ದೇಶಸೇವೆಯಲ್ಲಿ ಪ್ರಾಣ ಕಳೆದುಕೊಂಡ ಯೋಧ ಗಿರೀಶ ನಾಯ್ಕ ಮನೆಗೆ ಬಿಜೆಪಿ ಮುಖಂಡರ ಭೇಟಿ
ಅನಂತಮೂರ್ತಿ ಹೆಗಡೆ, ಪ್ರಸನ್ನ ಹೆಗಡೆಯಿಂದ ಶ್ರದ್ಧಾಂಜಲಿ; ಕುಟುಂಬಕ್ಕೆ ಆರ್ಥಿಕ ನೆರವು, ಸಾಂತ್ವನ
ಆಪ್ತ ನ್ಯೂಸ್ ಶಿರಸಿ:
ಮಣಿಪುರದಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಇತ್ತೀಚೆಗೆ ಮೃತಪಟ್ಟ ಶಿರಸಿ ತಾಲೂಕಿನ ಗಣಗೇರಿ ಗ್ರಾಮದ ವೀರಯೋಧ ಗಿರೀಶ ಭಾಸ್ಕರ ನಾಯ್ಕ ಅವರ ಮನೆಗೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಹಾಗೂ ಸ್ಥಳೀಯ ಬಿಜೆಪಿ ಮುಖಂಡ ಪ್ರಸನ್ನ ಹೆಗಡೆ ಹೊಳೆಬೈಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮೃತ ಯೋಧನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದ ಮುಖಂಡರು, ತಮ್ಮ ಕೈಲಾದ ಆರ್ಥಿಕ ನೆರವನ್ನು ಕುಟುಂಬಕ್ಕೆ ನೀಡಿ ದುಃಖದಲ್ಲಿ ಭಾಗಿಯಾದರು.
ಬಳಿಕ ಮಾತನಾಡಿದ ಅನಂತಮೂರ್ತಿ ಹೆಗಡೆ, ಅಗ್ನಿವೀರ ಯೋಜನೆಯಡಿ ಆಯ್ಕೆಯಾಗಿ ಮಣಿಪುರದಲ್ಲಿ ದೇಶಸೇವೆಯಲ್ಲಿ ತೊಡಗಿಸಿಕೊಂಡಿದ್ದ ಹೆಮ್ಮೆಯ ವೀರಯೋಧ ಗಿರೀಶ ಭಾಸ್ಕರ ನಾಯ್ಕ ಅವರ ಅಗಲಿಕೆ ಅತ್ಯಂತ ನೋವಿನ ಸಂಗತಿಯಾಗಿದೆ. ದೇಶದ ರಕ್ಷಣೆಯ ಹೊಣೆ ಹೊತ್ತಿರುವ ಸೈನಿಕರು ಗಾಳಿ, ಮಳೆ, ಚಳಿ ಸೇರಿದಂತೆ ಹವಾಮಾನದ ಯಾವುದೇ ಸವಾಲುಗಳನ್ನೂ ಲೆಕ್ಕಿಸದೆ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಅವರ ನಿಸ್ವಾರ್ಥ ಸೇವೆ ಮತ್ತು ತ್ಯಾಗದಿಂದಲೇ ದೇಶದ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದು ಹೇಳಿದರು.
ಯೋಧ ಗಿರೀಶ ನಾಯ್ಕ ಅವರ ತಂದೆ ಭಾಸ್ಕರ ನಾಯ್ಕ ಹಾಗೂ ತಾಯಿ ರೇವತಿ ನಾಯ್ಕ ಅವರು ದೇಶಸೇವೆಗೆ ತಮ್ಮ ಹೆಮ್ಮೆಯ ಪುತ್ರನನ್ನು ಕೊಡುಗೆಯಾಗಿ ನೀಡಿದ್ದಾರೆ. ಪುತ್ರನ ಅಗಲಿಕೆ ತಂದೆ-ತಾಯಿಗೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಇಂತಹ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದರು.
ದುಃಖದ ಈ ಸಂದರ್ಭದಲ್ಲಿ ಕುಟುಂಬಸ್ಥರು ಧೈರ್ಯ ಕಳೆದುಕೊಳ್ಳಬಾರದು. ನಿಮ್ಮ ನೋವಿನಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ಕುಟುಂಬದೊಂದಿಗೆ ಸದಾ ನಾವಿರುತ್ತೇವೆ ಎಂದು ಭರವಸೆ ನೀಡಿ ಪೋಷಕರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಜಗದೀಶ ರೆಡ್ಡಿ, ನಾಗರಾಜ ನಾಯ್ಕ, ಮಂಜುನಾಥ ನಾಯ್ಕ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0