ಕಾಗೇರಿ ಜನ್ಮದಿನೋತ್ಸವ: ಹಾರ್ಸಿಕಟ್ಟಾದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್, ಬಿಜೆಪಿ ಮಂಡಲದಿಂದ ಆಯೋಜನೆ | ಗ್ರಾಮೀಣ ಜನತೆಯ ಆರೋಗ್ಯ ತಪಾಸಣೆಗೆ ಕೈಜೋಡಿಸಿದ ನುರಿತ ವೈದ್ಯರ ತಂಡ
ಆಪ್ತ ನ್ಯೂಸ್ ಸಿದ್ದಾಪುರ:
ಸಂಸದ ಹಾಗೂ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜನ್ಮದಿನದ ಸಂಭ್ರಮದ ಅಂಗವಾಗಿ ತಾಲೂಕಿನ ಹಾರ್ಸಿಕಟ್ಟಾದ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಭಾನುವಾರ ‘ಮೆಗಾ ಆರೋಗ್ಯ ತಪಾಸಣಾ ಶಿಬಿರ’ವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್, ಶಿರಸಿ-ಸಿದ್ದಾಪುರ ಕಾಗೇರಿ ಅಭಿಮಾನಿ ಬಳಗ ಹಾಗೂ ಬಿಜೆಪಿ ಸಿದ್ದಾಪುರ ಮಂಡಲ ಈ ಕಾರ್ಯಕ್ರಮವನ್ನು ಜಂಟಿಯಾಗಿ ಪ್ರಾಯೋಜಿಸಿದ್ದವು. ಇದು ಯಾವುದೇ ರಾಜಕೀಯ ಪಕ್ಷದ ಅಥವಾ ಧರ್ಮದ ಚೌಕಟ್ಟಿಗೆ ಸೀಮಿತವಾಗಿರದೆ, ಸರ್ವ ಜನಾಂಗದ ಹಿತ ಬಯಸುವ ಸಾಮಾಜಿಕ ಕಳಕಳಿಯ ಸರ್ವಸ್ಪರ್ಶಿ ಕಾರ್ಯಕ್ರಮವಾಗಿ ಮೂಡಿಬಂದಿತು. ಹಾರ್ಸಿಕಟ್ಟಾ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳ ಕೊರತೆ ಇರುವುದನ್ನು ಮನಗಂಡು, ಸ್ಥಳೀಯ ಜನರಿಗೆ ಆರೋಗ್ಯ ಕುರಿತು ಜನಜಾಗೃತಿ ಉದ್ದೇಶದಿಂದ ಈ ಉಚಿತ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಅನಂತ ಹೆಗಡೆ ಗೊಂಟನಾಳ , "ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯವೇ ಮಹಾ ಭಾಗ್ಯ ಹಾಗೂ ನಿಜವಾದ ಸಂಪತ್ತಾಗಿದೆ. ಗ್ರಾಮೀಣ ಭಾಗದ ಪ್ರತಿಯೊಬ್ಬರೂ ಇಂತಹ ಉಚಿತ ತಪಾಸಣಾ ಶಿಬಿರಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು" ಎಂದು ಕರೆ ನೀಡಿದರು.
ಕ್ಷೇತ್ರದ ಚಿತ್ರಣ ಬದಲಿಸಿದ ಕಾಗೇರಿ: ನರೇಂದ್ರ ಹೆಗಡೆ ಹೋಂಡಗಾಶಿ
ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ನರೇಂದ್ರ ಹೆಗಡೆ ಹೋಂಡಗಾಶಿ ಮಾತನಾಡಿ, "ಸರಳ ಹಾಗೂ ಸಜ್ಜನ ರಾಜಕಾರಣಿಯಾದ ಕಾಗೇರಿ ಅವರ ಹುಟ್ಟುಹಬ್ಬವನ್ನು ಇವತ್ತು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಅನಂತಮೂರ್ತಿ ಅವರು ಇಂತಹ ಶಿಬಿರವನ್ನು ಆಯೋಜಿಸಿರುವುದು ಅವರ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ. ಹಿಂದೆ ಸಿದ್ದಾಪುರ ಅತ್ಯಂತ ಹಿಂದುಳಿದ, ಕೊನೆಗೆ ಒಂದು ಸರಿಯಾದ ಬಸ್ ಸ್ಟ್ಯಾಂಡ್ ಕೂಡ ಗತಿ ಇಲ್ಲದಂತಹ ತಾಲೂಕಾಗಿತ್ತು. ಆದರೆ ಕಾಗೇರಿಯವರು ಶಾಸಕರಾಗಿ, ಮಂತ್ರಿಯಾಗಿ ಹಾಗೂ ಸ್ಪೀಕರ್ ಆಗಿ ಸಲ್ಲಿಸಿದ ಅಪ್ರತಿಮ ಸೇವೆಯಿಂದಾಗಿ ಇಂದು ತಾಲೂಕಿನಾದ್ಯಂತ ಅತ್ಯಾಧುನಿಕ ಸೇತುವೆಗಳು, ಬಸ್ ಸ್ಟ್ಯಾಂಡ್, ಆಸ್ಪತ್ರೆ ಹಾಗೂ ಶಾಲೆಗಳು ನಿರ್ಮಾಣಗೊಂಡು ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಅನಂತಮೂರ್ತಿ ಹೆಗಡೆಯವರು ಕೂಡ ಇಂದು ಕಾಗೇರಿಯವರ ಅದೇ ಜನಸೇವೆಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ತಮ್ಮ ಟ್ರಸ್ಟ್ ಮೂಲಕ ಜಿಲ್ಲಾದ್ಯಂತ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವ ಅವರಿಗೆ ನಾವು ಕೃತಜ್ಞರಾಗಿರಬೇಕು. ಆರೋಗ್ಯದ ವಿಷಯದಲ್ಲಿ ಹಿಂದುಳಿದಿರುವ ಹಾರ್ಸಿಕಟ್ಟಾ ಭಾಗದಲ್ಲಿ ಇಂತಹ ಬೃಹತ್ ಶಿಬಿರ ನಡೆಸಿ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ" ಎಂದರು.
ಜನಸಾಮಾನ್ಯರಿಗೆ ಅನುಕೂಲವಾದರೆ ಶ್ರಮ ಸಾರ್ಥಕ: ಅನಂತಮೂರ್ತಿ ಹೆಗಡೆ
ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಮೋರ್ಚಾ ಅಧ್ಯಕ್ಷರಾದ ಅನಂತಮೂರ್ತಿ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, "ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಾಸಕರಾಗಿದ್ದಾಗ ಮತ್ತು ಈಗ ಸಂಸದರಾಗಿದ್ದಾಗಲೂ ತಮಗೆ ಅವಕಾಶ ಸಿಕ್ಕಾಗಲೆಲ್ಲ ಹಲವಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಿ, ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು 142 ಕೋಟಿ ರೂಪಾಯಿಗಳ ಭಾರಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಿ, ಸೂಪರ್ ಸ್ಪೆಷಾಲಿಟಿಯ ಎಲ್ಲ ವೈದ್ಯಕೀಯ ವಿಭಾಗಗಳು ಲಭ್ಯವಾಗುವಂತೆ ಮಾಡಿದ್ದಾರೆ. ಅಂತಹ ನಾಯಕರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿರುವ ಈ ಬೃಹತ್ ಶಿಬಿರವು ಗ್ರಾಮೀಣ ಜನಸಾಮಾನ್ಯರಿಗೆ ಅನುಕೂಲವಾದರೆ ಮಾತ್ರ ನಮ್ಮ ಶ್ರಮ ಸಾರ್ಥಕವಾಗುತ್ತದೆ" ಎಂದು ಅಭಿಪ್ರಾಯಪಟ್ಟರು.
ಉಚಿತ ತಪಾಸಣೆ, ಸ್ಕ್ರೀನಿಂಗ್ ಹಾಗೂ ರಕ್ತದಾನ:
ಶಿಬಿರದಲ್ಲಿ ಶಿರಸಿಯ ಪ್ರಸಿದ್ಧ ಟಿ.ಎಸ್.ಎಸ್. ಆಸ್ಪತ್ರೆ, ಮಾರಿಕಾಂಬಾ ಆಸ್ಪತ್ರೆ ಹಾಗೂ ಜೋಶಿ ಆಸ್ಪತ್ರೆಗಳ ನುರಿತ ತಜ್ಞ ವೈದ್ಯರ ತಂಡಗಳು ಪಾಲ್ಗೊಂಡಿದ್ದವು. ಜನರಲ್ ಮೆಡಿಸಿನ್ ತಜ್ಞ ಜೆ. ಕಾರಂತ, ಯೂರಾಲಜಿ ಸೂಪರ್ ಸ್ಪೆಷಲಿಸ್ಟ್ ಗಜಾನನ ಭಟ್ಟ, ಸ್ತ್ರೀರೋಗ ತಜ್ಞ ಶ್ರೀಧರ ವೈದ್ಯ, ಮಕ್ಕಳ ತಜ್ಞ ಆಶಿಶ್ ಜನ್ನು, ಚರ್ಮರೋಗ ತಜ್ಞೆ ಪ್ರಜ್ಞಾ ಜನ್ನು, ಕಣ್ಣಿನ ಸ್ಪೆಷಲಿಸ್ಟ್ ಕ್ಯಾನ್ಸರ್ ತಜ್ಞೆ ಮಮತಾ ಹೆಗಡೆ ಹಾಗೂ ಶಾರದಾ ಸತೀಶ್ ಸೇರಿದಂತೆ ವಿವಿಧ ವಿಭಾಗಗಳ ತಜ್ಞರು ರೋಗಿಗಳನ್ನು ತಪಾಸಣೆ ನಡೆಸಿ ಸೂಕ್ತ ಸಲಹೆ ಹಾಗೂ ಚಿಕಿತ್ಸೆ ನೀಡಿದರು.
ಇದರೊಂದಿಗೆ ಶಿರಸಿಯ ಎಂ.ಎಂ. ಜೋಶಿ ಗಣೇಶ ನೇತ್ರಾಲಯದ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಹಾಗೂ ಬೆಂಗಳೂರಿನ ಭಾರತೀಯ ಕ್ಯಾನ್ಸರ್ ಸೊಸೈಟಿ ಮತ್ತು ಅಸ್ಮಿತೆ ಫೌಂಡೇಶನ್ ವೈದ್ಯರ ತಂಡದಿಂದ ಮಹಿಳೆಯರಿಗಾಗಿ ವಿಶೇಷವಾಗಿ ಸ್ತನ ಕ್ಯಾನ್ಸರ್ ಸೇರಿದಂತೆ ಉಚಿತ ಕ್ಯಾನ್ಸರ್ ಸ್ಕ್ರೀನಿಂಗ್ ನಡೆಸಲಾಯಿತು. ಶಿಬಿರಕ್ಕೆ ಬಂದ ಸಾರ್ವಜನಿಕರಿಗೆ ಉಚಿತವಾಗಿ ಬಿಪಿ ಹಾಗೂ ಶುಗರ್ ಪರೀಕ್ಷೆ ನಡೆಸಿ, ಅಗತ್ಯವಿರುವ ಪ್ರಮುಖ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಪಿ.ಜಿ ಆಸ್ಪತ್ರೆಯ ಬ್ಲಡ್ ಸೆಂಟರ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಸುಮಾರು 300 ಕ್ಕಿಂತ ಹೆಚ್ಚಿನ
ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.
ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ ಕೆ, ಸಿದ್ದಾಪುರ ಬಿಜೆಪಿ ತಂಡ ಹಲವಾರು ಗಣ್ಯರು, ಅಪಾರ ಸಂಖ್ಯೆಯ ಕಾಗೇರಿ ಅಭಿಮಾನಿಗಳು ,ಸಮಾಜ ಪ್ರಮುಖರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



