ಪುರೋಹಿತರ ಮನೆ ಕಳ್ಳತನ ಪ್ರಕರಣ ಭೇದಿಸಿದ ಯಲ್ಲಾಪುರ ಪೊಲೀಸರು: ಓರ್ವ ಅರೆಸ್ಟ್, ಮತ್ತೊಬ್ಬನಿಗಾಗಿ ಬಲೆ!
ಆಪ್ತ ನ್ಯೂಸ್ ಯಲ್ಲಾಪುರ:
ತಾಲೂಕಿನ ಹೊನ್ನಗದ್ದೆ ಸಮೀಪದ ಗಿಡಗಾರಿಯ ಪುರೋಹಿತರ ಮನೆಯ ಬೀಗ ಮುರಿದು ತಾಮ್ರ ಹಾಗೂ ಹಿತ್ತಾಳೆಯ ಬೆಲೆಬಾಳುವ ಪಾತ್ರೆಗಳನ್ನು ಕಳ್ಳತನ ಮಾಡಿದ್ದ ಪ್ರಕರಣವನ್ನು ಯಲ್ಲಾಪುರ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ಕಳುವಾಗಿದ್ದ ಸುಮಾರು ₹25 ಸಾವಿರ ಮೌಲ್ಯದ ಪಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಯಲ್ಲಾಪುರದಲ್ಲಿ ವಾಸವಿರುವ ಪುರೋಹಿತ ಗಿರೀಶ ಶಂಕರ ಭಟ್ ಅವರ ಗಿಡಗಾರಿಯಲ್ಲಿರುವ ಮೂಲಮನೆಯ ಹಿಂಬಾಗಿಲಿನ ಬೀಗ ಮುರಿದು ಕಳ್ಳರು ಒಳನುಗ್ಗಿದ್ದರು. ಮನೆಯಲ್ಲಿದ್ದ ಹಂಡೆ, ತಂಬಿಗೆ, ದೀಪಗಳು ಸೇರಿದಂತೆ ವಿವಿಧ ತಾಮ್ರ ಹಾಗೂ ಹಿತ್ತಾಳೆಯ ಪಾತ್ರೆಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಕಳುವಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹83,500 ಎಂದು ಅಂದಾಜಿಸಲಾಗಿತ್ತು. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿ ಆಧರಿಸಿ ನವೆಂಬರ್ 25ರಂದು ಕಾರ್ಯಾಚರಣೆ ನಡೆಸಿ, ಮುಂಡಗೋಡ ಮೂಲದ ಹಾಗೂ ಪ್ರಸ್ತುತ ಯಲ್ಲಾಪುರದ ಗಣಪತಿ ಗಲ್ಲಿಯಲ್ಲಿ ವಾಸವಿರುವ ಗುಜರಿ ವ್ಯಾಪಾರಿ ಕುಮಾರ ಬಾಳು ಪಡಿಯಾರ (42) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ ಕಳುವಾಗಿದ್ದ ಪಾತ್ರೆಗಳ ಪೈಕಿ ಸುಮಾರು ₹25 ಸಾವಿರ ಮೌಲ್ಯದ ತಾಮ್ರ ಮತ್ತು ಹಿತ್ತಾಳೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾದ ಗಣಪತಿ ಗಲ್ಲಿಯ ಮೊಟಕಾ ವ್ಯಾಪಾರಿ ದಿಲೀಪ ರಾಜೇಶ ಗೋಸಾವಿ (21) ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮನೆ ಕಳ್ಳತನ ಪ್ರಕರಣವನ್ನು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸುವಲ್ಲಿ ಯಲ್ಲಾಪುರ ಪೊಲೀಸರ ಕಾರ್ಯಾಚರಣೆ ಯಶಸ್ವಿಯಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0