ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರುದ್ರವೀಣಾ ವಿದುಷಿ ಜ್ಯೋತಿ ಹೆಗಡೆಗೆ ಬಿಸ್ಲಕೊಪ್ಪದಲ್ಲಿ ಸಂಸ್ಕಾರ ಭಾರತಿಯಿಂದ ಸನ್ಮಾನ
ಆಪ್ತ ನ್ಯೂಸ್ ಶಿರಸಿ:
ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಖ್ಯಾತ ರುದ್ರವೀಣಾ ವಾದಕಿ ವಿದುಷಿ ಜ್ಯೋತಿ ಹೆಗಡೆ ಅವರನ್ನು ಅವರ ಸ್ವಗ್ರಾಮ ಬಿಸ್ಲಕೊಪ್ಪದಲ್ಲಿ ಸಂಸ್ಕಾರ ಭಾರತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ರುದ್ರವೀಣಾ ವಾದನದ ಮೂಲಕ ವಿಶಿಷ್ಟ ಸಾಧನೆಗೈದಿರುವ ಜ್ಯೋತಿ ಹೆಗಡೆ ಅವರಿಗೆ ಕೇಂದ್ರದ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ಉತ್ತರ ಕನ್ನಡ ಜಿಲ್ಲೆ ಹಾಗೂ ಶಿರಸಿಗೆ ರಾಷ್ಟ್ರ ಮಟ್ಟದಲ್ಲಿ ಹೆಮ್ಮೆಯ ಗೌರವ ತಂದುಕೊಟ್ಟಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಕಾರ ಭಾರತಿಯ ಪದಾಧಿಕಾರಿಗಳು, ಭಾರತೀಯ ಸಂಗೀತ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವಲ್ಲಿ ಜ್ಯೋತಿ ಹೆಗಡೆ ಅವರ ಕೊಡುಗೆ ಅಪಾರವಾಗಿದೆ. ಅವರ ಸಾಧನೆ ಯುವ ಕಲಾವಿದರಿಗೆ ಸ್ಫೂರ್ತಿದಾಯಕವಾಗಿದೆ ಎಂದು ಶ್ಲಾಘಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತಿ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರು ಹಾಗೂ ಹಿರಿಯ ಚಲನಚಿತ್ರ ನಟ ನಿರ್ನಳ್ಳಿ ರಾಮಕೃಷ್ಣ, ಜಿಲ್ಲಾ ಕಾರ್ಯದರ್ಶಿ ಹಾಗೂ ಹಿಂದುಸ್ತಾನಿ ಗಾಯಕ ವಿನಾಯಕ ಮುತ್ತಮುರ್ದ, ವಿಭಾಗ ಪ್ರಚಾರಕರಾದ ಗಣೇಶ್ ಜೀ, ಪ್ರಚಾರ ಪ್ರಮುಖ ಜನಾರ್ದನ ಆಚಾರ್ಯ ಸೇರಿದಂತೆ ಸಂಸ್ಕಾರ ಭಾರತಿಯ ಪದಾಧಿಕಾರಿಗಳು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು.
ಜ್ಯೋತಿ ಹೆಗಡೆ ಅವರ ಈ ಅಪರೂಪದ ಸಾಧನೆಗೆ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು ಹಾಗೂ ಕಲಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



