ಅಂಧ ವಿದ್ಯಾರ್ಥಿನಿಯ ಸಾಧನೆಗೆ ಮಣಿದ ಪರೀಕ್ಷಾ ಮಂಡಳಿ: 24 ಗಂಟೆಯಲ್ಲೇ ಸರಿಹೋಯಿತು 'ಫೇಲ್' ಆಗಿದ್ದ ಅಂಕಪಟ್ಟಿ!

Apr 24, 2026 - 15:39
 0  49
ಅಂಧ ವಿದ್ಯಾರ್ಥಿನಿಯ ಸಾಧನೆಗೆ ಮಣಿದ ಪರೀಕ್ಷಾ ಮಂಡಳಿ: 24 ಗಂಟೆಯಲ್ಲೇ ಸರಿಹೋಯಿತು 'ಫೇಲ್' ಆಗಿದ್ದ ಅಂಕಪಟ್ಟಿ!

ಆಪ್ತ ನ್ಯೂಸ್ ಶಿರಸಿ:

ಅಂಧತ್ವವನ್ನೇ ಮೆಟ್ಟಿ ನಿಂತು ಸಾಧನೆಯ ಶಿಖರ ಏರಬೇಕೆಂಬ ಹಂಬಲದಲ್ಲಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಪರೀಕ್ಷಾ ಮಂಡಳಿಯ ತಾಂತ್ರಿಕ ದೋಷ "ಫೇಲ್" ಎಂಬ ಪಟ್ಟ ಕಟ್ಟಿತ್ತು. ಆದರೆ, ಛಲ ಬಿಡದ ವಿದ್ಯಾರ್ಥಿನಿ ಹಾಗೂ ಶಾಸಕರ ಸಮಯೋಚಿತ ಮಧ್ಯಸ್ಥಿಕೆಯಿಂದಾಗಿ ಈಗ ಆಕೆಯ ಅಂಕಪಟ್ಟಿ 96.48% ಅಂಕಗಳೊಂದಿಗೆ ಮಿನುಗುತ್ತಿದೆ.

ಘಟನೆಯ ಹಿನ್ನೆಲೆ:

ಶಿರಸಿಯ ಯೂನಿಯನ್ ಪ್ರೌಢಶಾಲೆಯ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಲಿಝಾ ಖಾನಮ್, ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿ ಪರೀಕ್ಷೆ ಬರೆದಿದ್ದರು. ಆದರೆ ನಿನ್ನೆ ಫಲಿತಾಂಶ ಬಂದಾಗ ಲಿಝಾ ಕುಟುಂಬಕ್ಕೆ ಆಘಾತ ಕಾದಿತ್ತು. ಸಮಾಜ ವಿಜ್ಞಾನ (Social Science) ವಿಷಯದಲ್ಲಿ ಲಿಝಾ 'ಗೈರು ಹಾಜರಿ' (Absent) ಎಂದು ನಮೂದಿಸಲಾಗಿತ್ತು. ಇದರಿಂದಾಗಿ ಆಕೆ ಪರೀಕ್ಷೆಯಲ್ಲಿ ಅನುತ್ತೀರ್ಣ ಎಂದು ಫಲಿತಾಂಶ ತೋರಿಸುತ್ತಿತ್ತು. ಎಲ್ಲಾ ಪರೀಕ್ಷೆಗಳನ್ನು ಬರೆದಿದ್ದರೂ ಇಂತಹ ತಾಂತ್ರಿಕ ಎಡವಟ್ಟಿನಿಂದ ಲಿಝಾ ಕಣ್ಣೀರು ಹಾಕುವಂತಾಯಿತು.

ಶಾಸಕರ ಮತ್ತು ಶಿಕ್ಷಣ ಸಚಿವರ ತುರ್ತು ಸ್ಪಂದನೆ:

ವಿಷಯ ತಿಳಿಯುತ್ತಿದ್ದಂತೆಯೇ ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕ ಅವರು ತಕ್ಷಣ ಕಾರ್ಯಪ್ರವೃತ್ತರಾದರು. ನೇರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ಒಬ್ಬ ಪ್ರತಿಭಾವಂತ ಅಂಧ ವಿದ್ಯಾರ್ಥಿನಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿದರು.

ಶಾಸಕರ ಒತ್ತಡ ಹಾಗೂ ಮಾಧ್ಯಮಗಳ ವರದಿಯ ಬೆನ್ನಲ್ಲೇ ಎಚ್ಚೆತ್ತ ಪರೀಕ್ಷಾ ಮಂಡಳಿ, ತಾಂತ್ರಿಕ ದೋಷವನ್ನು ಒಪ್ಪಿಕೊಂಡಿತು. ಮಂಡಳಿಯ ನಿರ್ದೇಶಕರು ಸ್ವತಃ ಲಿಝಾ ಜೊತೆ ಮಾತನಾಡಿ ಧೈರ್ಯ ತುಂಬಿದರು.

ಲಿಝಾ ಖಾನಮ್ ಗಳಿಸಿದ ಅಂಕಗಳ ವಿವರ:

ದೋಷ ಸರಿಪಡಿಸಿದ ನಂತರ ಬಂದಿರುವ ಅಂಕಪಟ್ಟಿಯಲ್ಲಿ ಲಿಝಾ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಒಟ್ಟು 625 ಅಂಕಗಳಿಗೆ 603 ಅಂಕಗಳನ್ನು ಪಡೆಯುವ ಮೂಲಕ ಶೇ. 96.48 ರಷ್ಟು ಸಾಧನೆ ಮಾಡಿದ್ದಾರೆ.

ಅಂಕಗಳ ವಿವರ ಹೀಗಿದೆ:

  • ಕನ್ನಡ: 100/100

  • ಉರ್ದು: 124/125

  • ಇಂಗ್ಲಿಷ್: 92/100

  • ಅರ್ಥಶಾಸ್ತ್ರ: 98/100

  • ರಾಜ್ಯಶಾಸ್ತ್ರ: 92/100

  • ಸಮಾಜ ಶಾಸ್ತ್ರ: 97/100

ಮರು ಮೌಲ್ಯಮಾಪನಕ್ಕೆ ಸಿದ್ಧತೆ:

ಸಾಧನೆಯ ಶಿಖರ ಏರಿರುವ ಲಿಝಾ ಇಲ್ಲಿಗೆ ತೃಪ್ತಳಾಗಿಲ್ಲ. ಇಂಗ್ಲಿಷ್ ಹಾಗೂ ಎಕನಾಮಿಕ್ಸ್ ವಿಷಯಗಳಲ್ಲಿ ತನಗೆ ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿದೆ ಎಂದು ಭಾವಿಸಿರುವ ಆಕೆ, ಈ ಎರಡು ವಿಷಯಗಳಿಗೆ ಮರು ಮೌಲ್ಯಮಾಪನ (Re-evaluation) ಮಾಡಿಸಲು ನಿರ್ಧರಿಸಿದ್ದಾರೆ.

ಹರಿದು ಬಂದ ಅಭಿನಂದನೆಗಳ ಮಹಾಪೂರ:

ನ್ಯಾಯ ಸಿಕ್ಕಿದ ಖುಷಿಯಲ್ಲಿ ಲಿಝಾ ಮತ್ತು ಆಕೆಯ ಪೋಷಕರು ಶಾಸಕ ಭೀಮಣ್ಣ ನಾಯ್ಕ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಡಿಡಿಪಿಐ ಡಿ.ಆರ್. ನಾಯ್ಕ, ಬಿಇಒ ನಾಗರಾಜ ನಾಯ್ಕ ಹಾಗೂ ವರದಿ ಮಾಡಿದ್ದ ಮಾರಿಕಾಂಬಾ ಟಿವಿಗೆ ಹೃತ್ಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.

"ನನ್ನ ಮಗಳ ಶ್ರಮಕ್ಕೆ ಕೊನೆಗೂ ಬೆಲೆ ಸಿಕ್ಕಿದೆ. ಅಧಿಕಾರಿಗಳು ಶೀಘ್ರವಾಗಿ ಸ್ಪಂದಿಸಿದ್ದು ನಮಗೆ ನೆಮ್ಮದಿ ತಂದಿದೆ," ಎಂದು ಲಿಝಾ ತಂದೆ ಭಾವುಕರಾಗಿ ನುಡಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0