ಮನೆಯ ಮೇಲ್ಚಾವಣಿಯ ಮೇಲೆ ಬಿದ್ದ ಬೃಹತ್ ಮರದ ಕೊಂಬೆ: ಮಲಗಿದ್ದ ಮಹಿಳೆಗೆ ಗಾಯ
ಆಪ್ತ ನ್ಯೂಸ್ ದಾಂಡೇಲಿ:
ದಾಂಡೇಲಿ ಹಳಿಯಾಳ ರಸ್ತೆಯಲ್ಲಿರುವ ನಿವಾಸಿಯೊಬ್ಬರ ಮನೆಯ ಮೇಲ್ಚಾವಣಿಯ ಮೇಲೆ ಬೃಹತ್ ಗಾತ್ರದ ಮರದ ಕೊಂಬೆ (ಟೊಂಗೆ ) ಬಿದ್ದು ಮನೆಯೊಳಗೆ ಮಲಗಿದ್ದ ಮಹಿಳೆಯ ತಲೆಗೆ ಬಿದ್ದು ಗಾಯಗೊಂಡ ಘಟನೆನಡೆದಿದೆ. ಗಾಯಗೊಂಡ ಮಹಿಳೆಯನ್ನು ಬಿಬಿ ಜಹರಾ ಎಂದು ತಿಳಿದು ಬಂದಿದೆ.
ಮನೆಯಲ್ಲಿ ಮಲಗಿದ್ದ ವೇಳೆ ಮನೆ ಹಿಂಭಾಗದಲ್ಲಿದ್ದ ಬೃಹತ್ ಮರದ ಕೊಂಬೆ ಏಕಾಏಕಿ ಮುರಿದು ಮನೆಯ ಸೀಟನ್ನು ಒಡೆದು ಒಳಗೆ ಬಿದ್ದಿದೆ. ಪರಿಣಾಮ ಕೊಂಬೆ ಅವರ ತಲೆಗೆ ತಾಗಿ ಗಾಯವಾಗಿದ್ದು, ಮನೆಯವರು ತಕ್ಷಣವೇ ಅವರನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.
ಘಟನೆ ಕುರಿತು ಗಾಯಾಳುವಿನ ಪುತ್ರ ಮೆಹಬೂಬ್ ಕಾಕರ್ ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು ಐದುರಿಂದ ಆರು ತಿಂಗಳ ಹಿಂದೆಯೇ ಈ ಮರ ಅಪಾಯಕಾರಿಯಾಗಿದೆ ಎಂದು ಅರಣ್ಯ ಇಲಾಖೆಗೆ ಲಿಖಿತ ಮನವಿ ಸಲ್ಲಿಸಿ, ಮರವನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
"ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇಂದು ನನ್ನ ತಾಯಿಯ ಜೀವಕ್ಕೆ ಅಪಾಯ ಉಂಟಾಗಿದೆ. ನಮ್ಮ ಮನೆಯ ಪಕ್ಕದಲ್ಲಿರುವ ತೆಂಗಿನ ಮರ ಕೂಡ ಮನೆಯ ಮೇಲ್ಚಾವಣಿಗೆ ಹಾನಿ ಉಂಟುಮಾಡುತ್ತಿದೆ. ಮನೆಯಲ್ಲಿ ಸಣ್ಣ ಮಕ್ಕಳು ಹಾಗೂ ವಯೋವೃದ್ಧರು ಇದ್ದಾರೆ. ಮುಂದೆ ಮತ್ತೊಂದು ಅನಾಹುತ ಸಂಭವಿಸಿದರೆ ಅದರ ಹೊಣೆ ಯಾರು?" ಎಂದು ಮೆಹಬೂಬ್ ಕಾಕರ್ ಪ್ರಶ್ನಿಸಿದ್ದಾರೆ.
ಅಪಾಯಕಾರಿಯಾಗಿ ನಿಂತಿರುವ ಮರಗಳನ್ನು ತಕ್ಷಣ ತೆರವುಗೊಳಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

