ಚೀನಾದಲ್ಲಿ ಉತ್ತರ ಕನ್ನಡದ ಶಿವಾಜಿ ಮಿಂಚು: U-23 ಏಷ್ಯನ್ ಅಥ್ಲೆಟಿಕ್ಸ್‌ನಲ್ಲಿ 5000 ಮೀ. ಓಟದಲ್ಲಿ ಬೆಳ್ಳಿ ಪದಕ

Jul 10, 2026 - 18:25
 0  59
ಚೀನಾದಲ್ಲಿ ಉತ್ತರ ಕನ್ನಡದ ಶಿವಾಜಿ ಮಿಂಚು: U-23 ಏಷ್ಯನ್ ಅಥ್ಲೆಟಿಕ್ಸ್‌ನಲ್ಲಿ 5000 ಮೀ. ಓಟದಲ್ಲಿ ಬೆಳ್ಳಿ ಪದಕ

ಆಪ್ತ ನ್ಯೂಸ್ ಹಳಿಯಾಳ:

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬೆಳವಟಗಿ ಗ್ರಾಮದ ಪ್ರತಿಭಾವಂತ ಅಥ್ಲೀಟ್ ಕು. ಶಿವಾಜಿ ಮಾದಪ್ಪಗೌಡ ಅವರು ಚೀನಾದಲ್ಲಿ ನಡೆಯುತ್ತಿರುವ U-23 ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 5000 ಮೀಟರ್ ಓಟದಲ್ಲಿ ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದು ಭಾರತ, ಕರ್ನಾಟಕ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ.

ಗ್ರಾಮೀಣ ಹಿನ್ನೆಲೆಯಿಂದ ಬೆಳೆದು ಬಂದ ಶಿವಾಜಿ ಮಾದಪ್ಪಗೌಡ ಅವರ ಈ ಸಾಧನೆ ಜಿಲ್ಲೆಯ ಯುವ ಕ್ರೀಡಾಪಟುಗಳಿಗೆ ಹೊಸ ಸ್ಫೂರ್ತಿಯಾಗಿದೆ. ನಿರಂತರ ಪರಿಶ್ರಮ, ಕಠಿಣ ಅಭ್ಯಾಸ ಹಾಗೂ ಸಾಧಿಸುವ ಛಲದ ಫಲವಾಗಿ ಅವರು ಈ ಮಹತ್ವದ ಯಶಸ್ಸು ದಾಖಲಿಸಿದ್ದು, ಜಿಲ್ಲೆಯ ಕ್ರೀಡಾ ವಲಯದಲ್ಲಿ ಸಂಭ್ರಮ ಮನೆಮಾಡಿದೆ.

ಈ ಅಮೋಘ ಸಾಧನೆಗೆ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರು ಅಭಿನಂದನೆ ಸಲ್ಲಿಸಿದ್ದಾರೆ. "ಗ್ರಾಮೀಣ ಪ್ರತಿಭೆಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಬಲ್ಲದು ಎಂಬುದನ್ನು ಶಿವಾಜಿ ತಮ್ಮ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ. ಅವರ ಈ ಯಶಸ್ಸು ಉತ್ತರ ಕನ್ನಡ ಜಿಲ್ಲೆಯ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕವಾಗಿದೆ. ಮುಂದಿನ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿಯೂ ಚಿನ್ನದ ಪದಕ ಗೆದ್ದು ಭಾರತ ಮತ್ತು ಕರ್ನಾಟಕದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ" ಎಂದು ಶುಭ ಹಾರೈಸಿದ್ದಾರೆ.

ಶಿವಾಜಿ ಮಾದಪ್ಪಗೌಡ ಅವರ ಈ ಸಾಧನೆಗೆ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು, ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಅಭಿನಂದನೆಗಳ ಮಹಾಪೂರ ಹರಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1