ಯುವತಿಯನ್ನ ರೂಮ್‌ಗೆ ಕರೆದ ಪೊಲೀಸರು? ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಕಾರವಾರ ಮಹಿಳಾ ಠಾಣೆಯಲ್ಲಿ ಎಫ್‌ಐಆರ್

Jul 9, 2026 - 16:49
 0  169
ಯುವತಿಯನ್ನ ರೂಮ್‌ಗೆ ಕರೆದ ಪೊಲೀಸರು? ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಕಾರವಾರ ಮಹಿಳಾ ಠಾಣೆಯಲ್ಲಿ ಎಫ್‌ಐಆರ್

ಆಪ್ತ ನ್ಯೂಸ್ ಕಾರವಾರ:

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪಟ್ಟಣ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ 18 ವರ್ಷದ ಯುವತಿಗೆ ವಾಟ್ಸ್ಆಪ್ ಮೂಲಕ ಅಶ್ಲೀಲ ಸಂದೇಶ ಕಳುಹಿಸಿ, ರೂಮ್‌ಗೆ ಬರಲು ಒತ್ತಾಯಿಸಿ ಹಾಗೂ ದೂರವಾಣಿ ಮೂಲಕ ಅಸಭ್ಯವಾಗಿ ಮಾತನಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವ ಘಟನೆ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಜುಲೈ 8ರಂದು ರಾತ್ರಿ ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಂಡೇಲಿ ಪಟ್ಟಣ ಪೊಲೀಸ್ ಠಾಣೆಯ ಕಾನಸ್ಟೇಬಲ್ ಇಮ್ರಾನ್ ಹಾಗೂ ಮತ್ತೊಬ್ಬ ಕಾನಸ್ಟೇಬಲ್ ಮಾಂತೇಶ್ ವಿರುದ್ಧ ದೂರು ದಾಖಲಿಸಲಾಗಿದೆ.

ಏನಿದು ಪ್ರಕರಣ?

ದೂರುದಾರೆಯ ಹೇಳಿಕೆಯ ಪ್ರಕಾರ, ಜುಲೈ 4ರಂದು ಅಪಘಾತಕ್ಕೊಳಗಾಗಿದ್ದ ತನ್ನ ಸ್ನೇಹಿತನನ್ನು ಭೇಟಿ ಮಾಡಲು ಹಾಗೂ ಆತನ ಮೊಬೈಲ್ ಫೋನ್ ಪಡೆಯುವ ಉದ್ದೇಶದಿಂದ ಸ್ನೇಹಿತೆಯೊಂದಿಗೆ ದಾಂಡೇಲಿ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಠಾಣೆಯ ಆವರಣದಲ್ಲಿ ವಶಕ್ಕೆ ಪಡೆದಿದ್ದ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಲು ಹಣದ ಬೇಡಿಕೆ ಇಟ್ಟಿದ್ದು, ಬಳಿಕ ಹಣ ಪಡೆದ ನಂತರ ವಾಹನವನ್ನು ಬಿಡುಗಡೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಠಾಣೆಯಲ್ಲಿದ್ದ ಮೊಬೈಲ್ ಸಂಖ್ಯೆಯ ದುರ್ಬಳಕೆ ಆರೋಪ

ಪ್ರಕರಣದ ಎರಡು ದಿನಗಳ ಬಳಿಕ, ಪೊಲೀಸ್ ಠಾಣೆಯ ದಾಖಲೆಗಳಲ್ಲಿ ಲಭ್ಯವಿದ್ದ ತನ್ನ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಆರೋಪಿಗಳಲ್ಲಿ ಒಬ್ಬರು ವಾಟ್ಸ್ಆಪ್ ಮೂಲಕ ಸಂಪರ್ಕ ಸಾಧಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

ಜುಲೈ 6ರಂದು ರಾತ್ರಿ ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ತನ್ನನ್ನು ರೂಮ್‌ಗೆ ಬರಲು ಆಹ್ವಾನಿಸಿದ್ದಲ್ಲದೆ, ನಂತರ ದೂರವಾಣಿ ಕರೆ ಮಾಡಿ ಅಸಭ್ಯವಾಗಿ ಮಾತನಾಡಿ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.

ಆರಂಭದಲ್ಲಿ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ

ಈ ಕುರಿತು ಸಂಬಂಧಿಸಿದ ಪೊಲೀಸ್ ಠಾಣೆಯ ಪಿ.ಎಸ್.ಐ ಅವರ ಗಮನಕ್ಕೂ ವಿಷಯವನ್ನು ತಂದಿದ್ದರೂ ಆರಂಭದಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಯುವತಿ ನೇರವಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದೀಪನ್ ಅವರನ್ನು ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿದ್ದರು.

ದೂರಿನ ಗಂಭೀರತೆಯನ್ನು ಪರಿಗಣಿಸಿದ ಎಸ್‌ಪಿ ಅವರ ನಿರ್ದೇಶನದಂತೆ ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತನಿಖೆ ಆರಂಭ

ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಕಾರವಾರ ಮಹಿಳಾ ಪೊಲೀಸ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದೂರಿನಲ್ಲಿ ಮಾಡಲಾಗಿರುವ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ತನಿಖೆಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

"ರೂಮ್‌ಗೆ ಬನ್ನಿ" ಎಂದು ಸಂದೇಶ, ಅಸಭ್ಯ ಮಾತುಗಳ ಆರೋಪ

ಯುವತಿಯ ಆರೋಪದಂತೆ, ಜುಲೈ 6ರಂದು ರಾತ್ರಿ ವಾಟ್ಸ್ಆಪ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ನಗರದ ಲಾಡ್ಜ್‌ನಲ್ಲಿರುವ ರೂಮ್‌ಗೆ ಬರುವಂತೆ ಆಹ್ವಾನಿಸಲಾಗಿತ್ತು. ಬಳಿಕ ದೂರವಾಣಿ ಕರೆ ಮಾಡಿ ಅಸಭ್ಯವಾಗಿ ಮಾತನಾಡಿ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇನ್‌ಸ್ಟಾಗ್ರಾಂ ಮೂಲಕವೂ ಕಿರುಕುಳ?

ಯುವತಿ ನೀಡಿರುವ ಹೇಳಿಕೆಯಲ್ಲಿ, ಕಾನಸ್ಟೇಬಲ್ ಇಮ್ರಾನ್ ತನ್ನ ತಂದೆ-ತಾಯಿಯ ವಿಚ್ಛೇದನ ಪ್ರಕರಣದ ಸಂದರ್ಭದಲ್ಲಿ ಪರಿಚಿತರಾಗಿದ್ದು, ನಂತರ ಇನ್‌ಸ್ಟಾಗ್ರಾಂ ಮೂಲಕ ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದರು ಹಾಗೂ ತನ್ನನ್ನು ಫಾಲೋ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ಇದರ ನಂತರ ಮತ್ತೋರ್ವ ಕಾನಸ್ಟೇಬಲ್ ಮಾಂತೇಶ್ ಕೂಡ ಇನ್‌ಸ್ಟಾಗ್ರಾಂನಲ್ಲಿ ಸಂಪರ್ಕಿಸಿ ಸಂದೇಶ ಕಳುಹಿಸಿದ್ದಲ್ಲದೆ, ಬಳಿಕ ವಾಟ್ಸ್ಆಪ್ ಮೂಲಕವೂ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ನಗರದ ಲಾಡ್ಜ್‌ನಲ್ಲಿರುವ ರೂಮ್‌ಗೆ ಬರುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರಂಭದಲ್ಲಿ ಕ್ರಮವಿಲ್ಲ; ಎಸ್‌ಪಿ ಭೇಟಿಯಾದ ಬಳಿಕ ಎಫ್‌ಐಆರ್

ಈ ಕುರಿತು ಸಂಬಂಧಿಸಿದ ಪಿ.ಎಸ್.ಐ ಅವರಿಗೆ ಮಾಹಿತಿ ನೀಡಿದರೂ ಆರಂಭದಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಯುವತಿ ಆರೋಪಿಸಿದ್ದಾರೆ. ಬಳಿಕ ಕಾರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರನ್ನು ನೇರವಾಗಿ ಭೇಟಿ ಮಾಡಿ ದೂರು ಸಲ್ಲಿಸಿದ್ದು, ಅವರ ನಿರ್ದೇಶನದಂತೆ ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆ

ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸ್ಆಪ್ ಸಂದೇಶಗಳು, ಕರೆ ವಿವರಗಳು, ಸಾಮಾಜಿಕ ಜಾಲತಾಣದ ಸಂವಹನ ಹಾಗೂ ಇತರೆ ಡಿಜಿಟಲ್ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ.

ಸಾರ್ವಜನಿಕ ವಲಯದಲ್ಲಿ ಚರ್ಚೆ

ಕೆಲವೇ ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಮಂಕಿ ಪೊಲೀಸ್ ಠಾಣೆಯ ಪಿ.ಎಸ್.ಐ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಪೊಲೀಸ್ ಸಿಬ್ಬಂದಿಯ ವಿರುದ್ಧವೇ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಪ್ರಸ್ತುತ ಪ್ರಕರಣದ ತನಿಖೆ ಮುಂದುವರಿದಿದ್ದು, ಡಿಜಿಟಲ್ ಸಾಕ್ಷ್ಯಗಳು ಹಾಗೂ ಇತರ ದಾಖಲೆಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0