'ಹಿಡನ್ ಫಾಲ್ಸ್' ವಿಡಿಯೋ ವೈರಲ್ ಬೆನ್ನಲ್ಲೇ ಕ್ರಮ: ಐವರ ವಿರುದ್ಧ ಅರಣ್ಯ ಇಲಾಖೆ ದೂರು, ಪ್ರಕರಣ ದಾಖಲು

Jul 25, 2026 - 11:45
 0  202
'ಹಿಡನ್ ಫಾಲ್ಸ್' ವಿಡಿಯೋ ವೈರಲ್ ಬೆನ್ನಲ್ಲೇ ಕ್ರಮ: ಐವರ ವಿರುದ್ಧ ಅರಣ್ಯ ಇಲಾಖೆ ದೂರು, ಪ್ರಕರಣ ದಾಖಲು

ಆಪ್ತ ನ್ಯೂಸ್ ಹೊನ್ನಾವರ:

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಹುಮ್ಮಸ್ಸಿನಲ್ಲಿ ಅಪಾಯಕಾರಿ ಜಲಪಾತದ ಕಲ್ಲಿನ ಬಂಡೆಯ ಮೇಲೆ ನಿಂತು ವಿಡಿಯೋ ಚಿತ್ರೀಕರಿಸಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ ಐವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಅರಣ್ಯ ಇಲಾಖೆ ದೂರು ನೀಡಿದ್ದು, ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೇರುಸೊಪ್ಪ ಶಾಖೆಯ ಉಪವಲಯ ಅರಣ್ಯಾಧಿಕಾರಿ ಬಾಲಕೃಷ್ಣ ಈಶ್ವರ ನಾಯ್ಕ ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ದೂರಿನ ಪ್ರಕಾರ, ಜುಲೈ 23ರಂದು 'ಲೋಕಲ್ ಮ್ಯಾಪ್ಸ್' ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಶರಾವತಿ ಕಣಿವೆ ಸಿಂಗಳಿಕ ಅಭಯಾರಣ್ಯದ ವ್ಯಾಪ್ತಿಯಲ್ಲಿರುವ, ಮೇಲ್ನೋಟಕ್ಕೆ ಕನ್ನಿಕಾ ಜಲಪಾತದಂತೆ ಕಾಣುವ ಅಪಾಯಕಾರಿ ಜಲಪಾತದ ಕಲ್ಲಿನ ಬಂಡೆಯ ಮೇಲೆ ಐವರು ನಿಂತು ಚಿತ್ರೀಕರಿಸಿದ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿತ್ತು.

ವಿಡಿಯೋದಲ್ಲಿ, "ಉತ್ತರ ಕನ್ನಡದ ಮತ್ತೊಂದು ಹಿಡನ್ ಫಾಲ್ಸ್‌ಗೆ ಬಂದಿದ್ದೇವೆ. ಇಲ್ಲಿ ಯಾವುದೇ ರಸ್ತೆ ಇಲ್ಲ. ಕಾಲುದಾರಿಯಲ್ಲೇ ಬರಬೇಕು. ಮಂಜಿನ ದೃಶ್ಯ ತುಂಬಾ ಅದ್ಭುತವಾಗಿದೆ" ಎಂದು ಹೇಳುವುದರೊಂದಿಗೆ ಜಲಪಾತದ ಮೇಲ್ಭಾಗದಿಂದ ಕೆಳಭಾಗದವರೆಗಿನ ದೃಶ್ಯಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಎಚ್ಚರಿಕೆ ಫಲಕಗಳನ್ನೂ ಲೆಕ್ಕಿಸದ ಸಾಹಸ

ಅರಣ್ಯ ಇಲಾಖೆ ಈಗಾಗಲೇ ಆ ಪ್ರದೇಶದಲ್ಲಿ ಪ್ರವಾಸಿಗರು ಪ್ರವೇಶಿಸದಂತೆ ಎಚ್ಚರಿಕೆ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಿದ್ದರೂ, ಅವುಗಳನ್ನು ಕಡೆಗಣಿಸಿ ಅಪಾಯಕಾರಿ ಪ್ರದೇಶಕ್ಕೆ ತೆರಳಿ ವಿಡಿಯೋ ಮಾಡಿರುವುದು ಗಂಭೀರವಾಗಿ ಪರಿಗಣಿಸಲಾಗಿದೆ.

ಇಂತಹ ವಿಡಿಯೋಗಳು ಇತರ ಪ್ರವಾಸಿಗರನ್ನೂ ಅದೇ ಸ್ಥಳಕ್ಕೆ ತೆರಳಲು ಪ್ರೇರೇಪಿಸುವ ಸಾಧ್ಯತೆ ಇದ್ದು, ಇದರಿಂದ ಜೀವಕ್ಕೆ ಅಪಾಯ ಉಂಟಾಗಬಹುದು ಎಂದು ಅರಣ್ಯ ಇಲಾಖೆ ದೂರಿನಲ್ಲಿ ಉಲ್ಲೇಖಿಸಿದೆ.

ವಿಡಿಯೋ ವೈರಲ್; ಪೊಲೀಸ್ ತನಿಖೆ ಆರಂಭ

ಫೇಸ್‌ಬುಕ್‌ನಲ್ಲಿ ವೈರಲ್ ಆಗಿದ್ದ ಈ ವಿಡಿಯೋ ಅರಣ್ಯ ಇಲಾಖೆಯ ಗಮನಕ್ಕೆ ಬಂದ ಬಳಿಕ, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಹೊನ್ನಾವರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಇದರ ಆಧಾರದ ಮೇಲೆ ಐವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಡಿಯೋದಲ್ಲಿರುವವರನ್ನು ಪತ್ತೆಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಅಪಾಯಕಾರಿ ಪ್ರವಾಸಿ ತಾಣಗಳಲ್ಲಿ ಸಾಹಸ ಪ್ರದರ್ಶಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಪ್ರವೃತ್ತಿಗೆ ಇದು ಎಚ್ಚರಿಕೆಯ ಸಂದೇಶವಾಗಿದ್ದು, ಸಾರ್ವಜನಿಕರು ಅರಣ್ಯ ಇಲಾಖೆ ಹಾಗೂ ಆಡಳಿತದ ಸೂಚನೆಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0