗಿಗಳು ಎಂದೇ ಸಂಬೋಧಿಸುತ್ತಾರೆ) ಸಹಕಾರವೇ ಇಷ್ಟು ಎತ್ತರಕ್ಕೇರಲು ಕಾರಣವಾಯಿತು. (ಅಷ್ಟರಲ್ಲಿ ಅವರನ್ನು ಅಭಿನಂದಿಸಲು ಬಂದಿದ್ದ ಸಮೀಪದ ಗ್ರಾಮದ ನೂರಾರು ಯುವಕರು ಮತ್ತು ನಾಗರಿಕರು, 'ನೀವು ದೇವರಿದ್ದಂತೆ' ಎಂದು ಹೇಳಿದ್ದಲ್ಲದೇ ಭಾರದ್ವಾಜರ ಪಾದ ಮುಟ್ಟಿ ನಮಸ್ಕರಿಸಿದರು).
ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿ..
ಜೀವನ ನಡೆಸಿಕೊಂಡು ಹೋಗಲು ಸುಳ್ಯದಲ್ಲಿ ಒಂದು ವರ್ಕ್ ಶಾಪ್ ಇದೆ. 70-75 ಕೆಲಸಗಾರರು ನಮ್ಮಲ್ಲಿ ಕೆಲಸ ಮಾಡುತ್ತಾರೆ. ಎಲ್ಲರನ್ನೂ ನಾವು ಗೌರವದಿಂದ ಕಾಣುತ್ತೇವೆ. ಆಯ್ಕೆ ಉಸ್ತುವಾರಿ 20-25 ಜನರನ್ನು ಸೇತುವೆ ನಿರ್ಮಾಣ ಕೆಲಸಕ್ಕೆ ಒಯ್ಯುತ್ತೇನೆ. ನಾನು ಸೇತುವೆ ಕೆಲಸಕ್ಕೆ ಬಂದಾಗ ಮಗ ವರ್ಕ್ ಶಾಪ್ ನೋಡಿಕೊಳ್ಳುತ್ತಾನೆ. ಸಣ್ಣ ಸಣ್ಣ ನಟ್ ಬೋಲ್ಟ್‌ಗಳಿಂದ ಹಿಡಿದು, ಪ್ರತಿ ಚಿಕ್ಕ-ದೊಡ್ಡ ಕೆಲಸಗಳನ್ನು ನೇರವಾಗಿ ನಾನೇ ಖುದ್ದು ಪರಿಶೀಲನೆ ಮಾಡುತ್ತೇನೆ. ಗುಣಮಟ್ಟವನ್ನು ಕಾಯ್ದುಕೊಂಡು ಹೋಗುತ್ತೇನೆ. ಸೇತುವೆಯೆಂಬುದು ಜನ ಜೀವನವನ್ನು ಬೆಸೆಯುವ ವಿಷಯವಾದ್ದರಿಂದ ಎಲ್ಲಿಯೂ ತಪ್ಪು ನುಸುಳದಂತೆ ಕ್ರಮ ವಹಿಸಿ, ನಿರ್ಮಾಣ ಸ್ಥಳದಲ್ಲಿಯೇ ಇದ್ದು ಕಾಮಗಾರಿ ನೋಡಿಕೊಳ್ಳುತ್ತೇನೆ. ಇದರಿಂದಾಗಿ ನನ್ನೊಡನೆ ಕೆಲಸ ಮಾಡುವವರಿಗೂ ಸಹ ಹುಮ್ಮಸ್ಸು ಬರುತ್ತದಲ್ಲದೆ, ಕಾಮಗಾರಿಯ ಗುಣಮಟ್ಟವೂ ಹೆಚ್ಚುತ್ತದೆ.
ಇಲ್ಲಿಯವರೆಗೆ ನಿರ್ಮಿಸಿದ ಸೇತುವೆಗಳಲ್ಲಿ ತುಂಬ ಖುಷಿ ಕೊಟ್ಟ ಸೇತುವೆ ಯಾವುದು?
ಹಾಗೇನಿಲ್ಲ, ಎಲ್ಲ ಗ್ರಾಮಾಂತರ ಸೇತುವೆಗಳೂ ತುಂಬಾ ಖುಷಿ ಕೊಟ್ಟಿವೆ. ಗ್ರಾಮಾಂತರ ಪ್ರದೇಶದಲ್ಲಿ, ಹಳ್ಳಿಗಳಲ್ಲಿ ಕೆಲಸ ಮಾಡುವಾಗ ನೆಮ್ಮದಿ ಹುಟ್ಟಿಸುತ್ತದೆ. ಹಳ್ಳಿ ಜನರಲ್ಲಿ ಮಾನವೀಯತೆ ಜಾಸ್ತಿ. ಅಂಥ ಹಳ್ಳಿಗಳಲ್ಲಿ ಕೆಲಸ ಮಾಡುವಾಗ ಜನರ ಪ್ರೀತಿ, ವಿಶ್ವಾಸ ಲಭ್ಯವಾಗಿದೆ. ಆಗಿಲ್ಲ ಕೆಲಸ ಶ್ರಮದಾಯಕ, ಕಷ್ಟ ಅಂತ ಅನ್ನಿಸುವುದೇ ಇಲ್ಲ. ಸೇತುವೆ ನಿರ್ಮಾಣ ಎಂಬುದು ಊರುಗಳ ಮಧ್ಯೆ ಇರುವ ವೈಷಮ್ಯವನ್ನು ತೊಡೆದು ಹಾಕಿ ಒಂದಾಗಿಸುತ್ತದೆ. ಎರಡು ಊರುಗಳ ನಡುವೆ ಬಾಂಧವ್ಯ ಬೆಸೆಯುತ್ತದೆ, ಎರಡು ಊರುಗಳ ಮನಸ್ಸುಗಳನ್ನು ಬೆಸೆಯುವ ಕಾರ್ಯ ಮಾಡುತ್ತದೆ. ಹಾಗಾಗಿ ಸೇತುವೆ ನಿರ್ಮಾಣದ ಕೆಲಸವನ್ನು ಪುಣ್ಯದ ಕೆಲಸ ಎಂದು ಭಾವಿಸಿದ್ದೇನೆ. (ಇದೇ ಸಂದರ್ಭದಲ್ಲಿ ರಾಮಾಯಣದ ಪ್ರಸಂಗವನ್ನು ಉಲ್ಲೇಖಿಸಿ ಗುಹನು ಶ್ರೀರಾಮನನ್ನು ನದಿ ದಾಟಿಸಿದ ಪ್ರಸಂಗವನ್ನು ಪ್ರಸ್ತುತಕ್ಕೆ ಹೋಲಿಸಿ ವಿವರಿಸಿದರು) ಎಷ್ಟೋ ಕಡೆ ಗ್ರಾಮಾಂತರ ಪ್ರದೇಶದಲ್ಲಿ ಉದ್ಯೋಗ ಒಂದು ಕಡೆಯಾದರೆ ಮಧ್ಯೆಯಲ್ಲಿ ತುಂಬಿ ಹರಿಯುವ ನದಿ/ಹೊಳೆ/ ಹಳ್ಳದ ಕಾರಣದಿಂದ ಉದ್ಯೋಗಿ ಇನ್ನೆಲ್ಲೋ ಇರುತ್ತಾನೆ. ಶಾಲೆ ಒಂದೆಡೆಯಾದರೆ, ವಿದ್ಯಾರ್ಥಿ ಇನ್ನೆಲ್ಲೋ ಇರುತ್ತಾನೆ. ಇವರೆಲ್ಲರನ್ನೂ ಒಂದೆಡೆ ಸೇರುವಂತೆ ಮಾಡುವುದೇ ಸೇತುವೆಗಳ ಕೆಲಸ. ಹೊಳೆ ದಾಟಲಾರದೇ ಹೊಳೆಯ ದಡದಲ್ಲೇ ರಾತ್ರಿ ಪೂರ್ತಿ ಮಲಗಿ ಬೆಳಗು ಮಾಡಿದವರನ್ನೂ ನಾನು ಕಂಡಿದ್ದೇನೆ. ಹಾಗಾಗಿ ಸೇತುವೆ ನಿರ್ಮಾಣವನ್ನು ದೇವರೇ ಜನಸೇವೆಗಾಗಿ ಕೊಟ್ಟ ಅವಕಾಶವೆಂದು ಭಾವಿಸಿದ್ದೇನೆ.
ಇಲ್ಲಿಯವರೆಗೆ ಒಟ್ಟು ಎಷ್ಟು ಸೇತುವೆಗಳನ್ನು ನಿರ್ಮಿಸಿದ್ದೀರಿ?
ಇದುವರೆಗೆ ಒಟ್ಟು 127 ಸೇತುವೆಗಳನ್ನು ನಿರ್ಮಿಸಿದ್ದೇವೆ. ಈಗ ಡೋಂಗ್ರಿಯಲ್ಲಿ ನಿರ್ಮಾಣವಾಗುತ್ತಿರುವುದು 128ನೆಯದು. ಅವುಗಳಲ್ಲಿ 3 ಆಂಧ್ರ ಪ್ರದೇಶ, 3 ಒರಿಸ್ಸಾ, 32 ಕೇರಳ ಮತ್ತು 90 ಕರ್ನಾಟಕದಲ್ಲಿ. ಮೊದಲು ನಿರ್ಮಿಸಿದ 12 ಸೇತುವೆಗಳಿಗೆ ಕಾಂಕ್ರೀಟ್ ಪಿಲ್ಲರ್ ಗಳಿರಲಿಲ್ಲ. ಅವುಗಳನ್ನು ಸಮೀಪದ ಮರಗಳನ್ನು ಆಧರಿಸಿ ನಿರ್ಮಿಸಲಾಗಿತ್ತು. ಯಾವುದೇ ಸೇತುವೆಯನ್ನೂ ಅರ್ಧಕ್ಕೆ ಮೊಟಕುಗೊಳಿಸಿಲ್ಲ. ಕಂಬದಿಂದ ಕಂಬಕ್ಕೆ ಅತ್ಯಂತ ಉದ್ದದ ಸೇತುವೆ ಯಲ್ಲಾಪುರ ತಾಲೂಕಿನ ಶಿವಪುರದ ಬಳಿ ಕಾಳೀ ನದಿಗೆ ನಿರ್ಮಿಸಿದ, 236 ಮೀಟರ್ ಉದ್ದದ ಸೇತುವೆ. ಉಳಿದಂತೆ ಒಟ್ಟು ಉದ್ದದಲ್ಲಿ ಅತಿ ಉದ್ದದ ಸೇತುವೆಯೆಂದರೆ ಅದು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ನಿರ್ಮಿಸಿದ 292 ಮೀಟರ್ ಉದ್ದದ ಸೇತುವೆ. ಒರಿಸ್ಸಾದಲ್ಲಿಯೂ 230 ಮೀಟರ್ ಉದ್ದದ ಸೇತುವೆಯೊಂದನ್ನು ನಿರ್ಮಿಸಿದ್ದೇವೆ.
ಇಷ್ಟು ವರ್ಷಗಳ ಅನುಭವದಲ್ಲಿ ಸೇತುವೆ ನಿರ್ಮಾಣ ಕಷ್ಟದ ಕೆಲಸ ಎಂದು ಯಾವತ್ತಾದರೂ ಅನಿಸಿದೆಯಾ?
ಹಾಗೇನೂ ಅನಿಸಿಲ್ಲ. ಕಷ್ಟ ಎಂದು ಯಾವುದನ್ನೂ ಅರ್ಧಕ್ಕೆ ಬಿಟ್ಟಿಲ್ಲ. ಕೆಲಸ ಮಾಡುವಾಗ ಕೆಲವಡೆ ಋಣಾತ್ಮಕ ಶಕ್ತಿ ಎದುರಾಗುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ದೇವರ ಶಕ್ತಿ ಹೊಂದುವ ಬಗ್ಗೆ ಗಮನ ವಹಿಸುತ್ತೇನೆ. ನಾವೆಲ್ಲ ನೆಪ ಮಾತ್ರಕ್ಕೆ. ದೇವರು ನಡೆಸಿದಂತೆ ನಾವೆಲ್ಲ ನಡೆಯಬೇಕು. ಒರಿಸ್ಸಾದಲ್ಲಿನ ವಾತಾವರಣ ಕೆಲ ತೊಂದರೆಯನ್ನು ಕೊಟ್ಟಿತ್ತು. ಈಗೆಲ್ಲ ತುಕ್ಕು ನಿರೋಧಕ ಜಿ ಐ ಸಾಮಗ್ರಿಗಳನ್ನು ಬಳಸಿ ಸೇತುವೆ ನಿರ್ಮಾಣ ಮಾಡುತ್ತೇವೆ. ಗ್ರಾಮೀಣ ಭಾಗದ ಅವಶ್ಯಕತೆಗೆ ಅನುಗುಣವಾಗಿ ವಿನ್ಯಾಸಗಳನ್ನು ಬದಲಾಯಿಸಿ ಕೊಳ್ಳುತ್ತೇವೆ. ಯಾವುದೇ ಉದ್ಯೋಗ ಅಥವಾ ವ್ಯವಹಾರವನ್ನು ಜನಸೇವೆಗಿರುವ ಅವಕಾಶವೆಂದೇ ತಿಳಿಯಬೇಕು. ಮಾಡುವುದನ್ನೇ ಚೆನ್ನಾಗಿ ಮಾಡಿದರೆ ಅದೇ ದೇವರಿಗೆ ಸಲ್ಲಿಸುವ ದೊಡ್ಡ ಸೇವೆ. ಹಳ್ಳಿಗಳಲ್ಲಿ ಜನರ ಪ್ರೀತಿ, ವಿಶ್ವಾಸ ಸಿಗುವುದರಿಂದ ಯಾವುದೂ ಕಷ್ಟವೆಂದು ಅನ್ನಿಸುವುದಿಲ್ಲ. ಅಲ್ಲದೆ ನಾನೇ ಸ್ವತಃ ಸ್ಥಳದಲ್ಲಿರುವುದರಿಂದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಅನುಕೂಲವಾಗುತ್ತದೆ.
****
ಗಿರೀಶ್ ಭಾರದ್ವಾಜರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ. 1973ರಲ್ಲಿ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ಅವರು ಆಯುಶಿಲ್ಪ, ಭಾರತ ಗ್ರಾಮ ಸಂಪರ್ಕ ನಿರ್ಮಾಣ ಎಂಬ ಹೆಸರಿನ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೂಲಕ ಗ್ರಾಮೀಣ ಭಾಗದ ಸಂಪರ್ಕ ರಹಿತ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಿಕೊಡಲು ತೂಗು ಸೇತುವೆಗಳನ್ನು ನಿರ್ಮಿಸುತ್ತಾರೆ. ಇವರು ನಿರ್ಮಿಸುವ ತೂಗು ಸೇತುವೆಗಳು ಸಾಂಪ್ರದಾಯಿಕ ಸೇತುವೆಗಳಿಗಿಂತ ಕಡಿಮೆ ವೆಚ್ಚದಾಯಕವಾಗಿದ್ದು ಉತ್ತಮ ಗುಣಮಟ್ಟದ್ದಾಗಿರುತ್ತವೆ. ಸ್ವತಃ ಇವರೇ ನಿಂತು ಪ್ರತಿ ಸೇತುವೆಗಳನ್ನು ನಿರ್ಮಿಸುವುದು ಇವರ ಅತೀ ವಿಶಿಷ್ಟವಾದ ಗುಣ. ಸಂದರ್ಶನದಂದು ಕೂಡ ಡೋಂಗ್ರಿ ಗ್ರಾಮದಲ್ಲಿ ಗಂಗಾವಳಿ ನದಿಗೆ ನಿರ್ಮಿಸುತ್ತಿರುವ ಸೇತುವೆ ಉಸ್ತುವಾರಿ ನೋಡಿಕೊಳ್ಳುತ್ತಾ, ಕಾರ್ಮಿಕರೊಂದಿಗೆ ಕಾರ್ಮಿಕರಾಗಿ ತಾವೂ ಕೆಲಸದ ಸ್ಥಳದಲ್ಲಿಯೇ ಉಳಿದು ಕಾಮಗಾರಿಯ ಗುಣಮಟ್ಟದಲ್ಲಿ ಲೋಪವಾಗದಂತೆ ನೋಡಿಕೊಳ್ಳುತ್ತಿದ್ದರು. ಕೆಲಸದವರಿಗಾಗಿ ನಿರ್ಮಿಸಿದ ತಾಡಿನ ಶೆಡ್‌ನಲ್ಲಿಯೇ ಕಾಮಗಾರಿ ಮುಗಿಯುವವರೆಗೂ ವಾಸ್ತವ್ಯ ಹೂಡುತ್ತಾರೆ.
****
(ಗಿರೀಶ್ ಭಾರಧ್ವಾಜ ಅವರಿಗೆ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿದ ಸಂದರ್ಭದಲ್ಲಿ ಅವರನ್ನು ಸಂದರ್ಶಿಸಿದ ಸಂಪೂರ್ಣ ವಿವರ ಇಲ್ಲಿದೆ ನೋಡಿ)
ಭಾರದ್ವಾಜರು ಭಾವುಕರು ಮತ್ತು ಅಪಾರ ದೈವ ಭಕ್ತಿ ತಮ್ಮವರಿರುವವರನ್ನು ಗೌರವದಿಂದ ಕಾಣುವ ಹಿರಿಯರು. ಅವರೊಂದಿಗೆ ಒಡನಾಡಿದ ಯಾರೂ ಅವರನ್ನು ಗುತ್ತಿಗೆದಾರ ಎಂದು ಕರೆಯಲಾರರು. ಇವರು ಸುಳ್ಯ ತಾಲೂಕಿನವರಾದರೂ ಡೋಂಗ್ರಿ- ಸುಂಕಸಾಳ ಗ್ರಾಮಸ್ಥರು 'ನಮ್ಮ ಇವರು. ನಮ್ಮೆಲ್ಲರ ಭಾಗ್ಯದಿಂದಾಗಿ ದಾಸ ಸಾಕ್ಷಾತ್ ಶ್ರೀರಾಮಚಂದ್ರ' ಎಂದು ಕೊಂಡಾಡಿದ್ದು ಯಾವುದೇ ಅತಿಶಯೋಕ್ತಿ ಅಲ್ಲ. ಅಂಥ ಕಾಯಕ ಪ್ರೀತಿಯ 'ಶತ ಸೇತುವೆ ಸರದಾರ'ನಿಗೆ ಸರಕಾರ ಕೊಟ್ಟ ಪದ್ಮಶ್ರೀ ಪ್ರಶಸ್ತಿ ಯಥಾ ಯೋಗ್ಯವಾಗಿದೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



