ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯ ವಾರ್ಷಿಕ ಪ್ರಶಸ್ತಿ ಪ್ರಕಟ: ಎಚ್.ಆರ್. ಶ್ರೀಶ, ಜಿ.ಯು. ಭಟ್ ಸೇರಿ ನಾಲ್ವರಿಗೆ ಗೌರವ

50 ವರ್ಷಗಳ ಪತ್ರಿಕಾ ಸೇವೆಗೆ ಎಚ್.ಆರ್. ಶ್ರೀಶ ಅವರಿಗೆ ರಾಜ್ಯಮಟ್ಟದ ‘ಮಾಧ್ಯಮ ರತ್ನ’; ನ.16ರಂದು ಶಿರಸಿಯಲ್ಲಿ ಪ್ರಶಸ್ತಿ ಪ್ರದಾನ

Nov 6, 2026 - 19:21
 0  95
ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯ ವಾರ್ಷಿಕ ಪ್ರಶಸ್ತಿ ಪ್ರಕಟ: ಎಚ್.ಆರ್. ಶ್ರೀಶ, ಜಿ.ಯು. ಭಟ್ ಸೇರಿ ನಾಲ್ವರಿಗೆ ಗೌರವ

ಆಪ್ತ ನ್ಯೂಸ್ ಶಿರಸಿ:

ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯ ವಾರ್ಷಿಕ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರು ಹಾಗೂ ಕ್ರಿಯಾಶೀಲ ಯುವ ವರದಿಗಾರ ಸೇರಿದಂತೆ ನಾಲ್ವರನ್ನು ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ನವೆಂಬರ್ 16ರಂದು ಶಿರಸಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಮಂಡಳಿಯು ಇದೇ ಮೊದಲ ಬಾರಿಗೆ ರಾಜ್ಯಮಟ್ಟದಲ್ಲಿ ನೀಡುತ್ತಿರುವ ‘ಮಾಧ್ಯಮ ರತ್ನ’ ಪ್ರಶಸ್ತಿಗೆ ತುಮಕೂರಿನ ಹಿರಿಯ ವರದಿಗಾರ ಎಚ್.ಆರ್. ಶ್ರೀಶ ಆಯ್ಕೆಯಾಗಿದ್ದಾರೆ. 15 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುವ ಈ ಗೌರವಕ್ಕೆ ಭಾಜನರಾಗಿರುವ ಶ್ರೀಶ ಅವರು, 1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ಪತ್ರಿಕಾರಂಗ ಪ್ರವೇಶಿಸಿದ್ದರು. ಕಲಬುರಗಿ, ಬೀದರ್, ರಾಯಚೂರು, ವಿಜಯಪುರ, ಹುಬ್ಬಳ್ಳಿ ಹಾಗೂ ಗದಗ ಸೇರಿದಂತೆ ವಿವಿಧೆಡೆ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಕನ್ನಡಪ್ರಭದಲ್ಲಿ ಮೈಸೂರು ಮತ್ತು ಬೆಂಗಳೂರಿನ ವರದಿಗಾರರಾಗಿ ಹತ್ತು ವರ್ಷ ಸೇವೆ ಸಲ್ಲಿಸಿರುವ ಅವರು, ವಿಜಯ ಕರ್ನಾಟಕ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ವಿಶೇಷ ವರದಿಗಾರ ಮತ್ತು ಕಾರ್ಯನಿರ್ವಾಹಕ ಸಂಪಾದಕರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ. 2026ರ ಅಕ್ಟೋಬರ್ 2ಕ್ಕೆ ಅವರ ಪತ್ರಿಕಾ ಸೇವೆಗೆ 50 ವರ್ಷಗಳು ಪೂರ್ಣಗೊಂಡಿವೆ. ‘ಕರೆಂಟ್ ಮಾತು’ ಸೇರಿದಂತೆ ಪ್ರಮುಖ ಕೃತಿಗಳನ್ನು ರಚಿಸಿರುವ ಅವರು, ಪ್ರಸ್ತುತ ವಿವಿಧ ಸಂಘ-ಸಂಸ್ಥೆಗಳ ಜವಾಬ್ದಾರಿಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಹೊನ್ನಾವರದ ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ರಂಗಕರ್ಮಿ ಜಿ.ಯು. ಭಟ್ ಅವರಿಗೆ ‘ಡಾ. ಯು. ಚಿತ್ತರಂಜನ್ ಪ್ರಶಸ್ತಿ’ ಲಭಿಸಿದೆ. 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುವ ಈ ಪ್ರಶಸ್ತಿಗೆ ಆಯ್ಕೆಯಾಗಿರುವ ಗಜಾನನ ಉಮಾಮಹೇಶ್ವರ ಭಟ್ ಅವರು, ಉದಯವಾಣಿ ಪತ್ರಿಕೆಯ ಹಿರಿಯ ವರದಿಗಾರರಾಗಿ 55 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ಆಗುಹೋಗುಗಳ ಕುರಿತು 20 ಸಾವಿರಕ್ಕೂ ಹೆಚ್ಚು ವರದಿಗಳು ಹಾಗೂ 3 ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಅವರು, ‘ಉತ್ತರ ಕನ್ನಡ ಕಥೆ-ವ್ಯಥೆ’, ‘ಕರಾವಳಿ’ ಸೇರಿದಂತೆ ಒಂಬತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

ಪತ್ರಿಕೋದ್ಯಮದ ಜೊತೆಗೆ ರಂಗಭೂಮಿ, ಚಲನಚಿತ್ರ, ಶಿಕ್ಷಣ ಹಾಗೂ ಸಹಕಾರ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಂಡಿರುವ ಜಿ.ಯು. ಭಟ್ ಅವರು ರಂಗಾಯಣ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಕೆ.ಯು.ಡಬ್ಲ್ಯೂ.ಜೆ. ಎಚ್.ಎಸ್. ದೊರೆಸ್ವಾಮಿ ಪ್ರಶಸ್ತಿ, ವಿ. ಸೀತಾರಾಮಯ್ಯ ಮಾಧ್ಯಮ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದು, ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಯಲ್ಲಾಪುರದ ಹಿರಿಯ ವರದಿಗಾರ ನರಸಿಂಹ ಸಾತೊಡ್ಡಿ ಅವರಿಗೆ ‘ಕೆ. ಶಾಮರಾವ್ ಪ್ರಶಸ್ತಿ’ ಲಭಿಸಿದೆ. 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುವ ಈ ಪ್ರಶಸ್ತಿಗೆ ಆಯ್ಕೆಯಾಗಿರುವ ನರಸಿಂಹ ವಿಶ್ವೇಶ್ವರ ಭಟ್ ಅವರು 1990ರಲ್ಲಿ ಪತ್ರಿಕಾ ಕ್ಷೇತ್ರ ಪ್ರವೇಶಿಸಿದ್ದರು. ಹೊಸದಿಗಂತ, ಧ್ಯೇಯನಿಷ್ಠ ಪತ್ರಕರ್ತ, ಉಷಾಕಿರಣ, ವಿಜಯವಾಹಿನಿ ಹಾಗೂ ಕನ್ನಡಪ್ರಭ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿರುವ ಅವರು, 2006ರಿಂದ ಉದಯವಾಣಿ ಪತ್ರಿಕೆಯ ಯಲ್ಲಾಪುರ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಕ್ರಮ ಮರ ಸಾಗಣೆ ಹಾಗೂ ಬಿಸಗೋಡು ಗಣಿಗಾರಿಕೆ ವಿರುದ್ಧ ಸರಣಿ ವರದಿಗಳನ್ನು ಪ್ರಕಟಿಸಿರುವ ಅವರು, ಕೊಡಸಳ್ಳಿ ಜಲವಿದ್ಯುತ್ ಯೋಜನೆ ವಿರೋಧಿ ಹೋರಾಟ, ಕೈಗಾ ಪಾದಯಾತ್ರೆ ಮತ್ತು ಬೇಡ್ತಿ ಕೊಳ್ಳ ರಕ್ಷಣಾ ಚಳವಳಿಗಳಲ್ಲಿಯೂ ಮುಂಚೂಣಿಯಲ್ಲಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಿಸಾನ್ ಸಂಘದ ತಾಲೂಕು ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಅವರಿಗೆ ಶ್ರೀಗಂಧ ಪ್ರಶಸ್ತಿ, ಸಂಕಲ್ಪ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿವೆ.

ಶಿರಸಿಯ ಯುವ ವರದಿಗಾರ ಮಂಜುನಾಥ ಈರಗೊಪ್ಪ ಅವರಿಗೆ ‘ಜಿ.ಎಸ್. ಹೆಗಡೆ ಅಜ್ಜೀಬಳ ಪುರಸ್ಕಾರ’ ಲಭಿಸಿದೆ. 5 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುವ ಈ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಮಂಜುನಾಥ ಅವರು 2016ರಲ್ಲಿ ಜನಮಾಧ್ಯಮ ಪತ್ರಿಕೆಯ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಬಳಿಕ ಕರಾವಳಿ ಮುಂಜಾವು ಹಾಗೂ ನೂತನ ಟಿವಿಯಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ತತ್ತ್ವನಿಷ್ಠ ಪತ್ರಿಕೆಯ ಶಿರಸಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೋಲ್ಡನ್ ಪೆನ್ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.

ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಕ್ರಿಯಾಶೀಲತೆ ಮತ್ತು ಬದ್ಧತೆಯಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ಮಂಜುನಾಥ ಅವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ನಾಲ್ವರು ಪತ್ರಕರ್ತರ ಸಾಧನೆ ಮತ್ತು ಮಾಧ್ಯಮ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಪತ್ರಿಕಾ ಮಂಡಳಿ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರದೀಪ ಶೆಟ್ಟಿ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0