ಆರತಿಬೈಲ್ ಘಟ್ಟದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ; ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ

Jul 10, 2026 - 19:37
 0  132
ಆರತಿಬೈಲ್ ಘಟ್ಟದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ; ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ

ಆಪ್ತ ನ್ಯೂಸ್ ಯಲ್ಲಾಪುರ:

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆರತಿಬೈಲ್ ಘಟ್ಟದಲ್ಲಿ ಶುಕ್ರವಾರ ಮುಂಜಾನೆ ಗ್ಯಾಸ್ ಸಾಗಿಸುತ್ತಿದ್ದ ಟ್ಯಾಂಕರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ಸಮಾಧಾನದ ಸಂಗತಿಯಾಗಿದೆ.

ಟ್ಯಾಂಕರ್ ಪಲ್ಟಿಯಾದ ಬಳಿಕ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಅದೃಷ್ಟವಶಾತ್ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆಯಾಗದ ಕಾರಣ ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಮುನ್ನೆಚ್ಚರಿಕಾ ಕ್ರಮವಾಗಿ ವಾಹನಗಳ ಸಂಚಾರವನ್ನು ಕೆಲಕಾಲ ನಿಯಂತ್ರಿಸಿ, ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಯಿತು.

ಸತತ ಅಪಘಾತಗಳಿಂದ ಹೆಚ್ಚಿದ ಆತಂಕ

ಆರತಿಬೈಲ್ ಘಟ್ಟದಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಮರುಕಳಿಸುತ್ತಿರುವುದು ವಾಹನ ಸವಾರರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಕೆಲವೇ ದಿನಗಳ ಹಿಂದೆ ಇದೇ ಘಟ್ಟದಲ್ಲಿ ಕ್ರೂಸರ್ ವಾಹನ ಅಪಘಾತಕ್ಕೀಡಾಗಿ ಏಳು ಮಂದಿ ಮೃತಪಟ್ಟ ದುರ್ಘಟನೆ ಇನ್ನೂ ಜನಮನದಿಂದ ಮಾಸುವ ಮುನ್ನವೇ ಇದೀಗ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಎಚ್ಚರಿಕೆಯಿಂದ ಸಂಚರಿಸಲು ಪೊಲೀಸರ ಮನವಿ

ಆರತಿಬೈಲ್ ಘಟ್ಟದ ತೀವ್ರ ತಿರುವುಗಳು, ಕಡಿದಾದ ಇಳಿಜಾರು ಹಾಗೂ ಮಳೆಗಾಲದಲ್ಲಿ ರಸ್ತೆ ಜಾರುವ ಸ್ಥಿತಿಯಿರುವುದರಿಂದ ಈ ಮಾರ್ಗ ಅಪಾಯಕಾರಿಯಾಗಿದೆ. ಆದ್ದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರು ವೇಗ ನಿಯಂತ್ರಣದಲ್ಲಿಟ್ಟು ಅತ್ಯಂತ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0