ಕುಡಿಯುವ ನೀರಿನ ಬಾವಿಯಲ್ಲೇ ಆಯಿಲ್ ಪತ್ತೆ! ಓಂಕಾರ ಕಾಲೋನಿಯ 6 ಕ್ಕೂ ಹೆಚ್ಚು ಮನೆಗಳಿಗೆ ನೀರಿನ ಸಮಸ್ಯೆ; ಗ್ರಾಮಸ್ಥರಲ್ಲಿ ಆತಂಕ

Nov 5, 2026 - 16:41
 0  98
ಕುಡಿಯುವ ನೀರಿನ ಬಾವಿಯಲ್ಲೇ ಆಯಿಲ್ ಪತ್ತೆ! ಓಂಕಾರ ಕಾಲೋನಿಯ 6 ಕ್ಕೂ ಹೆಚ್ಚು ಮನೆಗಳಿಗೆ ನೀರಿನ ಸಮಸ್ಯೆ; ಗ್ರಾಮಸ್ಥರಲ್ಲಿ ಆತಂಕ

ಆಪ್ತ ನ್ಯೂಸ್ ಶಿರಸಿ:

ಕುಡಿಯುವ ನೀರಿನ ಬಾವಿಯಲ್ಲೇ ಎಣ್ಣೆಯ ಪದರ ಕಾಣಿಸಿಕೊಂಡಿದ್ದು, ಆರುಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಕಳೆದೊಂದು ವಾರದಿಂದ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಂಕಾರ ಕಾಲೋನಿಯ ಮೊದಲ ಕ್ರಾಸ್‌ನಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಕಾಲೋನಿಯ ನಿವಾಸಿಗಳ ಕುಡಿಯುವ ನೀರಿನ ಪ್ರಮುಖ ಆಧಾರವಾಗಿರುವ ಬಾವಿಗಳ ನೀರಿನ ಮೇಲ್ಭಾಗದಲ್ಲಿ ಎಣ್ಣೆಯ ದಪ್ಪ ಪದರ ತೇಲುತ್ತಿರುವುದು ಕಂಡುಬಂದಿದೆ. ಇದರಿಂದ ನೀರು ದುರ್ವಾಸನೆಯಿಂದ ಕೂಡಿದ್ದು, ಕುಡಿಯಲು ಮಾತ್ರವಲ್ಲದೆ ಗೃಹಬಳಕೆಗೂ ಬಳಸಲಾಗದ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಒಂದು ವಾರದಿಂದ ಈ ಸಮಸ್ಯೆ ಮುಂದುವರಿದಿದ್ದು, ದಿನನಿತ್ಯದ ಅಗತ್ಯಗಳಿಗಾಗಿ ದೂರದ ಪ್ರದೇಶಗಳಿಂದ ನೀರು ತಂದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿ ಗೋಪಾಲಕೃಷ್ಣ ಭಟ್ ಆಗ್ರಹಿಸಿದ್ದಾರೆ.

ಎಸಳೆ ಗ್ರಿಡ್‌ನಿಂದ ಆಯಿಲ್ ಸೋರಿಕೆಯ ಶಂಕೆ!

ಬಾವಿ ನೀರಿಗೆ ಎಣ್ಣೆಯ ಅಂಶ ಸೇರಿರುವುದರ ಹಿಂದೆ ಸಮೀಪದಲ್ಲಿರುವ ಎಸಳೆ ಗ್ರಿಡ್ ಕಾರಣವಾಗಿರಬಹುದೇ ಎಂಬ ಅನುಮಾನ ಸ್ಥಳೀಯರಲ್ಲಿ ವ್ಯಕ್ತವಾಗಿದೆ. ಗ್ರಿಡ್‌ನ ಟ್ರಾನ್ಸ್‌ಫಾರ್ಮರ್‌ಗಳಿಗೆ ಬಳಸುವ ಆಯಿಲ್ ಸೋರಿಕೆಯಾಗಿ ಅಂತರ್ಜಲದ ಮೂಲಕ ಬಾವಿ ನೀರನ್ನು ಸೇರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರೀತಿ ಶೆಟ್ಟಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಹೆಸ್ಕಾಂ ಎಇಇ ರಾಜುಕೃಷ್ಣ ಬಿಳಗಿ ಅವರನ್ನೂ ಸ್ಥಳಕ್ಕೆ ಕರೆಸಿ ಗ್ರಿಡ್‌ನ ಸ್ಥಿತಿಗತಿಗಳನ್ನು ಪರಿಶೀಲಿಸಲಾಯಿತು. ಆದರೆ, ಗ್ರಿಡ್‌ನಿಂದ ಯಾವುದೇ ರೀತಿಯ ಆಯಿಲ್ ಸೋರಿಕೆ ಅಥವಾ ಚೆಲ್ಲುವಿಕೆ ಕಂಡುಬಂದಿಲ್ಲ ಎಂದು ಹೆಸ್ಕಾಂ ಎಇಇ ಸ್ಪಷ್ಟಪಡಿಸಿದ್ದಾರೆ.

ಪ್ರಾಥಮಿಕ ಪರೀಕ್ಷೆಯಲ್ಲಿ ಕುಡಿಯಲು ಯೋಗ್ಯವಲ್ಲ ಎಂಬ ವರದಿ

ಈಗಾಗಲೇ ಗ್ರಾಮೀಣ ಕುಡಿಯುವ ನೀರು ಇಲಾಖೆಯ ವತಿಯಿಂದ ಬಾವಿ ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಾಥಮಿಕ ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ದೃಢಪಟ್ಟಿದೆ. ನೀರಿಗೆ ಎಣ್ಣೆಯ ಅಂಶ ಹೇಗೆ ಸೇರಿದೆ ಎಂಬುದನ್ನು ಪತ್ತೆಹಚ್ಚಲು ಮಾದರಿಯನ್ನು ಹೆಚ್ಚಿನ ಪ್ರಯೋಗಾಲಯ ಪರೀಕ್ಷೆಗೂ ಕಳುಹಿಸಲಾಗಿದೆ.

ಮುಂದಿನ ಪ್ರಯೋಗಾಲಯ ಪರೀಕ್ಷೆಯ ವರದಿ ಬಂದ ನಂತರವಷ್ಟೇ ನೀರು ಕಲುಷಿತಗೊಳ್ಳಲು ನಿಖರವಾದ ಕಾರಣ ತಿಳಿದುಬರಲಿದೆ ಎಂದು ಪಿಡಿಒ ಪ್ರೀತಿ ಶೆಟ್ಟಿ ತಿಳಿಸಿದ್ದಾರೆ.

ಕುಡಿಯುವ ನೀರಿನ ಮೂಲವೇ ಕಲುಷಿತಗೊಂಡಿರುವುದರಿಂದ ಓಂಕಾರ ಕಾಲೋನಿಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಪರೀಕ್ಷಾ ವರದಿಗಾಗಿ ಕಾಯುವ ಜೊತೆಗೆ, ಸಮಸ್ಯೆಗೆ ಕಾರಣ ಪತ್ತೆಹಚ್ಚಿ ನಿವಾಸಿಗಳಿಗೆ ತಕ್ಷಣ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0