ನವದಂಪತಿಗೆ ಗಿಡ ನೀಡಿ ಪರಿಸರ ಕಾಳಜಿ; ಮತದಾರರ ಪಟ್ಟಿ ಪರಿಷ್ಕರಣೆಗೆ ಜಾಗೃತಿ ಸಂದೇಶ

ದಶಲಕ್ಷ ಗಿಡ ನೆಡುವ ಅಭಿಯಾನದಡಿ ಬರ್ಗಿಯಲ್ಲಿ ವಿಶಿಷ್ಟ ಕಾರ್ಯಕ್ರಮ

Jul 13, 2026 - 16:01
 0  83
ನವದಂಪತಿಗೆ ಗಿಡ ನೀಡಿ ಪರಿಸರ ಕಾಳಜಿ; ಮತದಾರರ ಪಟ್ಟಿ ಪರಿಷ್ಕರಣೆಗೆ ಜಾಗೃತಿ ಸಂದೇಶ

ಆಪ್ತ ನ್ಯೂಸ್ ಕುಮಟಾ:

ಮದುವೆ ಸಮಾರಂಭವನ್ನು ಪರಿಸರ ಸಂರಕ್ಷಣೆ ಹಾಗೂ ಪ್ರಜಾಪ್ರಭುತ್ವದ ಜಾಗೃತಿಗೆ ವೇದಿಕೆಯಾಗಿಸುವ ಅಪರೂಪದ ಪ್ರಯತ್ನ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆಯಿತು. ದಶಲಕ್ಷ ಗಿಡ ನೆಡುವ ಅಭಿಯಾನದ ಅಂಗವಾಗಿ ನೂತನ ವಧು-ವರರಿಗೆ ಗಿಡವನ್ನು ಉಡುಗೊರೆಯಾಗಿ ನೀಡಿ, ಪರಿಸರ ಸಂರಕ್ಷಣೆಯೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆಯ ಮಹತ್ವವನ್ನು ಸಾರುವ ವಿಶೇಷ ಕಾರ್ಯಕ್ರಮ ಗಮನ ಸೆಳೆಯಿತು.

ಬರ್ಗಿಯ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಸ್ಥಳೀಯ ಅರಣ್ಯವಾಸಿಗಳಾದ ದಿವಂಗತ ಶಂಕರ್ ಹಾಗೂ ಸೀತಾ ಹರಿಕಾಂತ ಅವರ ಪುತ್ರ ದಿನೇಶ್ ಮತ್ತು ಕಿಮಾನಿಯ ಮಾದೇವ್ ಹಾಗೂ ರಾಮಚಂದ್ರ ಹರಿಕಾಂತ ಅವರ ಪುತ್ರಿ ಅಕ್ಷತಾ ಅವರ ವಿವಾಹ ನೆರವೇರಿತು. ವಿವಾಹದ ಬಳಿಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಪ್ರಮುಖರು ನವದಂಪತಿಗೆ ಗಿಡವನ್ನು ನೀಡಿ ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ವೇದಿಕೆಯ ಪ್ರಮುಖರು, "ಮದುವೆಯಂತಹ ಶುಭ ಸಮಾರಂಭಗಳಲ್ಲಿ ಗಿಡ ನೀಡುವ ಸಂಪ್ರದಾಯ ಬೆಳೆಸಿದರೆ ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಲಿದೆ. ಪ್ರತಿಯೊಬ್ಬರೂ ತಮ್ಮ ಜೀವನದ ಪ್ರಮುಖ ಕ್ಷಣಗಳನ್ನು ಒಂದು ಗಿಡ ನೆಡುವ ಮೂಲಕ ಸ್ಮರಣೀಯವಾಗಿಸಬೇಕು" ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಅರಣ್ಯವಾಸಿಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣಾ ಅಭಿಯಾನದ ಕುರಿತು ಜಾಗೃತಿ ಮೂಡಿಸಲಾಯಿತು. ಮತದಾರರ ಪಟ್ಟಿಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರು ಕಡ್ಡಾಯವಾಗಿ ಸೇರ್ಪಡೆಯಾಗಬೇಕು ಹಾಗೂ ಅಗತ್ಯ ತಿದ್ದುಪಡಿಗಳನ್ನು ಸಮಯಕ್ಕೆ ಸರಿಯಾಗಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, ತಾಲೂಕು ಅಧ್ಯಕ್ಷ ಮಂಜುನಾಥ ಮರಾಠಿ (ನಾಗೂರು), ಸಂಚಾಲಕ ರಾಜೀವ್ ಎಂ. ಗೌಡ (ಕತಗಾಲ), ಗ್ರೀನ್ ಕಾರ್ಡ್ ಪ್ರಮುಖರಾದ ಸುನೀಲಾ ಸೇರಿದಂತೆ ಕುಟುಂಬದ ಹಿರಿಯರು, ಬಂಧುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪರಿಸರ ಸಂರಕ್ಷಣೆ ಮತ್ತು ಮತದಾನದ ಅರಿವು ಎಂಬ ಎರಡು ಸಾಮಾಜಿಕ ಸಂದೇಶಗಳನ್ನು ಒಂದೇ ವೇದಿಕೆಯಲ್ಲಿ ಜನರಿಗೆ ತಲುಪಿಸಿದ ಈ ವಿಶಿಷ್ಟ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0