ಅಪರಿಚಿತ ವಾಹನ ಡಿಕ್ಕಿಗೆ ಕಾನಕುರಿ ಬಲಿ; ಹನುಮಂತಿ ಸಮೀಪ ದುರ್ಘಟನೆ

Jul 12, 2026 - 20:15
 0  155
ಅಪರಿಚಿತ ವಾಹನ ಡಿಕ್ಕಿಗೆ ಕಾನಕುರಿ ಬಲಿ; ಹನುಮಂತಿ ಸಮೀಪ ದುರ್ಘಟನೆ

ಆಪ್ತ ನ್ಯೂಸ್ ಶಿರಸಿ:

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕುಮಟಾ ರಸ್ತೆಯ ಸಿರ್ಸಿಮಕ್ಕಿ-ಹನುಮಂತಿ ಭಾಗದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕಾಡಿನ ಅಪರೂಪದ ಜೀವಿಗಳಲ್ಲೊಂದಾದ ಕಾನಕುರಿ (ಸುಮಾರು 4ರಿಂದ 5 ವರ್ಷದ) ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

ಹನುಮಂತಿ ಚೆಕ್‌ಪೋಸ್ಟ್‌ ಮತ್ತು ಹಾಲ್ ಡೈರಿ ನಡುವಿನ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ. ರಸ್ತೆ ದಾಟುವ ವೇಳೆ ಅಥವಾ ಹೆದ್ದಾರಿ ಸಮೀಪ ಸಂಚರಿಸುತ್ತಿದ್ದ ಕಾನಕುರಿಗೆ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಡಿಕ್ಕಿ ಹೊಡೆದ ವಾಹನ ಯಾವುದು ಎಂಬುದು ಇನ್ನೂ ಪತ್ತೆಯಾಗಿಲ್ಲ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿರಸಿ ವಲಯ ಅರಣ್ಯಾಧಿಕಾರಿ ಗಿರೀಶ ನಾಯ್ಕ್ ಅವರ ನೇತೃತ್ವದಲ್ಲಿ ಸ್ಥಳ ಮಹಜರು ನಡೆಸಲಾಗಿದ್ದು, ಕಾನಕುರಿಯ ಮೃತದೇಹವನ್ನು ಪರಿಶೀಲಿಸಿ ಮುಂದಿನ ಕಾನೂನು ಹಾಗೂ ಇಲಾಖಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸದ್ಯ ಈ ದುರ್ಘಟನೆ ಹೇಗೆ ಸಂಭವಿಸಿತು, ಯಾವ ವಾಹನ ಡಿಕ್ಕಿ ಹೊಡೆದಿದೆ ಹಾಗೂ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆಯೇ ಎಂಬ ಕುರಿತು ಅರಣ್ಯ ಇಲಾಖೆ ತನಿಖೆ ಆರಂಭಿಸಿದೆ. ತನಿಖೆಯ ಬಳಿಕವೇ ಘಟನೆಯ ಸಂಪೂರ್ಣ ಸತ್ಯಾಂಶ ಹೊರಬೀಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಭಾಗವು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ಕಾಡು ಪ್ರಾಣಿಗಳು ಆಗಾಗ್ಗೆ ರಸ್ತೆ ದಾಟುತ್ತಿರುತ್ತವೆ. ಆದ್ದರಿಂದ ವಾಹನ ಸವಾರರು ವೇಗ ನಿಯಂತ್ರಿಸಿಕೊಂಡು ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.

ಅರಣ್ಯ ಪ್ರದೇಶಗಳ ಮೂಲಕ ಹಾದುಹೋಗುವ ರಸ್ತೆಗಳಲ್ಲಿ ವಾಹನಗಳ ಅತಿವೇಗದಿಂದ ಕಾಡುಪ್ರಾಣಿಗಳ ಸಾವಿನ ಘಟನೆಗಳು ಮರುಕಳಿಸುತ್ತಿರುವುದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ. ಇಂತಹ ಅಮೂಲ್ಯ ವನ್ಯಜೀವಿಗಳ ಸಂರಕ್ಷಣೆಗೆ ವಾಹನ ಸವಾರರ ಜವಾಬ್ದಾರಿಯುತ ಚಾಲನೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಕಟ್ಟುನಿಟ್ಟಿನ ಕ್ರಮ ಅಗತ್ಯವಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0