ಜಿಲ್ಲೆಗೆ ಮಾರಕವಾಗುವ ಯೋಜನೆಗೆ ಸಂಪೂರ್ಣ ವಿರೋಧವಿದೆ; ಜನರ ಹಣದಲ್ಲಿ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ: ಸಚಿವ ಮಂಕಾಳು ವೈದ್ಯ
ಶಿರಸಿ: "ಉತ್ತರ ಕನ್ನಡ ಜಿಲ್ಲೆಗೆ ಬೇಡವಾದ ಹಾಗೂ ಪರಿಸರಕ್ಕೆ ಮಾರಕವಾಗುವ ಯಾವುದೇ ಯೋಜನೆಗೂ ನಮ್ಮ ಸಂಪೂರ್ಣ ವಿರೋಧವಿದೆ. 23 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆ ಜನರ ತೆರಿಗೆ ಹಣವಾಗಿದ್ದು, ನಿಮ್ಮ ಹಣದಲ್ಲೇ ನಿಮಗೆ ತೊಂದರೆ ಕೊಡುವ ಪರಿಸ್ಥಿತಿ ಬರಬಾರದು," ಎಂದು ಮೀನುಗಾರಿಕೆ-ಬಂದರು ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯ ಅವರು ಸ್ಪಷ್ಟಪಡಿಸಿದ್ದಾರೆ.
ಅವರು ನಗರದ ಎಂ.ಇ.ಎಸ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ 'ಅಘನಾಶಿನಿ-ಬೇಡ್ತಿ ನದಿ ತಿರುವು ಯೋಜನೆ ವಿರೋಧಿಸಿ ನಡೆದ ಬೃಹತ್ ಜನಸಮಾವೇಶ'ದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯ ಹಿತಾಸಕ್ತಿಯೇ ಮೊದಲು
ಜಿಲ್ಲೆಯ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಜನಪ್ರತಿನಿಧಿಗಳಾದ ನಮ್ಮ ಆದ್ಯ ಕರ್ತವ್ಯ. ಈ ಯೋಜನೆ ಜಿಲ್ಲೆಗೆ ಪೂರಕವಾಗಿಲ್ಲ, ಬದಲಿಗೆ ಮಾರಕವಾಗಿದೆ. ಇಂತಹ ಯೋಜನೆಗಳನ್ನು ಕೈಬಿಡಬೇಕು. ಜಿಲ್ಲೆಗೆ ಪೂರಕವಾದ ಅಭಿವೃದ್ಧಿ ಯೋಜನೆಗಳಿಗೆ ನಾವು ಪಕ್ಷಾತೀತವಾಗಿ ಕೈಜೋಡಿಸೋಣ, ಆದರೆ ಜಿಲ್ಲೆಯ ಅಸ್ತಿತ್ವಕ್ಕೆ ಧಕ್ಕೆ ತರುವ ಯೋಜನೆಗಳನ್ನು ಒಗ್ಗಟ್ಟಿನಿಂದ ವಿರೋಧಿಸೋಣ ಎಂದು ಅವರು ಕರೆ ನೀಡಿದರು.
ಹಿಂದಿನ ಮೌನವೇ ಇಂದಿನ ಸಂಕಷ್ಟಕ್ಕೆ ಕಾರಣ
ಯೋಜನೆಯ ಹಿನ್ನೆಲೆಯನ್ನು ಪ್ರಸ್ತಾಪಿಸಿದ ಸಚಿವರು, "ಹಿಂದೆ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‌ನಲ್ಲಿ ಈ ಯೋಜನೆಯನ್ನು ಪ್ರಸ್ತಾಪ ಮಾಡಿದ್ದರು. ಆಗ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸ್ಪೀಕರ್ ಆಗಿದ್ದರು. ಆ ಸಮಯದಲ್ಲಿ ಯಾರೂ ಕೂಡ ಇದರ ವಿರುದ್ಧ ದನಿ ಎತ್ತಲಿಲ್ಲ. ಅಂದೇ ಈ ವಿಷಯವನ್ನು ಅಲ್ಲಿಯೇ ತಡೆದಿದ್ದರೆ ಅಥವಾ ವಿರೋಧಿಸಿದ್ದರೆ, ಇಂದು ನಮ್ಮ ಪೂಜ್ಯ ಸ್ವಾಮೀಜಿಗಳು ಎಲ್ಲರ ಉಳಿವಿಗಾಗಿ ನಮ್ಮನ್ನು ಮತ್ತು ನಿಮ್ಮನ್ನು ಕರೆದು ಹೋರಾಟ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ," ಎಂದು ಹಿಂದಿನ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ರಾಜಕೀಯ ಲಾಭಕ್ಕಾಗಿ ಮಾತು ಬೇಡ
"ನಾವು ಗುರುಗಳ ಸಮ್ಮುಖದಲ್ಲಿ ಏನು ಮಾತನಾಡುತ್ತೇವೆಯೋ ಅದಕ್ಕೆ ಬದ್ಧರಾಗಿರಬೇಕು. ಕೇವಲ ರಾಜಕೀಯ ಲಾಭಕ್ಕಾಗಿ ಇಲ್ಲಿ ಒಂದು ಮಾತನಾಡುವುದು, ಹೊರಗೆ ಹೋಗಿ ಇನ್ನೇನೋ ಮಾತನಾಡುವುದು ನಿಲ್ಲಬೇಕು. ಈ ವಿಷಯದಲ್ಲಿ ಇಬ್ಬಗೆಯ ನೀತಿ ಸಲ್ಲದು," ಎಂದು ಸಚಿವರು ಖಡಕ್ ಆಗಿ ನುಡಿದರು.
ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ
ಈ ಯೋಜನೆಯ ಕುರಿತು ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಲು ಮತ್ತು ಈಗ ಎದುರಾಗಿರುವ ಸಮಸ್ಯೆಯನ್ನು ಪರಿಹರಿಸಲು ನಾನು ಸದಾ ನಿಮ್ಮ ಜೊತೆಗಿದ್ದೇನೆ. ಜನಪ್ರತಿನಿಧಿಗಳು ನಿಮ್ಮ ಜೊತೆಗೆ ನಿಂತು, ಜಿಲ್ಲೆಗೆ ಮಾರಕವಾದಂತಹ ಈ ಯೋಜನೆಯನ್ನು ನಿಲ್ಲಿಸಲು ಗುರುಗಳ ಸಮ್ಮುಖದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದು ಮಂಕಾಳು ವೈದ್ಯ ಅವರು ಇದೇ ವೇಳೆ ಭರವಸೆ ನೀಡಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



