ಸಂಸದ ಕಾಗೇರಿ ಜನ್ಮದಿನ: ಕೋಳಿಗಾರ ಸರ್ಕಾರಿ ಶಾಲೆಗೆ ವಾಟರ್ ಫಿಲ್ಟರ್ ದೇಣಿಗೆ; ಅಡುಗೆ ಕೋಣೆ ನಿರ್ಮಾಣಕ್ಕೂ ನೆರವು ನೀಡುವ ಭರವಸೆ
ಆಪ್ತ ನ್ಯೂಸ್ ಶಿರಸಿ:
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜನ್ಮದಿನದ ಅಂಗವಾಗಿ ತಾಲೂಕಿನ ಕೋಳಿಗಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್ ಅನ್ನು ದೇಣಿಗೆಯಾಗಿ ನೀಡಲಾಯಿತು. ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷರು ಹಾಗೂ ಟ್ರಸ್ಟ್ ಅಧ್ಯಕ್ಷರಾದ ಅನಂತಮೂರ್ತಿ ಹೆಗಡೆ ಅವರು ಶಾಲೆಗೆ ಈ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅನಂತಮೂರ್ತಿ ಹೆಗಡೆ, ಸಮಾಜಮುಖಿ ಚಿಂತನೆ ಹೊಂದಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಜನ್ಮದಿನವನ್ನು ಜನೋಪಯೋಗಿ ಕಾರ್ಯದ ಮೂಲಕ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು. "ಅಭಿವೃದ್ಧಿ ಚಿಂತನೆಯುಳ್ಳ ನಮ್ಮ ಆತ್ಮೀಯ ಸಂಸದರಿಗೆ ಭಗವಂತನು ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಜನಸೇವೆ ಮಾಡುವ ಶಕ್ತಿಯನ್ನು ನೀಡಲಿ. ಜನ್ಮದಿನವನ್ನು ಕೇವಲ ಶುಭಾಶಯಗಳ ಮಟ್ಟಕ್ಕೆ ಸೀಮಿತಗೊಳಿಸದೆ, ಸಮಾಜಕ್ಕೆ ಉಪಯೋಗವಾಗುವ ಕಾರ್ಯಗಳ ಮೂಲಕ ಆಚರಿಸಬೇಕು ಎಂಬ ಉದ್ದೇಶದಿಂದ ಶಾಲೆಗೆ ವಾಟರ್ ಫಿಲ್ಟರ್ ನೀಡಿದ್ದೇವೆ," ಎಂದು ಹೇಳಿದರು.
ತಮ್ಮ ಟ್ರಸ್ಟ್ ವತಿಯಿಂದ ಈಗಾಗಲೇ ಅನೇಕ ಸರ್ಕಾರಿ ಶಾಲೆಗಳು ಹಾಗೂ ವಿವಿಧ ಸಾರ್ವಜನಿಕ ಸಂಸ್ಥೆಗಳಿಗೆ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್‌ಗಳನ್ನು ಒದಗಿಸಿರುವುದಾಗಿ ತಿಳಿಸಿದ ಅವರು, ಕೋಳಿಗಾರ ಶಾಲೆಯಲ್ಲಿ ಅಡುಗೆ ಕೋಣೆ ನಿರ್ಮಾಣಕ್ಕೆ ಆರ್ಥಿಕ ನೆರವಿನ ಅಗತ್ಯವಿದೆ ಎಂಬ ವಿಷಯ ತಿಳಿದುಬಂದಿದ್ದು, ಅದರ ನಿರ್ಮಾಣಕ್ಕೂ ತಮ್ಮಿಂದಾಗುವ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
"ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ. ದಾನ ಮಾಡುವ ಗುಣ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಸಮಾಜದಿಂದ ದೊರೆಯುವ ಗೌರವ ಮತ್ತು ಸನ್ಮಾನವು ಸಾಧನೆಯ ಅಂತ್ಯವಲ್ಲ, ಅದು ಇನ್ನಷ್ಟು ಜವಾಬ್ದಾರಿಯೊಂದಿಗೆ ಸಮಾಜ ಸೇವೆ ಮಾಡುವ ಪ್ರೇರಣೆಯಾಗಿದೆ," ಎಂದು ಅನಂತಮೂರ್ತಿ ಹೆಗಡೆ ಹೇಳಿದರು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ ಹೆಗಡೆ ಮಾತನಾಡಿ, ಮನುಷ್ಯ ಸಂಪಾದಿಸುವ ಹಣ ಮತ್ತು ಆಸ್ತಿ ಶಾಶ್ವತವಲ್ಲ. ಆದರೆ ಸಮಾಜಕ್ಕಾಗಿ ಮಾಡುವ ಸೇವೆ ಮತ್ತು ಮಾನವೀಯ ಕಾರ್ಯಗಳು ಎಂದೆಂದಿಗೂ ಉಳಿಯುತ್ತವೆ ಎಂದು ಹೇಳಿದರು.
"ಅನಂತಮೂರ್ತಿ ಹೆಗಡೆಯವರು ಕಷ್ಟದಲ್ಲಿರುವವರಿಗೆ ನಿರಂತರವಾಗಿ ನೆರವಾಗುತ್ತಾ ಬಂದಿದ್ದಾರೆ. ಈಗಾಗಲೇ 150ಕ್ಕೂ ಹೆಚ್ಚು ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನೀಡಿರುವುದು ಶ್ಲಾಘನೀಯ. ಇದೀಗ ಸಂಸದ ಕಾಗೇರಿಯವರ ಜನ್ಮದಿನದ ಅಂಗವಾಗಿ ನಮ್ಮ ಕೋಳಿಗಾರ ಸರ್ಕಾರಿ ಶಾಲೆಗೂ ವಾಟರ್ ಫಿಲ್ಟರ್ ನೀಡಿರುವುದು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ. ಅವರ ಸಮಾಜಮುಖಿ ಕಾರ್ಯಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು," ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಅನಂತಮೂರ್ತಿ ಹೆಗಡೆಯವರನ್ನು ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಶಿಕ್ಷಕ ವೃಂದ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ವಿನಾಯಕ ಭಟ್, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ರಮ್ಯಾ ಹೆಗಡೆ, ಶಾಲೆಯ ಮುಖ್ಯೋಪಾಧ್ಯಾಯೆ ಸುರೇಖಾ ಜಿ. ಕೊಡಸರ, ಮಹಾಬಲೇಶ್ವರ್ ಹೆಗಡೆ ಸೇರಿದಂತೆ ಹಲವು ಗಣ್ಯರು, ಶಿಕ್ಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಕ್ಷಕಿ ಸುಧಾ ಎಸ್. ಹೆಗಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



