ಸಾಗರ ಜಿಲ್ಲೆ ರಚಿಸುವಂತೆ ಬೇಳೂರು ಮನವಿ ಸಲ್ಲಿಕೆ
ಆಪ್ತ ನ್ಯೂಸ್ ಸಾಗರ:
ಬೆಳಗಾವಿಯಲ್ಲಿ ನಡೆಯುತ್ತಿದ್ದ ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ಸಾಗರ ವಿಭಾಗೀಯ ಕೇಂದ್ರವನ್ನು ಜಿಲ್ಲೆಯಾಗಿ ಘೋಷಣೆ ಮಾಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಸ್ತುವಾರಿ ಸಚಿವ ಮಧು ಬಂಗಾರಪ್ಪರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಸಾಗರ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಿದೆ.
ಈ ವೇಳೆ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಸಾಗರ ಜಿಲ್ಲೆಯಾಗಬೇಕು ಎಂದು ಕಳೆದ ೧೨ ವರ್ಷದಿಂದ ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯನ್ನು ವಿಭಜಿಸಿ ಸಾಗರವನ್ನು ಬಿಟ್ಟು ಶಿಕಾರಿಪುರ ಜಿಲ್ಲೆಯಾಗಿಸಬೇಕೆಂಬ ಪ್ರಸ್ತಾಪವನ್ನು ಯಡಿಯೂರಪ್ಪನವರು ಮುನ್ನೆಲೆಗೆ ತಂದಿದ್ದರು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಲವು ತಿಂಗಳಿಂದ ಸಾಗರದಲ್ಲಿ ಹೋರಾಟ, ಪ್ರತಿಭಟನೆ ನಡೆಯುತ್ತಿದೆ. ಡಿ.೧೭ರಂದು ತಾಲೂಕನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಇದಕ್ಕೆ ಸಾಗರದ ಜನ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿಗಳು ಶಿವಮೊಗ್ಗ ಎಷ್ಟು ತಾಲೂಕಿದೆ ಎಂದು ಪ್ರಶ್ನಿಸಿ, ೮ ತಾಲೂಕಿರುವ ಮಾಹಿತಿ ಪಡೆದು ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಸಾಗರ ಜಿಲ್ಲೆಯಾಗುವುದು ಸೂಕ್ತವಿದೆ. ಸೊರಬ, ಶಿಕಾರಿಪುರ, ಹೊಸನಗರ, ಸಾಗರದ ಜೊತೆ ತೀರ್ಥಹಳ್ಳಿ ಹಾಗೂ ಸಿದ್ದಾಪುರ ತಾಲೂಕು ಸೇರ್ಪಡೆ ಕುರಿತು ಚಿಂತನೆ ಮಾಡೋಣ, ಮೊದಲು ಜನಪ್ರತಿನಿಧಿಗಳು ಈ ಕುರಿತು ಸಕಾರಾತ್ಮಕವಾಗಿ ಸಮಾಲೋಚಿಸಿ ಯಾವೆಲ್ಲ ತಾಲೂಕು ಸೇರಿದರೆ ಉತ್ತಮ ಎಂದು ಪರಿಶೀಲಿಸಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಜಿಲ್ಲಾ ಹೋರಾಟ ಸಮಿತಿಯ ಪ್ರಮುಖರಾದ ಮಂಜುನಾಥ ಆಚಾರ್, ತೀ.ನಾ. ಶ್ರೀನಿವಾಸ್, ಹೆಚ್.ಎನ್. ಉಮೇಶ್, ಬಸವರಾಜ ಬಿಳಿಬಾವಿ, ಸುಂದರ್‌ಸಿAಗ್, ಕೆ.ವಿ.ಜಯರಾಮ್, ಹೆಚ್.ರೇವಣಪ್ಪ, ಮನೋಜ್ ಕುಗ್ವೆ, ತಾರಾಮೂರ್ತಿ, ಮೊಹಮದ್ ಖಾಸಿಂ, ವೆಂಕಟೇಶ್ ಭೋವಿ, ನೂರುಲ್ಲಾ ಹಕ್, ಹೆಚ್.ಎಂ. ನಾಗರಾಜ, ಮಂಜಪ್ಪ ಚಿಕ್ಕನೆಲ್ಲೂರು, ರವಿಕುಗ್ವೆ, ನಾಗರಾಜ ಮೊದಲಾದವರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



