ಮುಂಡಿಗೇಸರದಲ್ಲಿ ಆಗಸ್ಟ್ 8ರಂದು 'ಗೀತ-ನೃತ್ಯ ಸಂಗಮ' : ಹಿರಿಯ ಬರಹಗಾರ ವೈಶಾಲಿ ವಿ.ಪಿ. ಹೆಗಡೆಗೆ ಸನ್ಮಾನ
ಆಪ್ತ ನ್ಯೂಸ್ ಶಿರಸಿ:
ವಿಶ್ವಶಾಂತಿ ಸೇವಾ ಟ್ರಸ್ಟ್, ಕರ್ನಾಟಕದ ಆಶ್ರಯದಲ್ಲಿ ಆಗಸ್ಟ್ 8ರಂದು (ಶನಿವಾರ) ನಗರದ ಹೊರವಲಯದ ಮುಂಡಿಗೇಸರದ ಶ್ರೀ ಗಣಪತಿ ದೇವಸ್ಥಾನದ ಆವರಣದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 'ಗೀತ-ನೃತ್ಯ ಸಂಗಮ' ಹಾಗೂ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.
ಕಾರ್ಯಕ್ರಮವು ಸಂಜೆ 4 ಗಂಟೆಗೆ ಆರಂಭವಾಗಲಿದ್ದು, ಖ್ಯಾತ ಗಾಯಕರಾದ ರಾಧಾ ದೇಸಾಯಿ (ಧಾರವಾಡ) ಹಾಗೂ ಪ್ರಸನ್ನ ವೈದ್ಯ (ಹೆಗ್ಗಾರು) ಅವರಿಂದ ಸುಮಧುರ ಗಾಯನ ನಡೆಯಲಿದೆ. ಹಾರ್ಮೋನಿಯಂನಲ್ಲಿ ಪ್ರಕಾಶ್ ಹೆಗಡೆ ಯಡಳ್ಳಿ ಮತ್ತು ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜಿಬಳ ಸಂಗೀತ ಸಾಥ್ ನೀಡಲಿದ್ದಾರೆ.
ಸಂಜೆ 5.20ಕ್ಕೆ ಸಂಪದ ಹೆಗಡೆ ಮುರೇಗಾರ ಅವರಿಂದ ಭರತನಾಟ್ಯ ಪ್ರದರ್ಶನ ಜರುಗಲಿದ್ದು, ಬಳಿಕ 5.35ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಮಣಿಪಾಲದ ಭಾರತೀಯ ವಿಕಾಸ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಮೋಹನ ಭಾಸ್ಕರ ಹೆಗಡೆ ಹೆರವಟ್ಟ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, 'ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ ಹಾಗೂ ವಿಶ್ವಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ ರವೀಂದ್ರ ಭಟ್ಟ ಐನಕೈ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಮಧೇನು ಸೊಸೈಟಿ ಅಧ್ಯಕ್ಷ ವಿನಾಯಕ ರಾ. ಹೆಗಡೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ರಾಜೀವ ಎಂ. ಹೆಗಡೆ ಬಳಗಂಡಿ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಶಿರಸಿಯ ವಿದ್ಯಾನಗರ ರುದ್ರಭೂಮಿ ಸಂಸ್ಥೆಯ ಮುಖ್ಯಸ್ಥೆ ಹಾಗೂ ಹಿರಿಯ ಬರಹಗಾರ್ತಿ ವೈಶಾಲಿ ವಿ.ಪಿ. ಹೆಗಡೆ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು.
ಸಂಜೆ 6.40ಕ್ಕೆ ಯುವ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಅವರಿಂದ 'ವಿಶ್ವಾಭಿಗಮನಮ್' ಯಕ್ಷ ನೃತ್ಯ ರೂಪಕ ಪ್ರದರ್ಶನ ನಡೆಯಲಿದೆ. ಭಗವಾನ್ ಶ್ರೀಕೃಷ್ಣನ ಲೀಲೆ ಹಾಗೂ ಗೋಕುಲ ನಿರ್ಗಮನ ಕಥಾನಕವನ್ನು ಆಧರಿಸಿದ ಈ ಏಕವ್ಯಕ್ತಿ ರೂಪಕದಲ್ಲಿ ಕೊಳಗಿ ಕೇಶವ ಹೆಗಡೆ ಭಾಗವತಿಕೆ, ಶಂಕರ ಭಾಗವತ್ (ಯಲ್ಲಾಪುರ) ಮದ್ದಲೆ ಹಾಗೂ ವಿಘ್ನೇಶ್ವರ ಗೌಡ (ಕೆಸ್ರಕೊಪ್ಪ) ಚಂಡೆ ಸಾಥ್ ನೀಡಲಿದ್ದಾರೆ.
ಈ ರೂಪಕಕ್ಕೆ ವಿ. ಉಮಾಕಾಂತ ಭಟ್ಟ (ಕೆರೆಕೈ) ನಿರ್ದೇಶನ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಸಾಹಿತ್ಯ, ವಿನಾಯಕ ಹೆಗಡೆ ಕಲಗದ್ದೆ ನೃತ್ಯ ನಿರ್ದೇಶನ ನೀಡಿದ್ದಾರೆ. ರಮೇಶ ಹೆಗಡೆ ಹಳೇಕಾನಗೋಡ ಹಾಗೂ ಗಾಯತ್ರಿ ರಾಘವೇಂದ್ರ ಅವರ ಮೂಲ ಕಲ್ಪನೆಯ ಈ ರೂಪಕಕ್ಕೆ ಡಾ. ಶ್ರೀಪಾದ ಭಟ್ಟ ಹಿನ್ನೆಲೆ ಧ್ವನಿ ನೀಡಿದ್ದು, ಉದಯ ಪೂಜಾರ ಧ್ವನಿಗ್ರಹಣ ಮಾಡಿದ್ದಾರೆ.
ಸಾಂಸ್ಕೃತಿಕ ರಸಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿಶ್ವಶಾಂತಿ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಗಾಯತ್ರಿ ರಾಘವೇಂದ್ರ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



