ಯಲ್ಲಾಪುರದ ಪ್ರತಿಭಟನಾ ವೇದಿಕೆಯಲ್ಲೇ ಜನಪ್ರತಿನಿಧಿ–ವಿಜ್ಞಾನಿ ನಡುವೆ ಜಟಾಪಟಿ!

ಭಾಷಣ ಮಾಡುವ ಜನಪ್ರತಿನಿಧಿಗಳು ಕೇವಲ ಭರವಸೆ ನೀಡುತ್ತಿದ್ದಾರೆ ಎಂದು ವಿಜ್ಞಾನಿ ಕುಮಾರಸ್ವಾಮಿ | “ನಿಮ್ಮ ಒರಟು ಮಾತುಗಳು ನಮಗೆ ಬೇಡ” ಎಂದ ಹೆಬ್ಬಾರ್; “ಯೋಜನೆ ನಿಲ್ಲಿಸಲು ನಿಮ್ಮ ಹಿರಿತನ ಬಳಸಿ” ಎಂದು ಕಾಗೇರಿ ತಿರುಗೇಟು

Nov 3, 2026 - 20:04
 0  376
ಯಲ್ಲಾಪುರದ ಪ್ರತಿಭಟನಾ ವೇದಿಕೆಯಲ್ಲೇ ಜನಪ್ರತಿನಿಧಿ–ವಿಜ್ಞಾನಿ ನಡುವೆ ಜಟಾಪಟಿ!

ಆಪ್ತ ನ್ಯೂಸ್ ಯಲ್ಲಾಪುರ:

ಬೇಡ್ತಿ–ವರದಾ ನದಿ ತಿರುವು ಯೋಜನೆ ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆಯ ವೇಳೆ ಸಾವಿರಾರು ಜನರ ಎದುರೇ ವಿಜ್ಞಾನಿ ಬಿ.ಎಂ. ಕುಮಾರಸ್ವಾಮಿ ಹಾಗೂ ಜನಪ್ರತಿನಿಧಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಜನಪ್ರತಿನಿಧಿಗಳ ವಿರುದ್ಧ ಕುಮಾರಸ್ವಾಮಿ ಅವರು ಮಾಡಿದ ಟೀಕೆಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಶಿವರಾಮ ಹೆಬ್ಬಾರ್ ಹಾಗೂ ಭೀಮಣ್ಣ ನಾಯ್ಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತಿಭಟನಾ ವೇದಿಕೆಯಲ್ಲೇ ಪರಸ್ಪರ ವಾಗ್ವಾದಕ್ಕೆ ಕಾರಣವಾಯಿತು.

ಜನಪ್ರತಿನಿಧಿಗಳ ವಿರುದ್ಧ ಕುಮಾರಸ್ವಾಮಿ ಕಿಡಿ

ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಮಂಗಳವಾರ ಬೆಳಗ್ಗೆ ಯಲ್ಲಾಪುರದ ಟಿಎಂಎಸ್ ಎದುರು ಬಹಿರಂಗ ಸಭೆ ನಡೆಯಿತು. ಬಳಿಕ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಸಂಕಲ್ಪ ಹೋಟೆಲ್ ಎದುರು ಜಮಾಯಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ವಿಜ್ಞಾನಿ ಬಿ.ಎಂ. ಕುಮಾರಸ್ವಾಮಿ, ಯೋಜನೆಯ ವಿರುದ್ಧ ಜನಪ್ರತಿನಿಧಿಗಳು ಸ್ಪಷ್ಟ ನಿಲುವು ಪ್ರಕಟಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಇಲ್ಲಿ ಭಾಷಣ ಮಾಡುವ ಜನಪ್ರತಿನಿಧಿಗಳು ಕೇವಲ ಭರವಸೆ ನೀಡುತ್ತಿದ್ದಾರೆ. ತಮ್ಮ ನಿಲುವನ್ನು ಸ್ಪಷ್ಟಪಡಿಸದೆ ಅಸಹಾಯಕರಂತೆ ವರ್ತಿಸುತ್ತಿದ್ದಾರೆ. ನಿಮ್ಮ ರಾಜಕೀಯ ಭವಿಷ್ಯ ಸರಿಯಾಗಿರಬೇಕಾದರೆ ಸ್ಪಷ್ಟ ನಿಲುವು ಪ್ರಕಟಿಸಿ” ಎಂದು ಅವರು ಆಗ್ರಹಿಸಿದರು.

ಕುಮಾರಸ್ವಾಮಿ ಅವರ ಮಾತಿನ ಧಾಟಿಗೆ ವೇದಿಕೆಯ ಹಿಂದಿದ್ದ ಕೆಲವರು ಆಕ್ಷೇಪ ವ್ಯಕ್ತಪಡಿಸಿ, ಇಂತಹ ಮಾತುಗಳನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ, ತಮ್ಮ ಮಾತು ಮುಂದುವರಿಸಿದ ಅವರು, “ನಾನು ಮಾತನಾಡುವುದೇ ಒರಟು. ಅದನ್ನು ಸಹಿಸಿಕೊಳ್ಳಬೇಕು” ಎಂದರು. ಇದರಿಂದ ವೇದಿಕೆಯಲ್ಲಿದ್ದ ಜನಪ್ರತಿನಿಧಿಗಳ ಅಸಮಾಧಾನ ಮತ್ತಷ್ಟು ಹೆಚ್ಚಾಯಿತು.

“ನಿಮ್ಮ ಒರಟು ಮಾತುಗಳು ನಮಗೆ ಬೇಡ” ಎಂದ ಹೆಬ್ಬಾರ್

ಕುಮಾರಸ್ವಾಮಿ ಅವರ ಮಾತಿಗೆ ತಕ್ಷಣ ಪ್ರತಿಕ್ರಿಯಿಸಿದ ಶಾಸಕ ಶಿವರಾಮ ಹೆಬ್ಬಾರ್, “ನಿಮ್ಮ ಒರಟು ಮಾತುಗಳು ನಮಗೆ ಬೇಡ. ವಾಸ್ತವ ವಿಷಯದ ಬಗ್ಗೆ ಮಾತನಾಡಿ” ಎಂದು ತಿರುಗೇಟು ನೀಡಿದರು.

ಶಾಸಕ ಭೀಮಣ್ಣ ನಾಯ್ಕ ಕೂಡ ಅಸಮಾಧಾನ ವ್ಯಕ್ತಪಡಿಸಿ, “ಇಂಥ ಮಾತುಗಳನ್ನು ಕೇಳಲು ನಾವು ಇಲ್ಲಿ ಬಂದಿಲ್ಲ” ಎಂದರು.

ಬಳಿಕ ಮೈಕ್ ಕೈಗೆತ್ತಿಕೊಂಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಜನಪ್ರತಿನಿಧಿಗಳ ಜವಾಬ್ದಾರಿಯನ್ನು ಸಮರ್ಥಿಸಿಕೊಂಡು ವಿಜ್ಞಾನಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.

“ಜನರ ವಿಶ್ವಾಸ ಗಳಿಸಿಯೇ ನಾವು ಜನಪ್ರತಿನಿಧಿಗಳಾಗಿದ್ದೇವೆ. ಜನರನ್ನು ಉಳಿಸಿಕೊಳ್ಳುವುದು ವಿಜ್ಞಾನಿಯಾದ ನಿಮಗಿಂತಲೂ ನಮಗೆ ಮುಖ್ಯ. ನೀವು ಒಂದು ದಿನ ಬಂದು ಭಾಷಣ ಮಾಡಿ ಹೋಗುವವರು ಎಂದು ಜನ ಮಾತನಾಡಬಾರದು ಎಂದಾದರೆ, ನೀವು ಕೂಡ ನಿಮ್ಮ ಹಿರಿತನದ ಪ್ರಭಾವ ಬೀರಿ ಈ ಯೋಜನೆಯನ್ನು ನಿಲ್ಲಿಸಬೇಕು” ಎಂದು ಸವಾಲು ಹಾಕಿದರು.

“ಅವೈಜ್ಞಾನಿಕ ಯೋಜನೆಗಳಿಗೆ ಶಿಫಾರಸು ಮಾಡುವವರೇ ವಿಜ್ಞಾನಿಗಳು”

ತಮ್ಮ ಮಾತು ಮುಂದುವರಿಸಿದ ಕಾಗೇರಿ, ಅವೈಜ್ಞಾನಿಕ ಯೋಜನೆಗಳಿಗೆ ಶಿಫಾರಸು ಮಾಡುವವರೇ ವಿಜ್ಞಾನಿಗಳು ಎಂಬ ಟೀಕೆ ಮಾಡಿದರು.

“ಇಂಥ ಯೋಜನೆಗಳು ಜಾರಿಯಾಗಬೇಕು ಎಂದು ಶಿಫಾರಸು ಮಾಡುವವರೇ ನಿಮ್ಮಂಥ ವಿಜ್ಞಾನಿಗಳು. ಬಳಿಕ ಅದೇ ಯೋಜನೆ ಬೇಡ ಎಂದು ಭಾಷಣ ಮಾಡುತ್ತಾರೆ. ಇದರಿಂದ ಜನಪ್ರತಿನಿಧಿಗಳಿಗೂ ಗೊಂದಲ ಉಂಟಾಗುತ್ತದೆ. ನಾವು ಎಂದಿಗೂ ಜನರ ಧ್ವನಿಯಾಗಿರುತ್ತೇವೆ” ಎಂದು ಹೇಳಿದರು.

ನದಿ ಜೋಡಣೆ ಯೋಜನೆ ವಿರೋಧಿಸಿ ದೆಹಲಿಗೆ ನಿಯೋಗ ಕರೆದೊಯ್ದು ಐವರು ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಈ ವಿಚಾರವನ್ನು ಅಧಿವೇಶನದಲ್ಲಿಯೂ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದ ಅವರು, “ನಾವು ಗುರುಗಳ ನಿರ್ದೇಶನದಂತೆ ಹೋರಾಟ ಮುಂದುವರಿಸುತ್ತಿದ್ದೇವೆ. ವಿಜ್ಞಾನಿಗಳಾದ ನೀವು ಎಲ್ಲೆಲ್ಲಿ, ಏನೇನು ಪ್ರಭಾವ ಬೀರಿದ್ದೀರಿ? ನಿಮ್ಮ ಹಿರಿತನದ ಪ್ರಭಾವ ಬಳಸಿ ಯೋಜನೆಯನ್ನು ನಿಲ್ಲಿಸಿ” ಎಂದು ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದರು.

ಕಾರ್ಖಾನೆಗೆ ನೀರು ಒಯ್ಯುವ ಆರೋಪಕ್ಕೆ ಹೆಬ್ಬಾರ್ ಸ್ಪಷ್ಟನೆ

ಮತ್ತೆ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ್, ವಿಜ್ಞಾನಿಗಳು ತಮ್ಮ ಅನುಭವದ ಆಧಾರದಲ್ಲಿ ಜನರಿಗೆ ಮಾರ್ಗದರ್ಶನ ನೀಡುವುದಕ್ಕೆ ಆಕ್ಷೇಪವಿಲ್ಲ. ಆದರೆ, ಜನಪ್ರತಿನಿಧಿಗಳಿಗೆ ಯಾವುದೇ ಮಹತ್ವವಿಲ್ಲ ಎಂಬ ಧಾಟಿಯ ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

“ಎಲ್ಲ ಜನಪ್ರತಿನಿಧಿಗಳು ಒಂದಾಗಿ ನದಿ ತಿರುವು ಯೋಜನೆ ವಿರುದ್ಧ ಹೋರಾಟ ಮಾಡುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ಹಾವೇರಿಯಲ್ಲಿರುವ ತಮ್ಮ ಕುಟುಂಬಕ್ಕೆ ಸೇರಿದ ಕಾರ್ಖಾನೆಗೆ ನೀರು ಒದಗಿಸಲು ಬೇಡ್ತಿ–ವರದಾ ಯೋಜನೆ ರೂಪಿಸಲಾಗುತ್ತಿದೆ ಎಂಬ ಆರೋಪದ ಬಗ್ಗೆಯೂ ಸ್ಪಷ್ಟನೆ ನೀಡಿದರು. ಆ ಕಾರ್ಖಾನೆಗೂ ನದಿ ತಿರುವು ಯೋಜನೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

“ಚುನಾವಣೆ ಬಂದಾಗ ರಾಜಕಾರಣ ಮಾಡಬೇಕು. ಆದರೆ, ಶ್ರೀಗಳ ನೇತೃತ್ವದಲ್ಲಿ ನಡೆಯುವ ಹೋರಾಟದಲ್ಲಿ ರಾಜಕಾರಣ ಮಾಡಲು ಬರಬಾರದು” ಎಂದು ಹೆಬ್ಬಾರ್ ಆಕ್ರೋಶ ವ್ಯಕ್ತಪಡಿಸಿದರು.

“ಜಿಲ್ಲೆಯ ಭೂಮಿಯ ಧಾರಣಾ ಸಾಮರ್ಥ್ಯದ ಅಧ್ಯಯನವಾಗಲಿ”

ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಯೋಜನೆ ಘೋಷಿಸುವ ಮೊದಲು ಇಲ್ಲಿನ ಭೂಮಿಯ ಧಾರಣಾ ಸಾಮರ್ಥ್ಯದ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಪಾದಿಸಿದರು.

ನದಿ ತಿರುವು ಯೋಜನೆಯ ಜೊತೆಗೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನೂ ಜನರು ವಿರೋಧಿಸಬೇಕು ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಹೇಳಿದರು.

“ಶರಾವತಿ ಯೋಜನೆಯ ಬಗ್ಗೆ ಯಾರೂ ಮಾತನಾಡದಿದ್ದರೂ ನಾನು ಅದರ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದೇನೆ. ಈ ವಿಷಯದ ಬಗ್ಗೆ ಎಲ್ಲರೂ ಸೇರಿ ಅಧಿವೇಶನದಲ್ಲಿ ಮಾತನಾಡೋಣ” ಎಂದು ಅವರು ಒತ್ತಾಯಿಸಿದರು.

“ನಮ್ಮ ಜಿಲ್ಲೆಗೆ ಕುಡಿಯಲು ನೀರಿಲ್ಲ; ಬೇರೆಡೆಗೆ ಹೇಗೆ ಒಯ್ಯುತ್ತೀರಿ?”

ಉತ್ತರ ಕನ್ನಡ ಜಿಲ್ಲೆಯಲ್ಲೇ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇರುವಾಗ ಇಲ್ಲಿನ ನೀರನ್ನು ಬೇರೆಡೆಗೆ ಕೊಂಡೊಯ್ಯುವುದು ಹೇಗೆ ಸಾಧ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಪ್ರಶ್ನಿಸಿದರು.

“ಈ ಅವೈಜ್ಞಾನಿಕ ಯೋಜನೆಯ ವಿರುದ್ಧ ಎಲ್ಲ ಜನಪ್ರತಿನಿಧಿಗಳು ಒಟ್ಟಾಗಿ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸುತ್ತೇವೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನೇತೃತ್ವದಲ್ಲಿ ನಿಯೋಗ ರಚಿಸಿ ಹೋರಾಟ ಮುಂದುವರಿಸುತ್ತೇವೆ” ಎಂದು ಘೋಷಿಸಿದರು.

ಯೋಜನೆ ವಿರೋಧಿ ಹೋರಾಟಕ್ಕೆ ಹೊಸ ತಿರುವು

ಬೇಡ್ತಿ–ವರದಾ ನದಿ ತಿರುವು ಯೋಜನೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಜನಪ್ರತಿನಿಧಿಗಳು ಯೋಜನೆಯ ವಿರುದ್ಧ ತಮ್ಮ ನಿಲುವನ್ನು ಪುನರುಚ್ಚರಿಸಿದರೂ, ವಿಜ್ಞಾನಿ ಬಿ.ಎಂ. ಕುಮಾರಸ್ವಾಮಿ ಅವರ ಮಾತಿನ ಧಾಟಿ ವೇದಿಕೆಯಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಪಶ್ಚಿಮ ಘಟ್ಟದ ಪರಿಸರ, ನದಿಗಳ ಹರಿವು ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನಜೀವನದ ಮೇಲೆ ಯೋಜನೆಯಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ನಡೆಯುತ್ತಿರುವ ಹೋರಾಟದ ನಡುವೆ, ಜನಪ್ರತಿನಿಧಿಗಳು ಮತ್ತು ವಿಜ್ಞಾನಿಗಳ ನಡುವಿನ ಈ ಬಹಿರಂಗ ಮಾತಿನ ಚಕಮಕಿ ಪ್ರತಿಭಟನೆಯ ಪ್ರಮುಖ ಚರ್ಚೆಯ ವಿಷಯವಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0