ಬರಹ- ಹರಿಪ್ರಕಾಶ ಕೋಣೆಮನೆ
****
ಕ್ಷಮಿಸಿಬಿಡಿ ಕುಮಾರಸ್ವಾಮಿಗಳೇ …
ಬೇಡ್ತಿ,ಗಂಗಾವಳಿ,ಅಘನಾಶಿನಿ,ವರದಾ ಮತ್ತು ವೇದಾವತಿ ತಿರುವು ಯೋಜನೆ ವಿರೋಧಿಸಿ ನಿನ್ನೆ ಯಲ್ಲಾಪುರದಲ್ಲಿ ನಡೆದ ಹೆದ್ದಾರಿ ತಡೆ ಚಳವಳಿ ಸಂದರ್ಭದಲ್ಲಿ ಹಿರಿಯ ಆರ್ಥಿಕ ಮತ್ತು ಪರಿಸರ ತಜ್ಞ ಪ್ರೊ. ಬಿಎಂ ಕುಮಾರಸ್ವಾಮಿ ಅವರು ಆಡಿದ ಮಾತಿಗೆ ಸಂಬಂಧಿಸಿ ಸಾರ್ವಜನಿಕ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ.
ನಾವು ಸಂಘಟಕರು ಆರಂಭದಲ್ಲೇ ಸ್ಪಷ್ಟಪಡಿಸಿದಂತೆ ನಿನ್ನೆಯ ಹೋರಾಟ ಜನಶಕ್ತಿಯ ಹೋರಾಟವೇ ಹೊರತು,ಜನಪ್ರತಿನಿಧಿ ಕೇಂದ್ರಿತ ಹೋರಾಟ ಆಗಿರಲಿಲ್ಲ.
ಪ್ರೊ. ಬಿಎಂ ಕುಮಾರಸ್ವಾಮಿ ಅವರನ್ನು ಪೂಜ್ಯ ಗುರುಗಳ ಸೂಚನೆಯಂತೆ ಅಧಿಕೃತವಾಗಿ ಈ ಸಭೆಗೆ ಆಹ್ವಾನಿಸಲಾಗಿತ್ತು.
ಕಳೆದ ಜನೆವರಿಯಲ್ಲಿ ಅಂದರೆ ಹತ್ತು ತಿಂಗಳ ಹಿಂದೆ ಇದೇ ಯೋಜನೆ ವಿರೋಧಿಸಿ ಶಿರಸಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲೂ ಪ್ರೊ.ಕುಮಾರಸ್ವಾಮಿ ಅವರು ಸ್ಪಷ್ಟವಾಗಿ, ನಿಖರವಾಗಿ ಮಾತನಾಡಿದ್ದರು.
ಅಲ್ಲಿಂದ ಇಲ್ಲಿಯವರೆಗೆ ಯೋಜನೆ ಜಾರಿಗೆ ಸಂಬಂಧಿಸಿ ಪ್ರಗತಿ ಆಗಿದೆಯೇ ಹೊರತು, ಯೋಜನೆ ತಡೆಗೆ ಸಣ್ಣ ಭರವಸೆಯೂ ಸಿಗದ ಹಿನ್ನೆಲೆಯಲ್ಲಿ ಪ್ರೊ.ಅವರು ಸಾತ್ವಿಕ ಸಿಟ್ಟು ನಮ್ಮೆಲ್ಲರ ಪ್ರತಿನಿಧಿಯಾಗಿ ತೋಡಿಕೊಂಡಿದ್ದರು.
ನಾವು ಪಾಳೇಗಾರರ ಆಡಳಿತದಲ್ಲಿ ಇಲ್ಲ, ನಾವು ಪ್ರಜಾತಂತ್ರ ಮತ್ತು ವಾಕ್ ಸ್ವಾತಂತ್ರ್ಯದ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂಬ ಅರಿವಿರುವವರು ತಾಳ್ಮೆಯಿಂದ ಕೇಳಿಸಿಕೊಂಡು ಆರೋಗ್ಯಪೂರ್ಣ ಚರ್ಚೆ ಮಾಡಬಹುದಿತ್ತು.
ಉದಾಹರಣೆಗೆ ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ಮೈಕ್ ಕೈಕೊಟ್ಟಾಗ ತಾಳ್ಮೆಯಿಂದ ಕಾದರು, ಅತ್ಯಂತ ಸ್ಪಷ್ಟವಾಗಿ ತಮ್ಮ ನಿಲುವು ಮಂಡಿಸಿದರು.
ಶಿರಸಿ ಶಾಸಕ ಭೀಮಣ್ಣ ಅವರು ಕೂಡ ಸಲಹಾತ್ಮಕವಾಗಿ ಭಾಷಣ ಮಾಡಿದರು. ಜಿಲ್ಲೆಯ ಜನ ಪ್ರತಿನಿಧಿಗಳು ಏನು ಮಾಡುತ್ತೀರಿ? ಖಚಿತವಾಗಿ ಹೇಳಿ ಎಂದು ವಿನಂತಿ ಮಾಡಿಕೊಂಡಾಗ ಅತ್ಯಂತ ಜವಾಬ್ದಾರಿಯಿಂದ ವರ್ತಿಸಿ ನಾವೆಲ್ಲ ಕೂಡಿ ಮುಂದಡಿ ಇಡುತ್ತೇವೆ ಎಂದರು.
ಇದ್ದಕ್ಕಿದ್ದ ಹಾಗೆ ಪ್ರೊ.ಕುಮಾರಸ್ವಾಮಿ ಅವರ ಮಾತಿಗೆ ತಡೆಯೊಡ್ಡಿ,ಮೈಕ್ ಕಸಿದುಕೊಂಡು ಸಾತ್ವಿಕ ಪ್ರತಿಭಟನೆಗೆ ಸೇರಿದ್ದ ಸಹಸ್ರಾರು ಜನರಿಗೆ,ಇಡಿ ಪರಿಸರ ಹೋರಾಟಕ್ಕೆ ಅಪಮಾನ ಆಗುವ ಅನಪೇಕ್ಷಿತ ಸನ್ನಿವೇಶ ನಡೆದುಹೋಯಿತು!
ಅಷ್ಟಕ್ಕೂ ಪ್ರೊ.ಕುಮಾರಸ್ವಾಮಿ ಅವರು ಆಡಿದ ಮಾತಾದರೂ ಏನು? ಕಳೆದ ಒಂದೂವರೆ ವರ್ಷದಿಂದ ಪೂಜ್ಯ ಸ್ವಾಮೀಜಿಯವರ ಕಳವಳ ಅರ್ಥ ಮಾಡಿಕೊಳ್ಳದೆ ಜಪ್ರತಿನಿಧಿಗಳು ಕಾಲಹರಣ ಮಾಡಿದ್ದು ಸುಳ್ಳೇನು?
ಯೋಜನೆ ಜಾರಿ ಪ್ರಕ್ರಿಯೆ ಪ್ರಗತಿಯಲ್ಲಿ ಇರುವುದು ಅಸತ್ಯವೇ?
ನೀರಿಲ್ಲದ ನದಿಯಿಂದ ನೀರು ಹರಿಸುವ ನದಿ ತಿರುವು ಯೋಜನೆ ಹಗಲು ದರೋಡೆ ಅಲ್ಲವೇನು?
“ಕುಂಬಳ ಕಾಯಿ” ಕಳ್ಳನ ಪ್ರಸಂಗ ಯಾಕೆ ಬಂತು?! ಬೇಲಿ ಹಾರುವ ಜಾಯಮಾನಕ್ಕೆ ಸಾಕ್ಷಿ ಯಲ್ಲಾಪುರ ಅಥವಾ ಉಕ ಜಿಲ್ಲೆಯ ಜನರಿಗೆ ಪುರಾವೆ ಬೇಕೇ?
ಕಂಡದ್ದು ಕೇಳಿದರೆ ಕೆಂಡದಂಥ ಕೋಪವೇ?
ನಿಮ್ಮ ಆಂಗಿಕ ಭಾಷೆ,ನೀವಾಡಿದ ಮಾತು…
ನಿಮಗೇ ಭೂಷಣ!!!
ಛೇ…ಛೇ…ಛೇ..
ಆದ ಘಟನೆಗೆ ಪ್ರೊ.ಕುಮಾರಸ್ವಾಮಿ ಅವರಲ್ಲಿ ತಲೆತಗ್ಗಿಸಿ ಕ್ಷಮೆ ಕೇಳಿದೆ…
ಬನ್ನಿ ಹರಿಪ್ರಕಾಶ್ ಒಂದೊಳ್ಳೆ ಕಾಫಿ ಕುಡಿಯುವ ಎಂದರು, ಸಾಕ್ಷಿಗೆ ಕಾರವಾರದ ಪತ್ರಕರ್ತರೂ ಇದ್ದರು.
ಕಾಫಿ ಕುಡಿಯುತ್ತಾ ಅವರು ಏನೆಂದರು ಗೊತ್ತಾ? ಹೋರಾಟಗಾರನಿಗೆ ಮಾನ ಅಪಮಾನದ ಭಾವ ಇರಬಾರದು, ಸಮ್ಮಾನವನ್ನಂತೂ ನಿರೀಕ್ಷೆ ಮಾಡಲೇಬಾರದು, ಹಿಂತಿರುಗಿ ನೋಡಿದರೆ ಈ ದಿನ ಸಾರ್ಥಕ ಎನ್ನುವಂತಿರಬೇಕು, ಯೋಚನೆ ಮಾಡಬೇಡಿ.
15 ಸಾವಿರ ಜನರ ಪ್ರೀತಿ ವಿಶ್ವಾಸ ಕೆಚ್ಚು ನನಗೆ ಸಾಕು ಎಂದರು,ನಗುತ್ತಲೇ ಕಾರು ಹತ್ತಿದರು.
ಕುಮಾರಸ್ವಾಮಿ ಅವರ ಜೀವನದ ಬಗ್ಗೆ ಹೇಳುವುದಾದರೆ ಅವರು ಬರೀ ಬುರುಡೆ ಭಾಷಣಕಾರರಲ್ಲ. ಸರಳ, ಸಜ್ಜನ, ವಿಚಾರಿಕ ಬದ್ಧತೆಯ 86 ವರ್ಷಗಳ ಸುದೀರ್ಘ ಜೀವನ ಸವೆಸಿದವರು.
ಕಟ್ಟಾ ಸ್ವದೇಶಿ ಆರ್ಥಿಕ ಚಿಂತಕರು. ಸ್ವದೇಶಿ ಜಾಗರಣ ಮಂಚ್ ನ ರಾಷ್ಟ್ರೀಯ ಮಂಡಳಿಯಲ್ಲಿ ಸಕ್ರಿಯರು. ಅವರ ಊರು ಶಿವಮೊಗ್ಗ ಆದರೂ ಪರಿಸರಕ್ಕಾಗಿ ಅವರ ಕಾರ್ಯಕ್ಷೇತ್ರ ಶಿವಮೊಗ್ಗ,ಉತ್ತರಕನ್ನಡ,ಚಿಕ್ಕಮಗಳೂರು,ಕೊಡಗು.
ಈ ಜಿಲ್ಲೆಯ ಕಾಡುಮೇಡನ್ನು ಅವರು ತಿರುಗಾಟ ನಡೆಸಿದಷ್ಟು ಬೇರೆ ಇನ್ನೊಬ್ಬರು ಮಾಡಿರಲು ಸಾಧ್ಯವೇ ಇಲ್ಲ.ಈ ಜಿಲ್ಲೆಗಳ ಜೀವ ವೈವಿಧ್ಯ ದಾಖಲೀಕರಣಕ್ಕೆ ಅವರು ಸ್ವತಃ ಕಾಡುಮೇಡು ಅಲೆದಾಡಿದ್ದಾರೆ.ಈ ಜಿಲ್ಲೆಯ ಎಲ್ಲ ಪರಿಸರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು.ನದಿಗಳ ಸ್ವಚ್ಛತೆ,ಪುರುಜ್ಜೀವನಕ್ಕೆ ಈಗಲೂ ಹಗಲಿರುಳು ದುಡಿಯುತ್ತಿಯುವವರು.
ಸ್ವದೇಶಿಗಾಗಿ ಅವರ ಕಾರ್ಯಕ್ಷೇತ್ರ ಇಡಿ ಭಾರತ ದೇಶ. ಸಾಕ್ಷಿ ಪುರಾವೆ ಇಲ್ಲದೆ ಬರೀ ಭಾಷಣ ಮಾಡುವವರೂ ಅಲ್ಲ.
ಅವರ ಸರಳತೆಗೆ, ಪ್ರಾಮಾಣಿಕತೆಗೆ ಮತ್ತು ಪಾರದರ್ಶಕತೆಗೆ ಒಂದು ಉದಾಹರಣೆ ಸಾಕಾದೀತು.
ಕೆಲ ವರ್ಷಗಳ ಹಿಂದೆ ಪ್ರೊ.ಕುಮಾರಸ್ವಾಮಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂತು. ಪ್ರಶಸ್ತಿ ಜೊತೆಗೆ ನಗದು ಕೊಡುತ್ತಾರಲ್ಲ. ಮನೆಯವರೆಲ್ಲ ಆ ನಗದಿನಲ್ಲಿ ಸಂಭ್ರಮಾಚರಣೆಗೆ ಯೋಜನೆ ರೂಪಿಸಿದ್ದರು. ಅದಕ್ಕಾಗಿ ಪ್ರಶಸ್ತಿ ನಗದನ್ನು ಕುಮಾರಸ್ವಾಮಿ ಅವರಲ್ಲಿ ಕೇಳಿದರೆ ಅದಾಗಲೇ ಖರ್ಚಾಯಿತಲ್ಲ ಎಂದು ಹೇಳಿದರು. ಅದೇನು? ಚೆಕ್ ನಗದಾಗುವ ಮೊದಲು ಖರ್ಚಾಗಿದ್ದು ಹೇಗೆ ಎಂದು ಪ್ರಶ್ನೆ ಮಾಡಿದಾಗ ಗೊತ್ತಾದದ್ದು ಅಷ್ಟೇ ಮೊತ್ತವನ್ನು ಅವರ ಅಕೌಂಟಿಂದ ಅಗತ್ಯ ಇರುವವರಿಗೆ ದಾನಮಾಡಿಬಿಟ್ಟಿದ್ದರು!
86 ವರ್ಷ, ಮೂರೂ ಹೊತ್ತು ಇನ್ಸುಲಿನ್ ತೆಗೆದುಕೊಳ್ಳುತ್ತಾರೆ. ಅಂಥ ಹಿರಿಯ ವ್ಯಕ್ತಿ ಯಲ್ಲಾಪುರದ ಹೋರಾಟಕ್ಕೂ ತಮ್ಮದೇ ಖರ್ಚಿನಲ್ಲಿ ಒಂದು ದಿನ ಮುಂಚಿತವಾಗಿ ಬಂದು ತಂಗಿದ್ದರು. ಬಿಸಿಲಲ್ಲಿ ಕುಳಿತರು, ಬಿಸಿಲಲ್ಲಿ ನಡೆದರು. ಹಸಿವು ಮರೆತು ಕುಳಿತರು. ನಮ್ಮಿಂದ ಅವರಿಗೆ ಕನಿಷ್ಠ ಕುಡಿಯುವ ನೀರನ್ನೂ ಕೊಡಲಾಗಲಿಲ್ಲ. ಅದನ್ನು ಯಾವುದನ್ನೂ ಅವರು ನಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ.
ಕೊನೆಗೆ ನಮ್ಮಿಂದ ನಿಮ್ಮನ್ನು ಕನಿಷ್ಠ ಗೌರವದಿಂದ ನಡೆಸಿಕೊಳ್ಳಲೂ ಆಗಲಿಲ್ಲ.
ಕ್ಷಮಿಸಿ ಕುಮಾರಸ್ವಾಮಿಗಳೇ …
ಕ್ಷಮಿಸಿ …
ನಿಮ್ಮ ಮಾತು ಪೂರ್ತಿ ಕೇಳಬೇಕಿತ್ತು…