₹5.50 ಲಕ್ಷ ಲಂಚ ಸ್ವೀಕರಿಸುವಾಗ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯರಾಣಿ ಲೋಕಾಯುಕ್ತ ಬಲೆಗೆ
ಆಪ್ತ ನ್ಯೂಸ್ ಮೈಸೂರು:
ಜಿಲ್ಲೆಯ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯರಾಣಿ ಹಾಗೂ ಅವರ ಆಪ್ತ ಸಹಾಯಕ ಶಿವಕುಮಾರ್ ಅವರು ಲಂಚ ಸ್ವೀಕರಿಸುವ ವೇಳೆ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಾಹಿತಿಯ ಪ್ರಕಾರ, ಎಚ್.ಡಿ.ಕೋಟೆ ತಾಲೂಕಿನ ಜಮೀನಿಗೆ ಸಂಬಂಧಿಸಿದ ಪ್ರಕರಣವೊಂದು ಹುಣಸೂರು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಈ ಪ್ರಕರಣದಲ್ಲಿ ಅನುಕೂಲಕರ ಆದೇಶ ನೀಡಲು ಬೆಂಗಳೂರಿನ ನಿವಾಸಿ ಡಾ. ರೂಪಾ ಅವರ ಬಳಿ ಒಟ್ಟು ₹10.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ.
ಈ ಪೈಕಿ ಮೊದಲ ಕಂತಾಗಿ ₹5 ಲಕ್ಷ ಈಗಾಗಲೇ ಪಡೆದಿದ್ದು, ಸೋಮವಾರ ಎರಡನೇ ಕಂತಿನ ₹5.50 ಲಕ್ಷವನ್ನು ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉಪವಿಭಾಗಾಧಿಕಾರಿ ಕಾವ್ಯರಾಣಿ ಅವರು ತಮ್ಮ ನಿವಾಸದಲ್ಲೇ ಹಣ ಸ್ವೀಕರಿಸುತ್ತಿದ್ದಾಗ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯನ್ನು ಲೋಕಾಯುಕ್ತ ಡಿವೈಎಸ್‌ಪಿ ಶೈಲೇಂದ್ರ ನೇತೃತ್ವದಲ್ಲಿ ನಡೆಸಲಾಗಿದ್ದು, ತನಿಖಾಧಿಕಾರಿ ರವಿಕುಮಾರ್, ಮಡಿಕೇರಿ ಡಿವೈಎಸ್‌ಪಿ ದಿನಕರ ಶೆಟ್ಟಿ, ಇನ್‌ಸ್ಪೆಕ್ಟರ್ ವೀಣಾ ನಾಯಕ್ ಸೇರಿದಂತೆ ಲೋಕಾಯುಕ್ತ ಸಿಬ್ಬಂದಿ ಭಾಗವಹಿಸಿದ್ದರು.
ಗಮನಾರ್ಹ ಸಂಗತಿಯೆಂದರೆ, ಕಾವ್ಯರಾಣಿ ಅವರು ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಪ್ರಕರಣದ ಕುರಿತು ಲೋಕಾಯುಕ್ತ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



