ನೀಟ್ ಪೇಪರ್ ಸೋರಿಕೆ ಪ್ರಕರಣ: ವಿದ್ಯಾರ್ಥಿ ಹೋರಾಟಕ್ಕೆ ಮಣಿದ ಕೇಂದ್ರ; ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

Jul 25, 2026 - 16:13
 0  79
ನೀಟ್ ಪೇಪರ್ ಸೋರಿಕೆ ಪ್ರಕರಣ: ವಿದ್ಯಾರ್ಥಿ ಹೋರಾಟಕ್ಕೆ ಮಣಿದ ಕೇಂದ್ರ; ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಆಪ್ತ ನ್ಯೂಸ್ ನವದೆಹಲಿ:

ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದ್ದ ನೀಟ್ (NEET) ಪೇಪರ್ ಸೋರಿಕೆ ಹಾಗೂ ಪರೀಕ್ಷಾ ಅಕ್ರಮ ಪ್ರಕರಣ ಹೊಸ ರಾಜಕೀಯ ತಿರುವು ಪಡೆದಿದ್ದು, ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ವಿದ್ಯಾರ್ಥಿಗಳ ನಿರಂತರ ಹೋರಾಟದ ನಡುವೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶನಿವಾರ ಅವರು ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿರುವುದಾಗಿ ಸಾಮಾಜಿಕ ಜಾಲತಾಣ X ಮೂಲಕ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ದೆಹಲಿಯ ಜಂತರ್ ಮಂತರ್ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಳೆದ ಒಂದು ತಿಂಗಳಿನಿಂದ ಧರಣಿ ನಡೆಸುತ್ತಿದ್ದು, ದೇಶದ ವಿವಿಧ ರಾಜ್ಯಗಳಿಂದ ಬಂದ ಅಭ್ಯರ್ಥಿಗಳು ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನೆಯ ಪ್ರಮುಖ ಬೇಡಿಕೆಗಳಲ್ಲಿ ಶಿಕ್ಷಣ ಸಚಿವರ ರಾಜೀನಾಮೆ, ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದು ಹಾಗೂ ನೀಟ್ ಪೇಪರ್ ಸೋರಿಕೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸಬೇಕು ಎಂಬ ಮೂರು ಪ್ರಮುಖ ಅಂಶಗಳು ಸೇರಿದ್ದವು.

X ನಲ್ಲಿ ಭಾವನಾತ್ಮಕ ಸಂದೇಶ

ರಾಜೀನಾಮೆ ಘೋಷಿಸಿದ ಬಳಿಕ X ನಲ್ಲಿ ಬರೆದುಕೊಂಡಿರುವ ಧರ್ಮೇಂದ್ರ ಪ್ರಧಾನ್, ದೇಶದ ಯುವಜನರ ಭಾವನೆಗಳಿಗೆ ಗೌರವ ಸೂಚಿಸುವುದಾಗಿ ಹೇಳಿದ್ದಾರೆ.

"ದೇಶದ ಯುವಜನರ ಆಕಾಂಕ್ಷೆಗಳು, ಭಾವನೆಗಳು ಹಾಗೂ ನ್ಯಾಯಯುತ ನಿರೀಕ್ಷೆಗಳಿಗೆ ನಾನು ಅಪಾರ ಗೌರವ ನೀಡುತ್ತೇನೆ. ಭಾರತದ ಯುವಜನರ ಕನಸುಗಳನ್ನು ನನಸು ಮಾಡುವುದು ನಮ್ಮ ಸಾರ್ವಜನಿಕ ಜೀವನದ ನೈತಿಕ ಹೊಣೆಗಾರಿಕೆಯಾಗಿದೆ. ಪ್ರಧಾನಿಯವರ ನಾಯಕತ್ವದಲ್ಲಿ ದೇಶಸೇವೆ ಮಾಡಲು ಅವಕಾಶ ನೀಡಿದಕ್ಕಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ."

ಮುಂದುವರಿದು ಅವರು,

"ದೇಶದ ಯುವಶಕ್ತಿ ಗೊಂದಲದ ಬಲೆಗೆ ಸಿಲುಕಬಾರದು. ರಾಷ್ಟ್ರವಿರೋಧಿ ಶಕ್ತಿಗಳು ಈ ಪರಿಸ್ಥಿತಿಯ ಲಾಭ ಪಡೆಯಬಾರದು. ಯಾವುದೇ ವಿದ್ಯಾರ್ಥಿಯ ಭವಿಷ್ಯ ಕಾನೂನು ಸಂಕಷ್ಟಗಳಲ್ಲಿ ಸಿಲುಕದೇ, ಅವರು ತಮ್ಮ ಶಿಕ್ಷಣ ಮತ್ತು ವೃತ್ತಿಜೀವನದತ್ತ ಗಮನ ಹರಿಸಬೇಕು ಎಂಬ ಉದ್ದೇಶದಿಂದ ಗೌರವಾನ್ವಿತ ಪ್ರಧಾನಿಯವರಿಗೆ ನನ್ನ ರಾಜೀನಾಮೆ ಸಲ್ಲಿಸಿದ್ದೇನೆ" ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸಂಭ್ರಮ

ಶಿಕ್ಷಣ ಸಚಿವರ ರಾಜೀನಾಮೆ ಸುದ್ದಿ ಹೊರಬಿದ್ದ ಕೂಡಲೇ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಲ್ಲಿ ಸಂಭ್ರಮ ಮನೆಮಾಡಿತು. ಘೋಷಣೆಗಳನ್ನು ಕೂಗಿ, ಪರಸ್ಪರ ಅಭಿನಂದಿಸಿಕೊಂಡ ವಿದ್ಯಾರ್ಥಿಗಳು ತಮ್ಮ ಹೋರಾಟಕ್ಕೆ ಸಿಕ್ಕ ಮೊದಲ ದೊಡ್ಡ ಗೆಲುವೆಂದು ಬಣ್ಣಿಸಿದರು.

CJP ಸಂಸ್ಥಾಪಕರ ಪ್ರತಿಕ್ರಿಯೆ

ಪ್ರತಿಭಟನೆಗೆ ನೇತೃತ್ವ ನೀಡುತ್ತಿದ್ದ CJP (ಕಾಕ್ರೋಚ್ ಜನತಾ ಪಾರ್ಟಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಾತನಾಡಿ,

"ಈ ಸರ್ಕಾರದಲ್ಲಿ ಯಾರೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ನಾವು ಅದನ್ನು ಮಾಡಿ ತೋರಿಸಿದ್ದೇವೆ. ಇದು ವಿದ್ಯಾರ್ಥಿ ಶಕ್ತಿಯ ಗೆಲುವು," ಎಂದು ಜಂತರ್ ಮಂತರ್ ವೇದಿಕೆಯಿಂದ ಘೋಷಿಸಿದರು.

ಇದೇ ವೇಳೆ CJP ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ "ವಿದ್ಯಾರ್ಥಿ ಶಕ್ತಿ ಚಿರಾಯುವಾಗಲಿ" ಎಂದು ಪೋಸ್ಟ್ ಮಾಡಿದೆ.

ಮಾತುಕತೆ ಬಳಿಕ ಬೆಳವಣಿಗೆ

ಶುಕ್ರವಾರ ಕೇಂದ್ರ ಸರ್ಕಾರ ಹಾಗೂ ಪ್ರತಿಭಟನಾಕಾರರ ನಡುವೆ ನಡೆದ ಎರಡನೇ ಹಂತದ ಮಾತುಕತೆಯಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಹಾಗೂ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ನೆರವು ನೀಡುವ ಕುರಿತು ಸರ್ಕಾರ ಸಕಾರಾತ್ಮಕ ಭರವಸೆ ನೀಡಿತ್ತು. ಆದರೆ ಶಿಕ್ಷಣ ಸಚಿವರ ರಾಜೀನಾಮೆ ಕುರಿತು ಯಾವುದೇ ಸ್ಪಷ್ಟನೆ ನೀಡಿರಲಿಲ್ಲ.

ಆದರೆ ಶನಿವಾರ ಮೂರನೇ ಹಂತದ ಮಾತುಕತೆಗೆ ಕೆಲವೇ ಗಂಟೆಗಳ ಮುನ್ನ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ದೇಶಾದ್ಯಂತ ವ್ಯಾಪಿಸಿದ್ದ ಹೋರಾಟ

ನೀಟ್ ಪೇಪರ್ ಸೋರಿಕೆ ಪ್ರಕರಣದ ಬಳಿಕ ಆರಂಭವಾದ ವಿದ್ಯಾರ್ಥಿ ಚಳವಳಿ ದೆಹಲಿಗೆ ಮಾತ್ರ ಸೀಮಿತವಾಗದೆ ದೇಶದ ಹಲವು ನಗರಗಳಿಗೆ ವ್ಯಾಪಿಸಿತ್ತು. ವಿವಿಧ ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು ಹಾಗೂ ಪ್ರತಿಪಕ್ಷಗಳ ಬೆಂಬಲದೊಂದಿಗೆ ಈ ಹೋರಾಟ ರಾಷ್ಟ್ರಮಟ್ಟದ ಚರ್ಚೆಯ ವಿಷಯವಾಗಿತ್ತು.

ಈ ನಡುವೆ ಸಮಸ್ತ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಬೇಕೆಂದು ಆಗ್ರಹಿಸಿದ್ದವು.

ಮುಂದಿನ ಬೆಳವಣಿಗೆಗಳತ್ತ ಚಿತ್ತ

ಶಿಕ್ಷಣ ಸಚಿವರ ರಾಜೀನಾಮೆಯೊಂದಿಗೆ ಪ್ರತಿಭಟನೆಯ ಪ್ರಮುಖ ಬೇಡಿಕೆ ಈಡೇರಿದರೂ, ನೀಟ್ ಪರೀಕ್ಷಾ ಅಕ್ರಮ ಪ್ರಕರಣದ ಸಂಪೂರ್ಣ ತನಿಖೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ, ಪರೀಕ್ಷಾ ವ್ಯವಸ್ಥೆಯ ಸುಧಾರಣೆ ಹಾಗೂ ವಿದ್ಯಾರ್ಥಿಗಳ ವಿಶ್ವಾಸ ಮರುಸ್ಥಾಪನೆಗೆ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಇದೀಗ ದೇಶದ ಗಮನ ಸೆಳೆದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0