ಎಥನಾಲ್ ಕ್ರಾಂತಿ: ಬ್ರೆಜಿಲ್‌ನ ಮಾದರಿಯಿಂದ ಭಾರತದ ಎಥನಾಲ್ ಮಿಶ್ರಣ ಕಾರ್ಯಕ್ರಮದವರೆಗೆ
~ಡಾ. ರವಿಕಿರಣ ಪಟವರ್ಧನ.
*****
ಇಂಧನ ಭದ್ರತೆ, ಪರಿಸರ ಸಂರಕ್ಷಣೆ ಮತ್ತು ರೈತರ ಆದಾಯ ಹೆಚ್ಚಳ ಎಂಬ ಮೂರು ಪ್ರಮುಖ ರಾಷ್ಟ್ರೀಯ ಗುರಿಗಳನ್ನು ಒಂದೇ ವೇದಿಕೆಯಲ್ಲಿ ಸಾಧಿಸಲು ಸಾಧ್ಯವೇ? ಈ ಪ್ರಶ್ನೆಗೆ ಜಗತ್ತಿನಲ್ಲಿ ಅತ್ಯಂತ ಯಶಸ್ವಿಯಾದ ಉತ್ತರವೆಂದರೆ ಎಥನಾಲ್ ಮಿಶ್ರಣ ಕಾರ್ಯಕ್ರಮ. ಪೆಟ್ರೋಲ್‌ಗೆ ಸಸ್ಯ ಮೂಲದಿಂದ ತಯಾರಿಸಿದ ಎಥನಾಲ್ ಅನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿ ವಾಹನಗಳಲ್ಲಿ ಬಳಸುವ ಈ ಪರಿಕಲ್ಪನೆಗೆ ಜಗತ್ತಿಗೇ ದಾರಿ ತೋರಿದ್ದು ಬ್ರೆಜಿಲ್. ಅದೇ ಅನುಭವವನ್ನು ಆಧರಿಸಿ ಭಾರತವೂ ತನ್ನದೇ ಆದ ಎಥನಾಲ್ ಮಿಶ್ರಣ ಕಾರ್ಯಕ್ರಮ (Ethanol Blending Programme–EBP) ರೂಪಿಸಿಕೊಂಡಿದ್ದು, ಇಂದು ಇದು ಕೇವಲ ಪರ್ಯಾಯ ಇಂಧನ ಯೋಜನೆಯಲ್ಲ; ದೇಶದ ಇಂಧನ ಸ್ವಾವಲಂಬನೆ, ರೈತರ ಸಮೃದ್ಧಿ, ವಿದೇಶಿ ವಿನಿಮಯ ಉಳಿತಾಯ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ರಾಷ್ಟ್ರೀಯ ಕಾರ್ಯಕ್ರಮವಾಗಿ ಬೆಳೆಯುತ್ತಿದೆ.
ಎಥನಾಲ್ ಕ್ರಾಂತಿಯ ಕಥೆ ಆರಂಭವಾಗುವುದು 1973ರ ಜಾಗತಿಕ ತೈಲ ಬಿಕ್ಕಟ್ಟಿನೊಂದಿಗೆ. ತೈಲದ ಬೆಲೆಗಳು ದಿಢೀರ್ ಏರಿದ ಪರಿಣಾಮ ವಿದೇಶಿ ತೈಲದ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಬ್ರೆಜಿಲ್‌ನ ಆರ್ಥಿಕತೆಗೆ ಭಾರೀ ಹೊಡೆತ ಬಿತ್ತು. ಈ ಸಂಕಷ್ಟವನ್ನು ಅವಕಾಶವನ್ನಾಗಿ ಮಾಡಿಕೊಂಡ ಬ್ರೆಜಿಲ್ ಸರ್ಕಾರ 1975ರಲ್ಲಿ Proálcool (Programa Nacional do Álcool) ಎಂಬ ರಾಷ್ಟ್ರೀಯ ಎಥನಾಲ್ ಕಾರ್ಯಕ್ರಮವನ್ನು ಆರಂಭಿಸಿತು. ವಿಶ್ವದಲ್ಲೇ ಅತಿ ಹೆಚ್ಚು ಕಬ್ಬು ಬೆಳೆಯುವ ರಾಷ್ಟ್ರಗಳಲ್ಲಿ ಒಂದಾಗಿದ್ದ ಬ್ರೆಜಿಲ್, ಕಬ್ಬಿನಿಂದ ಸಕ್ಕರೆಯ ಜೊತೆಗೆ ಎಥನಾಲ್ ಉತ್ಪಾದಿಸಿ ಅದನ್ನು ವಾಹನ ಇಂಧನವಾಗಿ ಬಳಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಿತು.
ಈ ಕಾರ್ಯಕ್ರಮದ ಪ್ರಮುಖ ಉದ್ದೇಶಗಳು ಸ್ಪಷ್ಟವಾಗಿದ್ದವು—ವಿದೇಶಿ ತೈಲ ಆಮದು ಕಡಿಮೆ ಮಾಡುವುದು, ದೇಶೀಯ ಜೈವ ಇಂಧನ ಉತ್ಪಾದನೆ ಹೆಚ್ಚಿಸುವುದು, ಕಬ್ಬು ಬೆಳೆಗಾರರಿಗೆ ಸ್ಥಿರ ಆದಾಯ ಕಲ್ಪಿಸುವುದು ಹಾಗೂ ಇಂಧನ ಸ್ವಾವಲಂಬನೆ ಸಾಧಿಸುವುದು.
ಬ್ರೆಜಿಲ್ ಸರ್ಕಾರ ಕೇವಲ ಯೋಜನೆ ಘೋಷಿಸಿ ಕೈಕಟ್ಟಿ ಕುಳಿತಿಲ್ಲ. ಎಥನಾಲ್ ಉತ್ಪಾದನಾ ಘಟಕಗಳಿಗೆ ಸಹಾಯಧನ ನೀಡಿತು. ಪೆಟ್ರೋಲ್ ಬಂಕ್‌ಗಳಲ್ಲಿ ಎಥನಾಲ್ ಲಭ್ಯವಾಗುವಂತೆ ವ್ಯವಸ್ಥೆ ಮಾಡಿತು. ವಾಹನ ತಯಾರಕರಿಗೆ ಎಥನಾಲ್‌ನಲ್ಲಿ ಕಾರ್ಯನಿರ್ವಹಿಸುವ ಎಂಜಿನ್ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿತು. ತೆರಿಗೆ ರಿಯಾಯಿತಿಗಳ ಮೂಲಕ ಎಥನಾಲ್ ಬೆಲೆಯನ್ನು ಪೆಟ್ರೋಲ್‌ಗಿಂತ ಕಡಿಮೆ ಮಟ್ಟದಲ್ಲಿರಿಸಿ ಜನರನ್ನು ಅದರ ಬಳಕೆಯತ್ತ ಆಕರ್ಷಿಸಿತು.
1980ರ ದಶಕದಲ್ಲಿ ಬ್ರೆಜಿಲ್‌ನಲ್ಲಿ ಮಾರಾಟವಾಗುತ್ತಿದ್ದ ಹೆಚ್ಚಿನ ಹೊಸ ಕಾರುಗಳು ಶೇ.100 ಎಥನಾಲ್‌ನಲ್ಲಿ ಓಡುವಂತೆಯೇ ವಿನ್ಯಾಸಗೊಳಿಸಲ್ಪಟ್ಟಿದ್ದವು. ಆದರೆ ಕೆಲವು ವರ್ಷಗಳಲ್ಲಿ ಕಬ್ಬಿನ ಉತ್ಪಾದನೆ ಕುಸಿದ ಪರಿಣಾಮ ಎಥನಾಲ್ ಕೊರತೆ ಎದುರಾಯಿತು. ಈ ಸಮಸ್ಯೆಗೆ ಪರಿಹಾರವಾಗಿ 2003ರಲ್ಲಿ Flex Fuel Vehicle (FFV) ತಂತ್ರಜ್ಞಾನ ಅಭಿವೃದ್ಧಿಯಾಯಿತು. ಈ ವಾಹನಗಳಲ್ಲಿ ಶೇ.100 ಪೆಟ್ರೋಲ್, ಶೇ.100 ಎಥನಾಲ್ ಅಥವಾ ಎರಡರ ಯಾವುದೇ ಪ್ರಮಾಣದ ಮಿಶ್ರಣವನ್ನು ಬಳಸಬಹುದು. ವಾಹನದಲ್ಲಿರುವ ಎಲೆಕ್ಟ್ರಾನಿಕ್ ವ್ಯವಸ್ಥೆಯೇ ಇಂಧನದ ಪ್ರಮಾಣವನ್ನು ಗುರುತಿಸಿ ಎಂಜಿನ್ ಅನ್ನು ಸ್ವಯಂಚಾಲಿತವಾಗಿ ಹೊಂದಿಸಿಕೊಳ್ಳುತ್ತದೆ.
ಇಂದು ಬ್ರೆಜಿಲ್‌ನ ಬಹುತೇಕ ಹೊಸ ವಾಹನಗಳು Flex Fuel Vehicles ಆಗಿವೆ. ದೇಶದ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಎಥನಾಲ್ ಎರಡೂ ಲಭ್ಯವಿವೆ. ಪೆಟ್ರೋಲ್‌ನಲ್ಲಿ ಸುಮಾರು ಶೇ.27ರಷ್ಟು ಎಥನಾಲ್ ಮಿಶ್ರಣ ಕಡ್ಡಾಯವಾಗಿದೆ. ಇದರ ಪರಿಣಾಮವಾಗಿ ವಿದೇಶಿ ತೈಲದ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆಯಾಗಿದೆ. ಕಬ್ಬು ರೈತರಿಗೆ ಸ್ಥಿರ ಮಾರುಕಟ್ಟೆ ದೊರೆತಿದೆ. ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಿವೆ. ಹಸಿರುಮನೆ ಅನಿಲಗಳ ಹೊರಸೂಸುವಿಕೆ ಇಳಿಕೆಯಾಗಿದೆ. ಜೈವ ಇಂಧನ ಕ್ಷೇತ್ರದಲ್ಲಿ ಬ್ರೆಜಿಲ್ ವಿಶ್ವದ ಮುಂಚೂಣಿ ರಾಷ್ಟ್ರವಾಗಿ ಗುರುತಿಸಿಕೊಂಡಿದೆ.
ಭಾರತವೂ ಬ್ರೆಜಿಲ್‌ನ ಈ ಯಶಸ್ಸಿನಿಂದ ಪಾಠ ಕಲಿತು 2003ರಲ್ಲಿ ಕೆಲವು ರಾಜ್ಯಗಳಲ್ಲಿ ಶೇ.5 ಎಥನಾಲ್ ಮಿಶ್ರಣ ಕಾರ್ಯಕ್ರಮವನ್ನು ಆರಂಭಿಸಿತು. ಆರಂಭದಲ್ಲಿ ಕಾರ್ಯಕ್ರಮದ ಪ್ರಗತಿ ನಿಧಾನವಾಗಿದ್ದರೂ, ನಂತರ ಇದಕ್ಕೆ ವೇಗ ದೊರೆಯಿತು. 2018ರಲ್ಲಿ ರಾಷ್ಟ್ರೀಯ ಜೈವ ಇಂಧನ ನೀತಿ ಜಾರಿಗೆ ಬಂದು ಹೊಸ ಚೈತನ್ಯ ತುಂಬಿತು. 2021ರಲ್ಲಿ 2030ಕ್ಕೆ ನಿಗದಿಯಾಗಿದ್ದ E20 ಗುರಿಯನ್ನು 2025–26ಕ್ಕೆ ಮುಂಚಿತಗೊಳಿಸಲಾಯಿತು. 2022ರಲ್ಲಿ ಶೇ.10 ಎಥನಾಲ್ ಮಿಶ್ರಣದ ಗುರಿಯನ್ನು ನಿಗದಿತ ಅವಧಿಗಿಂತ ಮುಂಚೆಯೇ ಸಾಧಿಸಲಾಯಿತು. 2014ರಲ್ಲಿ ಸುಮಾರು ಶೇ.1.5ರಷ್ಟಿದ್ದ ಮಿಶ್ರಣ ಪ್ರಮಾಣವು ಗಮನಾರ್ಹವಾಗಿ ಏರಿಕೆಯಾಯಿತು.
ಭಾರತದಲ್ಲಿ ಎಥನಾಲ್ ಅನ್ನು ಕೇವಲ ಕಬ್ಬಿನ ಮೊಲಾಸಿಸ್‌ನಿಂದ ಮಾತ್ರವಲ್ಲ, ಕಬ್ಬಿನ ರಸ, ಮೆಕ್ಕೆಜೋಳ, ಹೆಚ್ಚುವರಿ ಅಕ್ಕಿ, ಹಾನಿಗೊಳಗಾದ ಧಾನ್ಯಗಳು ಹಾಗೂ ಇತರ ಕೃಷಿ ಉತ್ಪನ್ನಗಳಿಂದಲೂ ಉತ್ಪಾದಿಸಲಾಗುತ್ತಿದೆ. ಇದರಿಂದ ಕಬ್ಬಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ.
ಭಾರತಕ್ಕೆ ಈ ಕಾರ್ಯಕ್ರಮದಿಂದ ಅನೇಕ ಪ್ರಯೋಜನಗಳಾಗಿವೆ. ದೇಶ ತನ್ನ ಕಚ್ಚಾ ತೈಲದ ಸುಮಾರು ಶೇ.85ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಎಥನಾಲ್ ಬಳಕೆಯಿಂದ 2014ರಿಂದ 2025ರವರೆಗೆ ಸುಮಾರು ₹1.4 ಲಕ್ಷ ಕೋಟಿ ಮೌಲ್ಯದ ವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ಸರ್ಕಾರ ತಿಳಿಸಿದೆ. ಕಬ್ಬು ಹಾಗೂ ಧಾನ್ಯಗಳಿಗೆ ಹೆಚ್ಚುವರಿ ಮಾರುಕಟ್ಟೆ ದೊರೆತಿದ್ದು, ಸಕ್ಕರೆ ಕಾರ್ಖಾನೆಗಳಿಗೆ ಹೊಸ ಆದಾಯದ ಮೂಲ ಸಿಕ್ಕಿದೆ. ರೈತರಿಗೆ ಸಾವಿರಾರು ಕೋಟಿ ರೂಪಾಯಿಗಳ ಪಾವತಿ ಸಾಧ್ಯವಾಗಿದೆ. ಪರಿಸರದ ದೃಷ್ಟಿಯಿಂದಲೂ ಕಾರ್ಬನ್ ಮಾನಾಕ್ಸೈಡ್ ಸೇರಿದಂತೆ ಕೆಲವು ಹಾನಿಕಾರಕ ಅನಿಲಗಳ ಹೊರಸೂಸುವಿಕೆ ಕಡಿಮೆಯಾಗುತ್ತಿದೆ.
ವಾಹನಗಳ ವಿಷಯಕ್ಕೆ ಬಂದರೆ, E10 ಅನ್ನು ಬಹುತೇಕ ಎಲ್ಲಾ ಪೆಟ್ರೋಲ್ ವಾಹನಗಳು ಯಾವುದೇ ಸಮಸ್ಯೆಯಿಲ್ಲದೆ ಬಳಸಬಹುದು. E20ಗೆ ವಿನ್ಯಾಸಗೊಳಿಸಿದ ವಾಹನಗಳಿಗೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಕೆಲವು ಹಳೆಯ ವಾಹನಗಳಲ್ಲಿ ಇಂಧನ ಬಳಕೆ ಸುಮಾರು ಶೇ.3ರಿಂದ 7ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಎಥನಾಲ್‌ನ ಶಕ್ತಿಮೌಲ್ಯ ಪೆಟ್ರೋಲ್‌ಗಿಂತ ಕಡಿಮೆ ಇರುವುದರಿಂದ ಮೈಲೇಜ್‌ನಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಾಣಬಹುದು. ಕೆಲವು ಹಳೆಯ ವಾಹನಗಳ ರಬ್ಬರ್ ಮತ್ತು ಪ್ಲಾಸ್ಟಿಕ್ ಭಾಗಗಳ ಮೇಲೆಯೂ ದೀರ್ಘಾವಧಿಯಲ್ಲಿ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಆದರೆ ಈ ಯೋಜನೆಗೆ ಸವಾಲುಗಳೂ ಇಲ್ಲವೆಂದಲ್ಲ. ಕಬ್ಬು ಹೆಚ್ಚು ನೀರು ಬಳಸುವ ಬೆಳೆ. ಆಹಾರ ಧಾನ್ಯಗಳನ್ನು ಇಂಧನಕ್ಕೆ ಬಳಸುವುದು ಸೂಕ್ತವೇ ಎಂಬ ಚರ್ಚೆ ನಡೆಯುತ್ತಿದೆ. ದೇಶದಾದ್ಯಂತ ಸಾಕಷ್ಟು ಎಥನಾಲ್ ಉತ್ಪಾದನೆ ಹಾಗೂ ಸಾಗಣೆ ವ್ಯವಸ್ಥೆ ನಿರ್ಮಿಸಬೇಕಿದೆ. ಎಲ್ಲ ಹಳೆಯ ವಾಹನಗಳೂ E20ಗೆ ಸಂಪೂರ್ಣ ಹೊಂದಿಕೆಯಾಗುವುದಿಲ್ಲ.
ಈ ಹಿನ್ನೆಲೆಯಲ್ಲಿ ಭಾರತ ಈಗ ಎರಡನೇ ತಲೆಮಾರಿನ ಅಥವಾ 2G ಎಥನಾಲ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಕೃಷಿ ತ್ಯಾಜ್ಯ, ಕಬ್ಬಿನ ಕಸ, ಅಕ್ಕಿ ಹುಲ್ಲು ಮುಂತಾದ ವಸ್ತುಗಳಿಂದ ಎಥನಾಲ್ ಉತ್ಪಾದಿಸುವ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ. ಜೊತೆಗೆ ಸಂಕುಚಿತ ಜೈವ ಅನಿಲ (CBG), ಹಸಿರು ಹೈಡ್ರೋಜನ್, ಜೈವ ಡೀಸೆಲ್ ಹಾಗೂ ವಿಮಾನಗಳಿಗೆ ಬಳಸುವ Sustainable Aviation Fuel (SAF) ಕ್ಷೇತ್ರಗಳಲ್ಲಿಯೂ ಹೂಡಿಕೆ ಹೆಚ್ಚುತ್ತಿದೆ. ಇದರಿಂದ ಎಥನಾಲ್ ಕಾರ್ಯಕ್ರಮವು ಭಾರತದ ಸಮಗ್ರ ಜೈವ-ಇಂಧನ ನೀತಿಯ ಪ್ರಮುಖ ಅಂಗವಾಗಿ ರೂಪುಗೊಳ್ಳುತ್ತಿದೆ.
ಬ್ರೆಜಿಲ್‌ನ ಅನುಭವ ಒಂದು ಸತ್ಯವನ್ನು ಸ್ಪಷ್ಟಪಡಿಸಿದೆ. ದೃಢವಾದ ಸರ್ಕಾರಿ ನೀತಿ, ರೈತರ ಸಹಕಾರ, ಕೈಗಾರಿಕೆಗಳ ಹೂಡಿಕೆ ಹಾಗೂ ವಾಹನ ತಯಾರಕರ ತಾಂತ್ರಿಕ ನವೀನತೆ ಒಂದಾಗಿದರೆ ಜೈವ ಇಂಧನವು ದೇಶದ ಇಂಧನ ಭದ್ರತೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲದು. ಆದರೆ ಭಾರತದ ಪರಿಸ್ಥಿತಿ ಬ್ರೆಜಿಲ್‌ಗಿಂತ ಭಿನ್ನವಾಗಿದೆ. ಇಲ್ಲಿ ಆಹಾರ ಭದ್ರತೆ, ನೀರಿನ ಲಭ್ಯತೆ, ಬೆಳೆ ವೈವಿಧ್ಯತೆ ಹಾಗೂ ಪರಿಸರ ಸಮತೋಲನವನ್ನು ಕಾಪಾಡಿಕೊಂಡೇ ಎಥನಾಲ್ ಕಾರ್ಯಕ್ರಮವನ್ನು ಮುಂದುವರಿಸಬೇಕಾಗಿದೆ.
ಒಟ್ಟಾರೆಯಾಗಿ, ಎಥನಾಲ್ ಮಿಶ್ರಣ ಕಾರ್ಯಕ್ರಮವು ಭಾರತಕ್ಕೆ ಕೇವಲ ಪೆಟ್ರೋಲ್‌ಗೆ ಪರ್ಯಾಯ ಇಂಧನದ ಯೋಜನೆಯಲ್ಲ. ಇದು ರೈತರ ಆರ್ಥಿಕ ಶಕ್ತಿ ಹೆಚ್ಚಿಸುವ, ವಿದೇಶಿ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ, ವಿದೇಶಿ ವಿನಿಮಯ ಉಳಿಸುವ ಹಾಗೂ ಪರಿಸರವನ್ನು ಸಂರಕ್ಷಿಸುವ ರಾಷ್ಟ್ರೀಯ ಚಳವಳಿಯಾಗಿದೆ. ನೀರಿನ ಸಮರ್ಪಕ ಬಳಕೆ, ಆಹಾರ ಭದ್ರತೆ, 2G ಎಥನಾಲ್ ಉತ್ಪಾದನೆ ಹಾಗೂ ತಾಂತ್ರಿಕ ನವೀನತೆಗೆ ಆದ್ಯತೆ ನೀಡಿದರೆ, ಜೈವ ಇಂಧನ ಕ್ಷೇತ್ರದಲ್ಲಿ ಭಾರತವೂ ಬ್ರೆಜಿಲ್‌ನಂತೆ ವಿಶ್ವಕ್ಕೆ ಮಾದರಿಯಾಗುವ ದಿನ ದೂರವಿಲ್ಲ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



