ಮುಂಡಗೋಡಿನ ಬಾಲಕಿಯ ಮೇಲಿನ ದೌರ್ಜನ್ಯಕ್ಕೆ ಮೌನವೇ? ಸ್ವಯಂಘೋಷಿತ ಮುಖಂಡರ ಇಬ್ಬಗೆ ನೀತಿಗೆ ಜನಾಕ್ರೋಶ!
ಹಕ್ಕುಗಳ ರಕ್ಷಣೆಯ ಹೆಸರಿನಲ್ಲಿ ಸದಾ ಪತ್ರಿಕಾ ಹೇಳಿಕೆ ನೀಡುವವರು, ತಮ್ಮದೇ ಸಮುದಾಯದ ಅಪ್ರಾಪ್ತ ಬಾಲಕಿಯ ಮೇಲಿನ ದೌರ್ಜನ್ಯದ ಬಗ್ಗೆ ತುಟಿ ಬಿಚ್ಚದಿರುವುದೇಕೆ?
ಆಪ್ತ ನ್ಯೂಸ್ ಶಿರಸಿ:
ಸಮಾಜವೇ ತಲೆತಗ್ಗಿಸುವಂತಹ ಮುಂಡಗೋಡಿನ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದರೂ, ಈ ಘಟನೆ ಕುರಿತು ಶಿರಸಿಯ ಕೆಲವು ಸ್ವಯಂಘೋಷಿತ ಮುಖಂಡರು ಮೌನ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಿಂದುಳಿದ ವರ್ಗಗಳು ಹಾಗೂ ಪರಿಶಿಷ್ಟ ಸಮುದಾಯಗಳ ಹಕ್ಕುಗಳ ರಕ್ಷಕರಂತೆ ಬಿಂಬಿಸಿಕೊಳ್ಳುವವರ ಈ ಮೌನಕ್ಕೆ ಜನಸಾಮಾನ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮುಂಡಗೋಡಿನಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ ಅಪ್ರಾಪ್ತ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿ, ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದ ಆಘಾತಕಾರಿ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಪ್ರಕರಣ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಘಟನೆಯ ಆಕ್ರೋಶದ ಹಿನ್ನೆಲೆಯಲ್ಲಿ ಆರೋಪಿಯ ಮನೆ ಮೇಲೂ ದಾಳಿ ನಡೆಸಿ ಧ್ವಂಸಗೊಳಿಸಿದ ಘಟನೆ ನಡೆದಿತ್ತು.
ಈ ಅಮಾನವೀಯ ಕೃತ್ಯವನ್ನು ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದರು. ಬಾಲಕಿಗೆ ನ್ಯಾಯ ದೊರಕಬೇಕು, ಇಂತಹ ಕೃತ್ಯ ಎಸಗುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಆಗ್ರಹವೂ ಕೇಳಿಬಂದಿತ್ತು.
ಆದರೆ, ಸದಾ ಸಾಮಾಜಿಕ, ರಾಜಕೀಯ ಹಾಗೂ ಸಾರ್ವಜನಿಕ ವಿಚಾರಗಳ ಕುರಿತು ಪತ್ರಿಕಾ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುವ ಶಿರಸಿಯ ಕೆಲವು ಯುವ ಮುಖಂಡರು ಈ ಗಂಭೀರ ಪ್ರಕರಣದ ಕುರಿತು ಕನಿಷ್ಠ ಖಂಡನಾ ಹೇಳಿಕೆಯನ್ನೂ ನೀಡದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸಂವಿಧಾನ, ಬೆಟ್ಟ-ಗುಡ್ಡಗಳ ಸಂರಕ್ಷಣೆ, ಜನಸಾಮಾನ್ಯರ ಹಕ್ಕುಗಳು, ರಾಜಕೀಯ ನಾಯಕರ ನಡೆ-ನುಡಿ, ಪ್ರಾಣಿ-ಪಕ್ಷಿಗಳ ರಕ್ಷಣೆ ಸೇರಿದಂತೆ ನಾನಾ ವಿಚಾರಗಳಿಗೆ ಧ್ವನಿಯಾಗುವವರು, ತಮ್ಮದೇ ಸಮುದಾಯದ ಅಪ್ರಾಪ್ತ ಬಾಲಕಿಯೊಬ್ಬಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾದಾಗ ಏಕೆ ಮೌನವಾಗಿದ್ದಾರೆ? ಮಹಿಳೆ ಮತ್ತು ಮಕ್ಕಳ ಸುರಕ್ಷತೆಯಂತಹ ಸೂಕ್ಷ್ಮ ವಿಚಾರದಲ್ಲಿ ಧ್ವನಿ ಎತ್ತಲು ಹಿಂದೇಟು ಹಾಕುತ್ತಿರುವುದೇಕೆ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಬೇಕಾದ ವಿಚಾರಕ್ಕೆ ಮಾತ್ರ ಧ್ವನಿ, ಉಳಿದ ವಿಚಾರಗಳಿಗೆ ಮೌನವೇ?
ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳಲ್ಲಿ ನಿರಂತರವಾಗಿ ಮಾತನಾಡುವವರು, ತಮ್ಮ ರಾಜಕೀಯ ಅಥವಾ ವೈಯಕ್ತಿಕ ಲಾಭಕ್ಕೆ ಸಂಬಂಧಿಸದ ವಿಚಾರಗಳಲ್ಲಿ ಮೌನ ವಹಿಸುವುದು ಯಾವ ರೀತಿಯ ಸಾಮಾಜಿಕ ಬದ್ಧತೆ ಎಂಬ ಚರ್ಚೆ ಆರಂಭವಾಗಿದೆ. ಹಕ್ಕುಗಳ ರಕ್ಷಣೆ ಎಂಬುದು ಆಯ್ದ ವಿಚಾರಗಳಿಗೆ ಮಾತ್ರ ಸೀಮಿತವಾಗಬಾರದು. ಅನ್ಯಾಯ ಯಾರಿಗೆ ನಡೆದರೂ ಅದರ ವಿರುದ್ಧ ಧ್ವನಿ ಎತ್ತುವುದು ನಿಜವಾದ ಸಾಮಾಜಿಕ ನಾಯಕತ್ವದ ಲಕ್ಷಣ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಘಟನೆ ನಡೆದು ಹಲವು ದಿನಗಳು ಕಳೆದರೂ ಈ ಮುಖಂಡರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದಿರುವುದು ಅವರ ಸಾಮಾಜಿಕ ಕಾಳಜಿಯ ನೈಜ ಸ್ವರೂಪದ ಬಗ್ಗೆ ಜನರಲ್ಲಿ ಅನುಮಾನ ಮೂಡಿಸಿದೆ. ಪ್ರಚಾರಕ್ಕೆ ಅನುಕೂಲವಾಗುವ ವಿಚಾರಗಳಿಗೆ ಮಾತ್ರ ಪತ್ರಿಕಾ ಹೇಳಿಕೆ ನೀಡುವ, ಇತರ ಗಂಭೀರ ಘಟನೆಗಳ ಬಗ್ಗೆ ಮೌನ ವಹಿಸುವ ಇಂತಹ ಇಬ್ಬಗೆ ನೀತಿ ಎಷ್ಟು ಸರಿ ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ.
ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಶೋಷಿತರ ಹಕ್ಕುಗಳ ಬಗ್ಗೆ ಮಾತನಾಡುವವರು, ಅಪ್ರಾಪ್ತ ಬಾಲಕಿಯ ಮೇಲಿನ ದೌರ್ಜನ್ಯದಂತಹ ಗಂಭೀರ ವಿಚಾರದಲ್ಲೂ ಪಕ್ಷ, ಜಾತಿ, ವೈಯಕ್ತಿಕ ಲಾಭ-ನಷ್ಟಗಳನ್ನು ಬದಿಗಿಟ್ಟು ಧ್ವನಿ ಎತ್ತಬೇಕಲ್ಲವೇ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
What's Your Reaction?
Like
0
Dislike
1
Love
0
Funny
0
Angry
0
Sad
0
Wow
0