ಹೊನ್ನಾವರದಲ್ಲಿ ದಾರಿ ವಿವಾದ ವಿಕೋಪಕ್ಕೆ: ತಂದೆ-ಮಗನಿಂದ ಕಟ್ಟಿಗೆಯಿಂದ ಹಲ್ಲೆ, ಕೊಲೆ ಬೆದರಿಕೆ!

Oct 30, 2026 - 09:06
 0  119
ಹೊನ್ನಾವರದಲ್ಲಿ ದಾರಿ ವಿವಾದ ವಿಕೋಪಕ್ಕೆ: ತಂದೆ-ಮಗನಿಂದ ಕಟ್ಟಿಗೆಯಿಂದ ಹಲ್ಲೆ, ಕೊಲೆ ಬೆದರಿಕೆ!
ಸಾಂದರ್ಭಿಕ ಚಿತ್ರ

ಆಪ್ತ ನ್ಯೂಸ್ ಹೊನ್ನಾವರ:

ಮನೆಯ ದಾರಿ ವಿಚಾರವಾಗಿ ನೆರೆಮನೆಯವರ ನಡುವೆ ನಡೆದ ವಿವಾದ ವಿಕೋಪಕ್ಕೆ ತಿರುಗಿದ್ದು, ವ್ಯಕ್ತಿಯೊಬ್ಬರ ಮೇಲೆ ತಂದೆ-ಮಗ ಸೇರಿ ಕಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ಘಟನೆ ತಾಲೂಕಿನ ಮರಬಳ್ಳಿಯ ಜಲವಳ್ಳಿಯಲ್ಲಿ ನಡೆದಿದೆ.

ಜಲವಳ್ಳಿಯ ರಮೇಶ ಹಾಗೂ ಅವರ ನೆರೆಮನೆಯ ಮಾದೇವ ಕುಟುಂಬದ ನಡುವೆ ಮನೆಯ ದಾರಿ ವಿಚಾರವಾಗಿ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಬುಧವಾರ ಸಂಜೆ ರಮೇಶ ಅವರು ಮನೆಯ ಬಳಿ ಇದ್ದಾಗ ಮಾದೇವ ಮತ್ತು ಆತನ ಮಗ ಸಂತೋಷ ಅಲ್ಲಿಗೆ ಬಂದು ಅಸಭ್ಯವಾಗಿ ಬೈದು ಗಲಾಟೆ ಆರಂಭಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಲೆಗೆ, ಕಾಲಿಗೆ ಕಟ್ಟಿಗೆಯಿಂದ ಹಲ್ಲೆ ಆರೋಪ

ಮಾತಿನ ಚಕಮಕಿ ತೀವ್ರಗೊಂಡ ಸಂದರ್ಭದಲ್ಲಿ ಮಾದೇವ ಕಟ್ಟಿಗೆಯಿಂದ ರಮೇಶ ಅವರ ತಲೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ಇದೇ ವೇಳೆ ಸಂತೋಷ ಕೂಡ ಕಟ್ಟಿಗೆಯಿಂದ ರಮೇಶ ಅವರ ಎಡಕಾಲಿಗೆ ಹೊಡೆದು ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಹಲ್ಲೆ ನಡೆಸಿದ ಬಳಿಕ, ಮತ್ತೆ ತಮ್ಮ ತಂಟೆಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ತಂದೆ-ಮಗ ಸ್ಥಳದಿಂದ ತೆರಳಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲು

ಘಟನೆಗೆ ಸಂಬಂಧಿಸಿದಂತೆ ಗಾಯಾಳು ರಮೇಶ ಅವರ ಅಣ್ಣನ ಮಗ ಮಾರುತಿ ನೀಡಿದ ದೂರಿನ ಆಧಾರದ ಮೇಲೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ತಂದೆ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ಕುರಿತು ಮುಂದಿನ ಕ್ರಮ ಕೈಗೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1