ದೇವರ ಕೋಣೆಗೆ ಬಂದ ನಾಗರಹಾವು: ಅರಣ್ಯ ಇಲಾಖೆ ಕ್ಷಿಪ್ರ ಕಾರ್ಯಾಚರಣೆ, ಸುರಕ್ಷಿತವಾಗಿ ಕಾಡಿಗೆ ವಾಪಾಸ್

Jul 1, 2026 - 20:07
 0  187
ದೇವರ ಕೋಣೆಗೆ ಬಂದ ನಾಗರಹಾವು: ಅರಣ್ಯ ಇಲಾಖೆ ಕ್ಷಿಪ್ರ ಕಾರ್ಯಾಚರಣೆ, ಸುರಕ್ಷಿತವಾಗಿ ಕಾಡಿಗೆ ವಾಪಾಸ್

ಆಪ್ತ ನ್ಯೂಸ್ ಹಾನಗಲ್:

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಾನಗಲ್ ವಲಯ ವ್ಯಾಪ್ತಿಯ ಅರೆಗೊಪ್ಪಾ ಗ್ರಾಮದಲ್ಲಿ ಮನೆಯ ದೇವರ ಕೋಣೆಯೊಳಗೆ ನಾಗರಹಾವು ಕಾಣಿಸಿಕೊಂಡ ಘಟನೆ ಆತಂಕ ಸೃಷ್ಟಿಸಿತು. ಆದರೆ ಅರಣ್ಯ ಇಲಾಖೆಯ ತ್ವರಿತ ಕಾರ್ಯಾಚರಣೆಯಿಂದ ಹಾವನ್ನು ಯಾವುದೇ ಅಪಾಯವಾಗದಂತೆ ಸುರಕ್ಷಿತವಾಗಿ ರಕ್ಷಿಸಿ ಸಮೀಪದ ಕಾಡಿಗೆ ಬಿಡಲಾಯಿತು.

ಅರೆಗೊಪ್ಪಾ ಶಾಖೆಯ ಲೋಕೇಶ್ ಕೆಲೂರ್ ಅವರ ಮನೆಯಲ್ಲಿ ದೇವರ ಕೋಣೆಯೊಳಗೆ ನಾಗರಹಾವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ತಕ್ಷಣವೇ ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಮಾಹಿತಿ ದೊರೆಯುತ್ತಿದ್ದಂತೆಯೇ ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರು ಸ್ಥಳಕ್ಕೆ ಧಾವಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ನಾಗರಹಾವನ್ನು ಯಶಸ್ವಿಯಾಗಿ ಹಿಡಿದು ರಕ್ಷಿಸಿದರು.

ಬಳಿಕ ಗ್ರಾಮಸ್ಥರ ಸಮ್ಮುಖದಲ್ಲಿ ಹಾವನ್ನು ಅದರ ನೈಸರ್ಗಿಕ ವಾಸಸ್ಥಾನವಾದ ಸಮೀಪದ ಕಾಡಿಗೆ ಸುರಕ್ಷಿತವಾಗಿ ಬಿಡಲಾಯಿತು. ಇದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಈ ಕಾರ್ಯಾಚರಣೆಯಲ್ಲಿ ಲೋಕೇಶ್, ಪಕ್ಕಿರೇಶ್, ಚಿರಂಜೀವಿ ಹಾಗೂ ಪ್ರಿಯಾ ಅವರು ಸಹಕರಿಸಿದರು. ಅರಣ್ಯ ಇಲಾಖೆಯ ಸಮಯೋಚಿತ ಸ್ಪಂದನೆ ಹಾಗೂ ಹಾವಿನ ರಕ್ಷಣೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆಯ ಮನವಿ

ಅರಣ್ಯ ಇಲಾಖೆ ಸಾರ್ವಜನಿಕರಿಗೆ, ಮನೆ ಅಥವಾ ಸುತ್ತಮುತ್ತ ಹಾವುಗಳು ಕಂಡುಬಂದರೆ ಅವುಗಳನ್ನು ಹೊಡೆಯಲು ಅಥವಾ ಹಿಡಿಯಲು ಪ್ರಯತ್ನಿಸದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದೆ. ಹಾವುಗಳೂ ಪರಿಸರದ ಜೀವವೈವಿಧ್ಯದ ಪ್ರಮುಖ ಭಾಗವಾಗಿದ್ದು, ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0