ಅಡಿಕೆ ಸಾಗಣೆಗೆ ತೊಂದರೆಯಾಗದಂತೆ ಕ್ರಮ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಭರವಸೆ

Jul 7, 2026 - 21:10
 0  166
ಅಡಿಕೆ ಸಾಗಣೆಗೆ ತೊಂದರೆಯಾಗದಂತೆ ಕ್ರಮ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಭರವಸೆ

ಆಪ್ತ ನ್ಯೂಸ್ ಶಿರಸಿ:

ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಣೆ ಲಾರಿಗಳನ್ನು ತಡೆಹಿಡಿಯುತ್ತಿರುವ ಘಟನೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕದ ಅಡಿಕೆ ಬೆಳೆಗಾರರು, ಸಹಕಾರಿ ಸಂಘಗಳು ಹಾಗೂ ವ್ಯಾಪಾರಿಗಳಿಗೆ ಕೊನೆಗೂ ನೆಮ್ಮದಿಯ ಸುದ್ದಿಯೊಂದು ದೊರೆತಿದೆ. ನವದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಸೂಕ್ತ ದಾಖಲೆಗಳಿರುವ ಅಡಿಕೆ ಸಾಗಣೆಗೆ ಯಾವುದೇ ರೀತಿಯ ಅಡ್ಡಿ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಣೆ ಮಾಡುತ್ತಿದ್ದ ಲಾರಿಗಳನ್ನು ತಡೆಹಿಡಿಯಲಾಗುತ್ತಿದ್ದು, ಇದರಿಂದ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಅಡಿಕೆ ಬೆಳೆಗಾರರು, ಸಹಕಾರಿ ಸಂಸ್ಥೆಗಳು ಮತ್ತು ವ್ಯಾಪಾರಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನವದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ಶಾಸಕರು ಹಾಗೂ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಅರಗ ಜ್ಞಾನೇಂದ್ರ, ಸಂಸದರಾದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ, ಬಿ ವೈ ರಾಘವೇಂದ್ರ ಮತ್ತು ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಬೆಳೆಯುವ ಸಹಕಾರಿ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳನ್ನು ತಡೆಹಿಡಿಯುತ್ತಿರುವ ಘಟನೆಗಳ ಸಂಪೂರ್ಣ ವಿವರವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಗಮನಕ್ಕೆ ತರಲಾಯಿತು. ಈ ಕ್ರಮದಿಂದ ಲಕ್ಷಾಂತರ ರೈತ ಕುಟುಂಬಗಳು, ಸಹಕಾರಿ ಸಂಘಗಳು ಮತ್ತು ಅಡಿಕೆ ವ್ಯಾಪಾರಿಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ಪ್ರತಿನಿಧಿಗಳು ವಿವರಿಸಿದರು. ಗಡಿ ರಾಜ್ಯಗಳ ನಡುವೆ ನಡೆಯುವ ಅಡಿಕೆ ವ್ಯಾಪಾರಕ್ಕೆ ಯಾವುದೇ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳುವ ಅಗತ್ಯವನ್ನು ಒತ್ತಿಹೇಳಲಾಯಿತು.

ಪ್ರತಿನಿಧಿಗಳ ಮನವಿಯನ್ನು ಗಂಭೀರವಾಗಿ ಆಲಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕಾನೂನುಬದ್ಧ ದಾಖಲೆಗಳೊಂದಿಗೆ ಸಾಗಣೆ ಮಾಡುವ ಅಡಿಕೆ ಲಾರಿಗಳಿಗೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅನಗತ್ಯ ತೊಂದರೆಯಾಗದಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಸಭೆಗೆ ಭರವಸೆ ನೀಡಿದರು. ಈ ಭರವಸೆಯಿಂದ ಅಡಿಕೆ ಬೆಳೆಗಾರರು ಮತ್ತು ವ್ಯಾಪಾರಿಗಳಲ್ಲಿ ಹೊಸ ನಿರೀಕ್ಷೆ ಮೂಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, "ಅಡಿಕೆ ಬೆಳೆ ಕರ್ನಾಟಕ ಸೇರಿದಂತೆ ಇಡೀ ದಕ್ಷಿಣ ಭಾರತದ ಲಕ್ಷಾಂತರ ರೈತ ಕುಟುಂಬಗಳ ಜೀವನಾಧಾರವಾಗಿದೆ. ಅಡಿಕೆ ಬೆಳೆಗಾರರ ಹಿತಾಸಕ್ತಿ ಹಾಗೂ ಅವರ ಆರ್ಥಿಕ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ನಿರಂತರವಾಗಿ ಮುಂದುವರಿಯಲಿವೆ. ರೈತರಿಗೆ ಯಾವುದೇ ಅನ್ಯಾಯವಾಗದಂತೆ ಎಲ್ಲ ಹಂತದಲ್ಲೂ ಸರ್ಕಾರದ ಗಮನ ಸೆಳೆಯಲಾಗುತ್ತಿದೆ" ಎಂದು ತಿಳಿಸಿದ್ದಾರೆ.

ಅಡಿಕೆ ಸಾಗಣೆ ಸಮಸ್ಯೆ ಕುರಿತು ಮಹಾರಾಷ್ಟ್ರ ಸರ್ಕಾರ ನೀಡಿರುವ ಈ ಭರವಸೆ ರಾಜ್ಯದ ಅಡಿಕೆ ವಲಯಕ್ಕೆ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದ್ದು, ರೈತರು ಹಾಗೂ ವ್ಯಾಪಾರಿಗಳು ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವ ನಿರೀಕ್ಷೆಯಲ್ಲಿದ್ದಾರೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0