ಉತ್ತರ ಕನ್ನಡಕ್ಕೆ ಸಚಿವ ಸ್ಥಾನ ಸಿಗುತ್ತಾ? ದೆಹಲಿಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್‌ ಪಕ್ಕದಲ್ಲೇ ಕಾಣಿಸಿಕೊಂಡ ಶಾಸಕ ಸತೀಶ್‌ ಸೈಲ್‌; ರಾಜಕೀಯ ವಲಯದಲ್ಲಿ ಹೊಸ ಚರ್ಚೆ

Jul 29, 2026 - 19:17
 0  84
ಉತ್ತರ ಕನ್ನಡಕ್ಕೆ ಸಚಿವ ಸ್ಥಾನ ಸಿಗುತ್ತಾ? ದೆಹಲಿಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್‌ ಪಕ್ಕದಲ್ಲೇ ಕಾಣಿಸಿಕೊಂಡ ಶಾಸಕ ಸತೀಶ್‌ ಸೈಲ್‌; ರಾಜಕೀಯ ವಲಯದಲ್ಲಿ ಹೊಸ ಚರ್ಚೆ

ಆಪ್ತ ನ್ಯೂಸ್ ಬೆಂಗಳೂರು/ದೆಹಲಿ:

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಕುರಿತ ಚಟುವಟಿಕೆಗಳು ರಾಜ್ಯ ರಾಜಕೀಯದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ದೆಹಲಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕ್ಷೇತ್ರದ ಶಾಸಕ ಸತೀಶ್‌ ಸೈಲ್‌ ಕಾಣಿಸಿಕೊಂಡಿರುವುದು ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.

ದೆಹಲಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರ ಪಕ್ಕದಲ್ಲೇ ಶಾಸಕ ಸತೀಶ್‌ ಸೈಲ್‌ ನಿಂತಿದ್ದ ದೃಶ್ಯ ಗಮನ ಸೆಳೆದಿದೆ. ಈ ಬೆಳವಣಿಗೆಯ ನಂತರ ಉತ್ತರ ಕನ್ನಡ ಜಿಲ್ಲೆಯಿಂದ ಸಚಿವ ಸ್ಥಾನ ಸತೀಶ್‌ ಸೈಲ್‌ ಅವರಿಗೆ ದೊರೆಯಬಹುದು ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲೂ, ರಾಜಕೀಯ ವೀಕ್ಷಕರಲ್ಲೂ ಮತ್ತಷ್ಟು ಜೋರಾಗಿವೆ.

ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ ಬಳಿಕ ಮೊದಲ ಹಂತದಲ್ಲಿ ಕೆಲವೇ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಇನ್ನೂ ಹಲವು ಸಚಿವ ಸ್ಥಾನಗಳು ಖಾಲಿ ಉಳಿದಿದ್ದು, ಸಚಿವ ಸಂಪುಟ ವಿಸ್ತರಣೆ ಸದ್ಯದಲ್ಲೇ ನಡೆಯಲಿದೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಯಾರು ಸಚಿವರಾಗಲಿದ್ದಾರೆ ಎಂಬ ಕುತೂಹಲವೂ ಹೆಚ್ಚಿತ್ತು.

ಜಿಲ್ಲೆಯ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳು ವೈದ್ಯ ಮತ್ತೊಮ್ಮೆ ಸಚಿವರಾಗುವ ಸಾಧ್ಯತೆ ಇದೆಯೇ ಅಥವಾ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಅವರಿಗೆ ಅವಕಾಶ ಸಿಗಬಹುದೇ ಎಂಬ ಚರ್ಚೆಗಳು ನಡೆಯುತ್ತಿದ್ದವು. ಇದರ ನಡುವೆಯೇ ಶಾಸಕ ಸತೀಶ್‌ ಸೈಲ್‌ಗೆ ಈ ಬಾರಿ ಸಚಿವ ಸ್ಥಾನ ಬಹುತೇಕ ಖಚಿತ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಈಗ ದೆಹಲಿಯಲ್ಲಿ ಮುಖ್ಯಮಂತ್ರಿಯವರ ಆಪ್ತ ವಲಯದಲ್ಲಿ ಸತೀಶ್‌ ಸೈಲ್‌ ಕಾಣಿಸಿಕೊಂಡಿರುವುದು ಆ ಊಹಾಪೋಹಗಳಿಗೆ ಇನ್ನಷ್ಟು ಬಲ ನೀಡಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಉತ್ತರ ಕನ್ನಡ ಜಿಲ್ಲೆಯಿಂದ ಸಚಿವ ಸ್ಥಾನ ಸತೀಶ್‌ ಸೈಲ್‌ ಅವರ ಪಾಲಾಗಬಹುದು ಎಂಬ ನಿರೀಕ್ಷೆ ಮತ್ತಷ್ಟು ಗಟ್ಟಿಯಾಗುತ್ತಿದೆ.

ಒಂದು ವೇಳೆ ಸತೀಶ್‌ ಸೈಲ್‌ ಸಚಿವರಾದರೆ, ಮಂಕಾಳು ವೈದ್ಯರಿಗೆ ಮತ್ತೊಮ್ಮೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಕ್ಷೀಣಿಸಬಹುದು ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ. ಇದೇ ವೇಳೆ ಕಾಂಗ್ರೆಸ್‌ನ ಹಿರಿಯ ನಾಯಕ ಆರ್‌.ವಿ. ದೇಶಪಾಂಡೆ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆಯೂ ಇದೆ ಎನ್ನುವ ಚರ್ಚೆಯೂ ನಡೆಯುತ್ತಿದೆ.

ಇದರ ಜೊತೆಗೆ ಸತೀಶ್‌ ಸೈಲ್‌ಗೆ ಯಾವ ಖಾತೆ ಸಿಗಬಹುದು ಎಂಬ ಕುತೂಹಲವೂ ಹೆಚ್ಚಾಗಿದೆ. ಹಿಂದೆ ಮಂಕಾಳು ವೈದ್ಯ ಅವರು ನಿರ್ವಹಿಸಿದ್ದ ಮೀನುಗಾರಿಕೆ ಖಾತೆಯನ್ನೇ ಸೈಲ್‌ಗೆ ನೀಡಲಾಗುತ್ತದೆಯೇ? ಅಥವಾ ರಾಜ್ಯ ಸರ್ಕಾರದ ಮತ್ತೊಂದು ಮಹತ್ವದ ಖಾತೆಯ ಜವಾಬ್ದಾರಿ ಅವರ ಹೆಗಲಿಗೆ ಬೀಳಲಿದೆಯೇ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಆದರೆ, ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಅಥವಾ ಕಾಂಗ್ರೆಸ್‌ ಹೈಕಮಾಂಡ್‌ನಿಂದ ಯಾವುದೇ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ. ಹೀಗಾಗಿ ಸತೀಶ್‌ ಸೈಲ್‌ ಸಚಿವರಾಗುವ ಕುರಿತ ಎಲ್ಲಾ ಚರ್ಚೆಗಳು ಸದ್ಯ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಊಹಾಪೋಹಗಳಷ್ಟೇ ಆಗಿದ್ದು, ಅಂತಿಮ ನಿರ್ಧಾರಕ್ಕಾಗಿ ಅಧಿಕೃತ ಪ್ರಕಟಣೆಯನ್ನು ಕಾಯಬೇಕಿದೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0