ಬೈಕ್‌ಗೆ ಹಿಂದಿನಿಂದ ಗುದ್ದಿದ ಗೊಬ್ಬರ ತುಂಬಿದ ಲಾರಿ; ಮಹಿಳೆ ಸ್ಥಳದಲ್ಲೇ ಸಾವು!
ಶಿರಸಿ ತಾಲೂಕಿನ ಅಂಡಗಿ ಗ್ರಾಮ ಪಂಚಾಯಿತಿ ಸಮೀಪ ಭೀಕರ ಅಪಘಾತ – ಪತಿಗೆ ಗಾಯ, ದಂಪತಿಗಳ ಪ್ರಯಾಣ ದುರಂತದಲ್ಲಿ ಅಂತ್ಯ
ಆಪ್ತ ನ್ಯೂಸ್ ಶಿರಸಿ:
ಬೈಕ್‌ನಲ್ಲಿ ಪತಿಯೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಹಿಂದಿನಿಂದ ಬಂದ ಗೊಬ್ಬರ ತುಂಬಿದ ಲಾರಿಯ ಡಿಕ್ಕಿಗೆ ಬಲಿಯಾಗಿ ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಶಿರಸಿ ತಾಲೂಕಿನ ಬನವಾಸಿ ಸಮೀಪದ ಅಂಡಗಿ ಗ್ರಾಮ ಪಂಚಾಯಿತಿ ಕಚೇರಿ ಬಳಿ ನಡೆದಿದೆ.
ಮೃತರನ್ನು ಅಂಡಗಿ ನಿವಾಸಿ ಸರೋಜಾ ಮಾಲತೇಶ ನಾಯ್ಕ್ (60) ಎಂದು ಗುರುತಿಸಲಾಗಿದೆ.
ಸರೋಜಾ ಅವರು ತಮ್ಮ ಪತಿ ಮಾಲತೇಶ ನಾಯ್ಕ್ ಅವರೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬಂದ ಗೊಬ್ಬರ ತುಂಬಿದ ಟ್ರಕ್ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಲಾರಿಯ ಡಿಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಸರೋಜಾ ಅವರು ರಸ್ತೆಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದಲ್ಲಿ ಬೈಕ್ ಚಲಾಯಿಸುತ್ತಿದ್ದ ಪತಿ ಮಾಲತೇಶ ನಾಯ್ಕ್ ಅವರಿಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬನವಾಸಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
ಪತಿಯೊಂದಿಗೆ ಬೈಕ್‌ನಲ್ಲಿ ಸಾಗುತ್ತಿದ್ದ ಮಹಿಳೆ ಲಾರಿಯ ಡಿಕ್ಕಿಗೆ ಬಲಿಯಾದ ಘಟನೆ ಅಂಡಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ದುಃಖದ ಛಾಯೆ ಮೂಡಿಸಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0