ಶಿರಸಿಯಲ್ಲಿ ಹೃದಯವಿದ್ರಾವಕ ಘಟನೆ: ವಿಷಪೂರಿತ ಹಾವು ಕಚ್ಚಿ 12 ವರ್ಷದ ವಿದ್ಯಾರ್ಥಿ ಸಾವು; ಸಹೋದರಿಗೆ ಚಿಕಿತ್ಸೆ

Jun 24, 2026 - 10:40
 0  245
ಶಿರಸಿಯಲ್ಲಿ ಹೃದಯವಿದ್ರಾವಕ ಘಟನೆ: ವಿಷಪೂರಿತ ಹಾವು ಕಚ್ಚಿ 12 ವರ್ಷದ ವಿದ್ಯಾರ್ಥಿ ಸಾವು; ಸಹೋದರಿಗೆ ಚಿಕಿತ್ಸೆ

ಆಪ್ತ ನ್ಯೂಸ್ ಶಿರಸಿ:

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಳ್ಳಿ ಗ್ರಾಮದಲ್ಲಿ ವಿಷಪೂರಿತ ಹಾವು ಕಚ್ಚಿದ ಪರಿಣಾಮ ಆರನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ಆತನ ಸಹೋದರಿ ಚಿಕಿತ್ಸೆ ಪಡೆಯುತ್ತಿರುವ ದುರ್ಘಟನೆ ಇಂದು ಮುಂಜಾನೆ ನಡೆದಿದೆ.

ಮೃತ ಬಾಲಕನನ್ನು ಮಿಥುನ್ ಪುಟ್ಟಪ್ಪ ನಾಯ್ಕ (12) ಎಂದು ಗುರುತಿಸಲಾಗಿದೆ. ಮಿಥುನ್ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಇದೇ ಘಟನೆಯಲ್ಲಿ ಆತನ ಸಹೋದರಿ ದೀಕ್ಷಾ ಪುಟ್ಟಪ್ಪ ನಾಯ್ಕ ಹಾವಿನ ಕಡಿತಕ್ಕೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ನಿದ್ರೆಯಲ್ಲೇ ಕಚ್ಚಿದ ವಿಷಪೂರಿತ ಹಾವು

ಲಭ್ಯ ಮಾಹಿತಿಯಂತೆ, ಮಿಥುನ್ ಹಾಗೂ ದೀಕ್ಷಾ ರಾತ್ರಿ ಊಟ ಮುಗಿಸಿ ತಂದೆಯೊಂದಿಗೆ ಮನೆಯಲ್ಲೇ ಮಲಗಿದ್ದರು. ಮುಂಜಾನೆ ವೇಳೆ ಇಬ್ಬರೂ ಏಕಾಏಕಿ ಎದ್ದು ವಾಂತಿ ಮಾಡತೊಡಗಿದ್ದಾರೆ. ಇದನ್ನು ಗಮನಿಸಿದ ಪೋಷಕರು ತಕ್ಷಣ ದೀಪ ಹಚ್ಚಿ ನೋಡಿದಾಗ ಮಕ್ಕಳು ಅಸ್ವಸ್ಥರಾಗಿರುವುದು ಕಂಡುಬಂದಿದೆ.

ಈ ವಿಷಯವನ್ನು ಅಕ್ಕಪಕ್ಕದವರಿಗೆ ತಿಳಿಸಿದ ವೇಳೆ, ಮನೆಯೊಳಗಿಂದ ಕತ್ತಲಲ್ಲಿ ಹಾವೊಂದು ಹೊರಹೋಗುತ್ತಿರುವುದು ಕಂಡು ಬಂದಿದೆ. ಇದರಿಂದ ಮಕ್ಕಳಿಗೆ ಹಾವು ಕಚ್ಚಿರುವ ಶಂಕೆ ವ್ಯಕ್ತವಾಗಿದೆ.

ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಬಾಲಕ ಸಾವು

ತಕ್ಷಣವೇ ಇಬ್ಬರನ್ನೂ ಶಿರಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಹಾಲಕ್ಷ್ಮೀ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಿಥುನ್ ಚಿಕಿತ್ಸೆ ಫಲಕಾರಿಯಾಗದೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ.

ಇನ್ನೊಂದೆಡೆ, ದೀಕ್ಷಾಗೆ ಚಿಕಿತ್ಸೆ ಮುಂದುವರಿದಿದ್ದು, ಆಕೆ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.

ಕಿವಿ ಹಾಗೂ ಕೈ ಬೆರಳಿಗೆ ಹಾವಿನ ಕಡಿತ

ವೈದ್ಯರ ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಷಪೂರಿತ ಹಾವು ಮಿಥುನ್‌ನ ಕಿವಿಗೆ ಹಾಗೂ ದೀಕ್ಷಾಳ ಕೈ ಬೆರಳಿಗೆ ಕಚ್ಚಿರುವುದು ದೃಢಪಟ್ಟಿದೆ.

ಪೊಲೀಸರ ಪರಿಶೀಲನೆ

ಘಟನೆ ಕುರಿತು ಮಾಹಿತಿ ಪಡೆದ ಬನವಾಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0