ದರ್ಶನ್ ‘ದಿ ಡೆವಿಲ್’ ಹೊಸ ದಾಖಲೆ: ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು

Dec 13, 2025 - 10:38
Dec 13, 2025 - 10:41
 0  35
ದರ್ಶನ್ ‘ದಿ ಡೆವಿಲ್’ ಹೊಸ ದಾಖಲೆ: ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು

ಆಪ್ತ ಮನೋರಂಜನೆ

*************************

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳೆಂದರೆ ಕನ್ನಡ ಚಿತ್ರರಂಗಕ್ಕೆ ಹಬ್ಬದ ವಾತಾವರಣವೇ ಸರಿ. ಅಭಿಮಾನಿಗಳ ಅಪಾರ ನಿರೀಕ್ಷೆಯ ನಡುವೆ ಗುರುವಾರ ತೆರೆಕಂಡ ‘ದಿ ಡೆವಿಲ್’ ಚಿತ್ರ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸಾಧನೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.

ರಾಜ್ಯದಾದ್ಯಂತ ಮುಂಜಾನೆ ಶೋಗಳಿಂದಲೇ ಹೌಸ್‌ಫುಲ್‌ ಪ್ರದರ್ಶನ ಕಂಡ ಈ ಚಿತ್ರ, ಮೊದಲ ದಿನವೇ ಪ್ರೇಕ್ಷಕರನ್ನು ದೊಡ್ಡ ಮಟ್ಟದಲ್ಲಿ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರಮಂದಿರಗಳ ಮುಂದೆ ಅಭಿಮಾನಿಗಳ ಸಂಭ್ರಮ, ಕೇಕ್‌ ಕತ್ತರಿಕೆ, ಫ್ಯಾನ್ಸ್ ಶೋಗಳ ಜೋಷ್‌ ‘ದಿ ಡೆವಿಲ್’ ಕ್ರೇಜ್‌ ಅನ್ನು ಮತ್ತಷ್ಟು ಹೆಚ್ಚಿಸಿತು.

ಮೂಲಗಳ ಪ್ರಕಾರ, ‘ದಿ ಡೆವಿಲ್’ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಸುಮಾರು 13.8 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಒಂದೇ ದಿನಕ್ಕೆ 13 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿರುವುದು ನಿಜಕ್ಕೂ ಗಮನಾರ್ಹ ದಾಖಲೆಯಾಗಿದೆ.

ಈ ಭರ್ಜರಿ ಕಲೆಕ್ಷನ್‌ಗೆ ಟಿಕೆಟ್ ದರವೂ ಒಂದು ಕಾರಣ ಎನ್ನಲಾಗುತ್ತಿದೆ. ಪಿವಿಆರ್, ಐನಾಕ್ಸ್‌ ಸೇರಿದಂತೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರಗಳು ಸುಮಾರು ₹500ರಿಂದ ಆರಂಭವಾಗಿದ್ದರೆ, ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳಲ್ಲಿ ₹400ವರೆಗೂ ಟಿಕೆಟ್ ದರ ನಿಗದಿಯಾಗಿತ್ತು. ಇದರ ನಡುವೆಯೂ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹರಿದು ಬಂದಿರುವುದು ದರ್ಶನ್ ಅವರ ಸ್ಟಾರ್‌ ಪವರ್‌ ಅನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದಿರುವ ಈ ಚಿತ್ರದ ಬಗ್ಗೆ ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿಯೂ ನಿರೀಕ್ಷೆ ಇತ್ತು. ಇದೀಗ ‘ದಿ ಡೆವಿಲ್’ ಕರ್ನಾಟಕದಲ್ಲಿ ದಾಖಲೆಯ ಸನಿಹಕ್ಕೆ ಬಂದು ನಿಂತಿದ್ದು, ದರ್ಶನ್ ಅವರ ಹಿಂದಿನ ಹಿಟ್‌ ಚಿತ್ರ ‘ರಾಬರ್ಟ್’ ಮೊದಲ ದಿನದ ಕಲೆಕ್ಷನ್ ದಾಖಲೆಯನ್ನು ಮುರಿದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರಲ್ಲಿ ‘ದಿ ಡೆವಿಲ್’ ಹೊಸ ಬಾಕ್ಸ್ ಆಫೀಸ್ ದಾಖಲೆ ಬರೆದಿದ್ದು, ಮುಂದಿನ ದಿನಗಳಲ್ಲಿ ಕಲೆಕ್ಷನ್ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಚಿತ್ರ ವಲಯದಲ್ಲಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0