ತಾಳಗುಪ್ಪ–ಶಿರಸಿ–ಹುಬ್ಬಳ್ಳಿ ರೈಲ್ವೆ ಮಾರ್ಗದಲ್ಲಿ ಮಹತ್ವದ ಬದಲಾವಣೆ ಆಯ್ತಾ? ಸೊರಬ ಮೂಲಕ ರೈಲು ಮಾರ್ಗ ಸಾಗಲಿದೆ ಎಂಬ ಪೋಸ್ಟರ್‌ ವೈರಲ್‌; ಸಂಸದ ಬಿ.ವೈ. ರಾಘವೇಂದ್ರಗೆ ಅಭಿನಂದನೆಗಳ ಸುರಿಮಳೆ!

Nov 5, 2026 - 11:53
 0  158
ತಾಳಗುಪ್ಪ–ಶಿರಸಿ–ಹುಬ್ಬಳ್ಳಿ ರೈಲ್ವೆ ಮಾರ್ಗದಲ್ಲಿ ಮಹತ್ವದ ಬದಲಾವಣೆ ಆಯ್ತಾ? ಸೊರಬ ಮೂಲಕ ರೈಲು ಮಾರ್ಗ ಸಾಗಲಿದೆ ಎಂಬ ಪೋಸ್ಟರ್‌ ವೈರಲ್‌; ಸಂಸದ ಬಿ.ವೈ. ರಾಘವೇಂದ್ರಗೆ ಅಭಿನಂದನೆಗಳ ಸುರಿಮಳೆ!
ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಪೋಸ್ಟರ್

ಆಪ್ತ ವಿಶೇಷ

ಆಪ್ತ ನ್ಯೂಸ್ ಶಿರಸಿ:

ತಾಳಗುಪ್ಪ–ಸಿದ್ದಾಪುರ–ಶಿರಸಿ–ಹುಬ್ಬಳ್ಳಿ ರೈಲ್ವೆ ಮಾರ್ಗದ ಕುರಿತು ಹೊಸ ಚರ್ಚೆಯೊಂದು ಇದೀಗ ಮುನ್ನೆಲೆಗೆ ಬಂದಿದೆ. ಪ್ರಸ್ತಾವಿತ ರೈಲ್ವೆ ಮಾರ್ಗದಲ್ಲಿ ಬದಲಾವಣೆಯಾಗಿದ್ದು, ತಾಳಗುಪ್ಪ–ಸಿದ್ದಾಪುರ–ಸೊರಬ–ಶಿರಸಿ–ಹುಬ್ಬಳ್ಳಿ ಮಾರ್ಗವಾಗಿ ರೈಲು ಸಂಚರಿಸಲಿದೆ ಎಂಬ ಸಂದೇಶಗಳು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಹರಿದಾಡುತ್ತಿವೆ. ಈ ಸಂಬಂಧದ ಪೋಸ್ಟರ್‌ಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುವ ಪೋಸ್ಟ್‌ಗಳು ವೈರಲ್‌ ಆಗುತ್ತಿವೆ.

ಸೊರಬಕ್ಕೆ ರೈಲು ಮಾರ್ಗ ಎಂಬ ಸಂಭ್ರಮ; ಉತ್ತರ ಕನ್ನಡದಲ್ಲಿ ಆತಂಕ!

ಸೊರಬ ಭಾಗಕ್ಕೆ ರೈಲ್ವೆ ಮಾರ್ಗ ಮಂಜೂರಾಗಿದೆ ಎಂಬ ಸುದ್ದಿಯಿಂದ ಅಲ್ಲಿನ ಜನರಲ್ಲಿ ಸಂತಸ ಮೂಡಿದೆ. ಆದರೆ ಈ ಬೆಳವಣಿಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ–ಸಿದ್ದಾಪುರ ಭಾಗದಲ್ಲಿ ಹೊಸ ಆತಂಕ ಹಾಗೂ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ತಾಳಗುಪ್ಪ–ಸಿದ್ದಾಪುರ–ಶಿರಸಿ–ಹುಬ್ಬಳ್ಳಿ ರೈಲ್ವೆ ಮಾರ್ಗವು ಸೊರಬದ ಮೂಲಕ ಹಾದುಹೋಗುವುದಿಲ್ಲ ಎಂಬ ಅಭಿಪ್ರಾಯವನ್ನು ಈ ಹಿಂದೆ ಸ್ಥಳೀಯ ಜನಪ್ರತಿನಿಧಿಗಳು ಹಲವು ಬಾರಿ ವ್ಯಕ್ತಪಡಿಸಿದ್ದರು. ವಿವಿಧ ಸಾರ್ವಜನಿಕ ಕಾರ್ಯಕ್ರಮಗಳು, ಸಭೆಗಳು ಹಾಗೂ ಪತ್ರಿಕಾ ಹೇಳಿಕೆಗಳಲ್ಲಿಯೂ ಇದೇ ವಿಚಾರವನ್ನು ಸ್ಪಷ್ಟಪಡಿಸುತ್ತ ಬಂದಿದ್ದರು. ಇದನ್ನೇ ನಂಬಿಕೊಂಡು ಶಿರಸಿ–ಸಿದ್ದಾಪುರ ಭಾಗದ ಜನರು ಈ ರೈಲ್ವೆ ಮಾರ್ಗದ ನಿರೀಕ್ಷೆಯಲ್ಲಿದ್ದರು.

ಆದರೆ ಇದೀಗ ಸೊರಬ ಮೂಲಕ ರೈಲ್ವೆ ಮಾರ್ಗ ಸಾಗಲಿದೆ ಎಂಬ ಪೋಸ್ಟರ್‌ಗಳು ಕಾಣಿಸಿಕೊಳ್ಳುತ್ತಿರುವುದು ಹಿಂದಿನ ಹೇಳಿಕೆಗಳ ಸತ್ಯಾಸತ್ಯತೆ ಕುರಿತು ಪ್ರಶ್ನೆ ಮೂಡಿಸಿದೆ. ನಿಜವಾಗಿಯೂ ರೈಲ್ವೆ ಮಾರ್ಗದ ಬದಲಾವಣೆಯಾಗಿದೆಯೇ? ಅಥವಾ ಇದು ಕೇವಲ ಪ್ರಚಾರದ ಭಾಗವೇ? ಸೊರಬಕ್ಕೆ ರೈಲ್ವೆ ಮಾರ್ಗ ಮಂಜೂರಾಗಿರುವುದರ ಹಿಂದೆ ಇರುವ ಅಧಿಕೃತ ನಿರ್ಧಾರವೇನು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ಉತ್ತರ ಕನ್ನಡದ ಜನಪ್ರತಿನಿಧಿಗಳು ಮೌನ ಮುರಿಯಬೇಕಿದೆ!

ಈ ಬೆಳವಣಿಗೆಯಿಂದಾಗಿ ಶಿರಸಿ–ಸಿದ್ದಾಪುರ ಭಾಗದ ಜನರಲ್ಲಿ ಮತ್ತೊಮ್ಮೆ ಗೊಂದಲ ಸೃಷ್ಟಿಯಾಗಿದೆ. ಹಲವು ವರ್ಷಗಳಿಂದ ನಿರೀಕ್ಷೆಯಲ್ಲಿರುವ ರೈಲ್ವೆ ಮಾರ್ಗದ ವಿಚಾರದಲ್ಲಿ ಜನರ ಭಾವನೆಗಳೊಂದಿಗೆ ಆಟವಾಡುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಂಸದರು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ತಕ್ಷಣವೇ ಸ್ಪಷ್ಟನೆ ನೀಡಬೇಕಿದೆ. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ ರೈಲ್ವೆ ಮಾರ್ಗದ ಸ್ವರೂಪದಲ್ಲಿ ಬದಲಾವಣೆಯಾಗಿದೆಯೇ ಎಂಬುದನ್ನು ಅಧಿಕೃತವಾಗಿ ತಿಳಿದುಕೊಳ್ಳುವ ಅಗತ್ಯವಿದೆ.

ಕೇವಲ ಅಭಿನಂದನೆಗಳು, ಪೋಸ್ಟರ್‌ಗಳು ಮತ್ತು ರಾಜಕೀಯ ಹೇಳಿಕೆಗಳಿಗಿಂತ ರೈಲ್ವೆ ಇಲಾಖೆಯ ಅಧಿಕೃತ ದಾಖಲೆಗಳೇ ಮುಖ್ಯ. ಪ್ರಸ್ತಾವಿತ ಮಾರ್ಗದ ನಕ್ಷೆ, ಅಂತಿಮ ಸಮೀಕ್ಷೆ ಹಾಗೂ ರೈಲ್ವೆ ಇಲಾಖೆಯ ನಿರ್ಧಾರವನ್ನು ಸಾರ್ವಜನಿಕರ ಮುಂದಿಡುವ ಮೂಲಕ ಜನರಲ್ಲಿರುವ ಗೊಂದಲಕ್ಕೆ ತೆರೆ ಎಳೆಯಬೇಕು.

ರೈಲ್ವೆ ಮಾರ್ಗ ಯಾರ ಪಾಲಾಗಲಿದೆ ಎಂಬುದಕ್ಕಿಂತ, ಉತ್ತರ ಕನ್ನಡದ ಜನರ ಬಹುಕಾಲದ ನಿರೀಕ್ಷೆಗೆ ಏನಾಗಲಿದೆ ಎಂಬುದೇ ಈಗಿನ ಪ್ರಮುಖ ಪ್ರಶ್ನೆ!

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0