ಬೆಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ಮಾರ್ಗದ ಕುರಿತು ಗೊಂದಲ ಬೇಡ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟನೆ

Jun 1, 2026 - 16:34
 0  41
ಬೆಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ಮಾರ್ಗದ ಕುರಿತು ಗೊಂದಲ ಬೇಡ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟನೆ

ಆಪ್ತ ನ್ಯೂಸ್ ಕಾರವಾರ:

ಬೆಂಗಳೂರು-ಮಡಗಾಂವ್ ನಡುವೆ ಪ್ರಸ್ತಾವಿತ ವಂದೇ ಭಾರತ್ ರೈಲು ಸಂಚಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ರೈಲು ಉಡುಪಿ, ಕಾರವಾರ ಮಾರ್ಗವಾಗಿಯೇ ಸಂಚರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ರೈಲ್ವೆ ಸಚಿವರು ಬೆಂಗಳೂರಿನಲ್ಲಿ ಇತ್ತೀಚೆಗೆ ನೀಡಿದ ಪತ್ರಿಕಾ ಹೇಳಿಕೆಯನ್ನು ಉಲ್ಲೇಖಿಸಿರುವ ಅವರು, ಪ್ರಸ್ತಾವಿತ ಬೆಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ಬೆಂಗಳೂರಿನಿಂದ ಹೊರಟು ಪಡೀಲ್ ಬೈಪಾಸ್ ಮೂಲಕ ಉಡುಪಿ, ಕಾರವಾರ ತಲುಪಿ ಅಲ್ಲಿಂದ ಮಡಗಾಂವ್‌ಗೆ ಸಾಗಲಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಸಾರ್ವಜನಿಕರು ಯಾವುದೇ ರೀತಿಯ ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ ಎಂದಿದ್ದಾರೆ.

ಸಮಗ್ರ ಕರಾವಳಿ ಅಭಿವೃದ್ಧಿಯೇ ಕೇಂದ್ರದ ಉದ್ದೇಶ

ಮಂಗಳೂರು ಕರಾವಳಿಯ ಪ್ರಮುಖ ನಗರವಾಗಿದ್ದರೂ, ಉಡುಪಿ, ಕುಂದಾಪುರ, ಮುರುಡೇಶ್ವರ, ಗೋಕರ್ಣ ಹಾಗೂ ಕಾರವಾರದಂತಹ ಧಾರ್ಮಿಕ, ಪ್ರವಾಸೋದ್ಯಮ ಮತ್ತು ರಕ್ಷಣಾ ಕ್ಷೇತ್ರದ ಪ್ರಮುಖ ಕೇಂದ್ರಗಳಿಗೆ ನೇರ ಸಂಪರ್ಕ ಕಲ್ಪಿಸುವುದು ಅತ್ಯಗತ್ಯವಾಗಿದೆ ಎಂದು ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ಶಿಕ್ಷಣ ಕ್ಷೇತ್ರದ ಪ್ರಮುಖ ಕೇಂದ್ರವಾಗಿದ್ದು, ಕುಂದಾಪುರದ ಮೂಲಕ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸಬಹುದು. ಜೊತೆಗೆ ಮುರುಡೇಶ್ವರ ಮತ್ತು ಗೋಕರ್ಣ ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ತಾಣಗಳಾಗಿವೆ. ಕಾರವಾರ ದೇಶದ ಪ್ರಮುಖ ನೌಕಾಪಡೆಯ ನೆಲೆಗಳಲ್ಲೊಂದು. ಆದ್ದರಿಂದ ಬೆಂಗಳೂರಿನಿಂದ ಈ ಪ್ರದೇಶಗಳಿಗೆ ನೇರ ವಂದೇ ಭಾರತ್ ರೈಲು ಸಂಪರ್ಕ ದೊರಕಿದಾಗ ಮಾತ್ರ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ರೈಲ್ವೆ ಸಚಿವರಿಂದ ಖಚಿತ ಭರವಸೆ

ಈ ಸಂಬಂಧ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದು ಕಾಗೇರಿ ತಿಳಿಸಿದ್ದಾರೆ. ಅಲ್ಲದೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೂ ಸಮಾಲೋಚನೆ ನಡೆಸಿ ರೈಲು ಮಾರ್ಗದ ಬಗ್ಗೆ ಸ್ಪಷ್ಟ ಮಾಹಿತಿ ಪಡೆದಿರುವುದಾಗಿ ಹೇಳಿದ್ದಾರೆ.

ಪಡೀಲ್ ಬೈಪಾಸ್‌ಗೆ ಒತ್ತು ನೀಡಿದ ಕಾಗೇರಿ

ಘಾಟ್ ಪ್ರದೇಶದಲ್ಲಿ ರೈಲುಗಳ ಸಂಚಾರ ಸಹಜವಾಗಿಯೇ ನಿಧಾನಗತಿಯಲ್ಲಿ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು-ಕರಾವಳಿ ನಡುವಿನ ರೈಲುಗಳು ಸಾಧ್ಯವಾದಷ್ಟು ವೇಗವಾಗಿ ಹಾಗೂ ನೇರ ಮಾರ್ಗದಲ್ಲಿ ಸಂಚರಿಸುವ ಅಗತ್ಯವಿದೆ ಎಂದು ಸಂಸದರು ಹೇಳಿದ್ದಾರೆ.

ಮಂಗಳೂರು ಸೆಂಟ್ರಲ್ ಅಥವಾ ಮಂಗಳೂರು ಜಂಕ್ಷನ್ ನಿಲ್ದಾಣಗಳಿಗೆ ಅನಗತ್ಯವಾಗಿ ಪ್ರವೇಶಿಸಿ ಮತ್ತೆ ಹೊರಬರುವುದರಿಂದ ಸಮಯ ವ್ಯರ್ಥವಾಗುತ್ತದೆ. ಅಲ್ಲದೆ ಕೆಲವು ಸಂದರ್ಭಗಳಲ್ಲಿ ಇಂಜಿನ್ ಬದಲಾವಣೆ ಪ್ರಕ್ರಿಯೆಯೂ ಸಮಯ ತೆಗೆದುಕೊಳ್ಳುತ್ತದೆ. ಇದನ್ನು ತಪ್ಪಿಸಲು 'ಪಡೀಲ್ ಬೈಪಾಸ್' ಮಾರ್ಗವನ್ನು ಅಭಿವೃದ್ಧಿಪಡಿಸಿ ನೇರ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ರೈಲ್ವೆ ಇಲಾಖೆಗೆ ಮಹತ್ವದ ಸಲಹೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕರಾವಳಿ-ಬೆಂಗಳೂರು ಸಂಪರ್ಕಕ್ಕೆ ಹೊಸ ವೇಗ

ವಂದೇ ಭಾರತ್ ರೈಲು ಯೋಜನೆ ಜಾರಿಗೆ ಬಂದರೆ ಕರಾವಳಿ ಕರ್ನಾಟಕದ ಪ್ರವಾಸೋದ್ಯಮ, ಶಿಕ್ಷಣ, ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಿಗೆ ಹೊಸ ಉತ್ತೇಜನ ದೊರೆಯಲಿದೆ. ಬೆಂಗಳೂರಿನಿಂದ ಉಡುಪಿ, ಕಾರವಾರ, ಗೋಕರ್ಣ, ಮುರುಡೇಶ್ವರ ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ವೇಗದ ಸಂಪರ್ಕ ಸಿಗಲಿದ್ದು, ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ಮಾರ್ಗದ ಕುರಿತು ಹರಡುತ್ತಿರುವ ಗೊಂದಲಗಳಿಗೆ ಕಿವಿಗೊಡದೇ, ಅಧಿಕೃತ ಮಾಹಿತಿಯನ್ನೇ ನಂಬುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

"ಇಡೀ ಕರಾವಳಿ ತೀರವನ್ನು ರಾಜ್ಯ ರಾಜಧಾನಿ ಬೆಂಗಳೂರಿನೊಂದಿಗೆ ವಂದೇ ಭಾರತ್ ರೈಲು ಮೂಲಕ ಜೋಡಿಸುವುದೇ ಕೇಂದ್ರ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಈ ಬಗ್ಗೆ ಯಾವುದೇ ಸಂಶಯ ಬೇಡ" ಎಂದು ಅವರು ಪುನರುಚ್ಚರಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0