"ಜಾತಿಯಲ್ಲಿ ಹುಟ್ಟಿದರೆ ಬ್ರಾಹ್ಮಣನಾಗಲ್ಲ!" – ಸಂಸ್ಕಾರದ ಹೆಸರಿನ ಅನಾಚಾರಕ್ಕೆ ಅನಂತಕುಮಾರ ಹೆಗಡೆ ಕಟು ಚಾಟಿ

May 24, 2026 - 20:43
 0  258
"ಜಾತಿಯಲ್ಲಿ ಹುಟ್ಟಿದರೆ ಬ್ರಾಹ್ಮಣನಾಗಲ್ಲ!" – ಸಂಸ್ಕಾರದ ಹೆಸರಿನ ಅನಾಚಾರಕ್ಕೆ ಅನಂತಕುಮಾರ ಹೆಗಡೆ ಕಟು ಚಾಟಿ

ಆಪ್ತ ನ್ಯೂಸ್‌ ಯಲ್ಲಾಪುರ:

ಮಾಜಿ ಸಂಸದ, ಹಿಂದೂ ಹುಲಿ ಅನಂತಕುಮಾರ ಹೆಗಡೆ ಅವರು ಯಲ್ಲಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬ್ರಾಹ್ಮಣತ್ವ, ಸಂಸ್ಕಾರ ಹಾಗೂ ಸಮಾಜದ ಮೌಲ್ಯಗಳ ಬಗ್ಗೆ ತೀಕ್ಷ್ಣ ಮತ್ತು ಆತ್ಮಾವಲೋಕನಕ್ಕೆ ಒತ್ತಾಯಿಸುವ ಮಾತುಗಳನ್ನು ಹೇಳಿದ್ದಾರೆ. ಸಂಸ್ಕಾರದ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ಅವರು, “ಕೇವಲ ಜಾತಿಯಲ್ಲಿ ಹುಟ್ಟಿದರೆ ಬ್ರಾಹ್ಮಣತ್ವ ಬರುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಅಖಿಲ ಹವ್ಯಕ ಮಹಾಸಭಾದ ವತಿಯಿಂದ ಯಲ್ಲಾಪುರದ ಕಾರ್ಮಿಕ ಭವನದಲ್ಲಿ ನಡೆದ ‘ಸಂಸ್ಕಾರೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಮಾರು 21 ನಿಮಿಷಗಳ ಕಾಲ ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಮುಂದಿಟ್ಟರು. ಈ ಬಾರಿ ಯಾರನ್ನೂ ನೇರವಾಗಿ ಟೀಕಿಸದೆ, ತಮ್ಮನ್ನೇ ಉದಾಹರಣೆಯಾಗಿ ತೆಗೆದುಕೊಂಡು ಸಮಾಜಕ್ಕೆ ಸಂದೇಶ ನೀಡಿದರು.

"ನಾನು ಶೂದ್ರ, ವೈಶ್ಯ, ಕ್ಷತ್ರೀಯ..."

ಭಾಷಣ ಆರಂಭದಲ್ಲೇ “ನಾನು ಸ್ವಭಾವದಲ್ಲಿ ಕ್ಷತ್ರೀಯ, ವ್ಯವಹಾರದಲ್ಲಿ ವೈಶ್ಯ, ಸಮಾಜದ ಕೆಲಸ ಮಾಡುವಾಗ ಶೂದ್ರ” ಎಂದು ಹೇಳಿದ ಅನಂತಕುಮಾರ ಹೆಗಡೆ, ಪ್ರತಿಯೊಬ್ಬರೂ ತಮ್ಮೊಳಗೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

“ಯಾರು ನಿಸ್ವಾರ್ಥ ಸೇವೆ ಮಾಡುತ್ತಾರೋ ಅವರು ಶೂದ್ರರು. ಸ್ವಂತಕ್ಕಿಂತ ಸಮಾಜಕ್ಕೆ ಹೆಚ್ಚು ದುಡಿಯುವವ ವೈಶ್ಯ. ಆದರೆ ಇಂದಿನ ಅನೇಕ ಯುವಕರಿಗೆ ಶೂದ್ರ ಎಂದು ಕರೆಯಿಸಿಕೊಳ್ಳುವ ಯೋಗ್ಯತೆಯೂ ಇಲ್ಲ” ಎಂದು ಅವರು ಕಟುವಾಗಿ ಅಭಿಪ್ರಾಯಪಟ್ಟರು.

"ಬ್ರಾಹ್ಮಣತ್ವ ಜಾತಿಯಲ್ಲ, ಅದು ಅರ್ಹತೆ"

“ಬ್ರಾಹ್ಮಣತ್ವ ಒಂದು ಯೋಗ್ಯತೆ, ಒಂದು ಅರ್ಹತೆ. ಅದನ್ನು ಜಾತಿಗೆ ಸೀಮಿತ ಮಾಡಿದರೆ ಅದು ಬ್ರಾಹ್ಮಣತ್ವಕ್ಕೆ ಮಾಡಿದ ಅಪಚಾರ” ಎಂದು ಅವರು ಹೇಳಿದರು.

ವೇದಗಳನ್ನು ಕಂಡುಕೊಂಡ ಋಷಿಮುನಿಗಳು ಜಾತಿಯಿಂದ ಬ್ರಾಹ್ಮಣರಾಗಿರಲಿಲ್ಲ. ಅವರ ತಪಸ್ಸು, ಕರ್ಮ ಮತ್ತು ಅನುಷ್ಠಾನವೇ ಅವರನ್ನು ಬ್ರಾಹ್ಮಣತ್ವದ ಕಡೆಗೆ ಕೊಂಡೊಯ್ದಿತು ಎಂದು ಅವರು ಉದಾಹರಣೆ ನೀಡಿದರು.

“ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ವ್ಯಕ್ತಿ ಬ್ರಾಹ್ಮಣನಾಗುವುದಿಲ್ಲ. ನಡತೆಯ ಆಧಾರದ ಮೇಲೆ ಬ್ರಾಹ್ಮಣತ್ವ ಬರುತ್ತದೆ” ಎಂಬ ಮಾತು ಸಭಿಕರಲ್ಲಿ ಚಿಂತನೆ ಮೂಡಿಸಿತು.

ಮಕ್ಕಳಿಗೆ ಸಂಸ್ಕಾರ ಕೊಡಬೇಕಾದರೆ ಮೊದಲು ನಾವು ಬದಲಾಗಬೇಕು

ಮಕ್ಕಳಿಗೆ ಸಂಸ್ಕಾರ ಕಲಿಸುವ ಬಗ್ಗೆ ಮಾತನಾಡಿದ ಅವರು, “ಶಿಕ್ಷಣ ಸಂಸ್ಥೆ ಪಾಠ ಕಲಿಸುತ್ತದೆ. ಆದರೆ ಮನೆಯಲ್ಲಿನ ಸಂಸ್ಕಾರವೇ ಜೀವನದ ನಿಜವಾದ ಪ್ರಮಾಣಪತ್ರ” ಎಂದರು.

“ನಮಗೆ ಇಲ್ಲದ ಸಂಸ್ಕಾರವನ್ನು ಮಕ್ಕಳಿಂದ ಏಕೆ ನಿರೀಕ್ಷಿಸುತ್ತೀರಿ? ನಮ್ಮ ನಡತೆಯೇ ಮೇಲ್ಪಂಕ್ತಿಯಾಗಬೇಕು. ಮಕ್ಕಳು ಮಾತಿಗಿಂತ ನಮ್ಮ ನಡೆ ನೋಡುತ್ತಾರೆ” ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ದೇವರನ್ನೇ ವ್ಯವಹಾರದ ಮಟ್ಟಕ್ಕೆ ತಂದಿದ್ದೇವೆ!

ಭಾಷಣದ ಕೊನೆಯಲ್ಲಿ ಇಂದಿನ ಧಾರ್ಮಿಕ ಆಚರಣೆಗಳ ಮೇಲೂ ಟೀಕೆ ಮಾಡಿದ ಅವರು, “ಇಂತಹ ಕೆಲಸ ಮಾಡಿದರೆ ಗಣಹೋಮ, ಅಂತಹ ಕೆಲಸ ಮಾಡಿದರೆ ರುದ್ರಹೋಮ ಎಂದು ದೇವರ ಜೊತೆ ವ್ಯವಹಾರ ಮಾಡುವ ಮಟ್ಟಕ್ಕೆ ನಾವು ಇಳಿದಿದ್ದೇವೆ” ಎಂದು ಕಿಡಿಕಾರಿದರು.

“ಭಗವಂತ ನಮ್ಮ ಮಾತಿನಂತೆ ಬರೆದುಕೊಳ್ಳುವ ಗುಮಾಸ್ತನಲ್ಲ. ಸೃಷ್ಟಿಯ ಚೈತನ್ಯವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಬದುಕಿನ ಕಷ್ಟಗಳಿಗೆ ಉತ್ತರ ಸಿಗುತ್ತದೆ” ಎಂದು ಅವರು ಹೇಳಿದರು.

"ನನ್ನ ಮಾತು ತೀಕ್ಷ್ಣ ಅನ್ನಿಸಿದರೆ ಮತ್ತೆ ಕರೆಯಬೇಡಿ"

ಭಾಷಣದ ಅಂತ್ಯದಲ್ಲಿ ತಮ್ಮ ಮಾತಿನ ಬಗ್ಗೆ ತಾವೇ ಪ್ರತಿಕ್ರಿಯಿಸಿದ ಅವರು, “ನನ್ನ ಮಾತು ತೀಕ್ಷ್ಣ ಅನಿಸಬಹುದು. ಆದರೆ ಅದು ವಾಸ್ತವ. ಆ ತೀಕ್ಷ್ಣತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಮತ್ತೆ ಇಂತಹ ಕಾರ್ಯಕ್ರಮಕ್ಕೆ ನನ್ನನ್ನು ಕರೆಯಬೇಡಿ” ಎಂದು ಹೇಳಿ ಮಾತು ಮುಗಿಸಿದರು.

ಈ ಭಾಷಣ ಇದೀಗ ಸಾಮಾಜಿಕ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಬ್ರಾಹ್ಮಣತ್ವದ ವ್ಯಾಖ್ಯಾನ ಮತ್ತು ಸಂಸ್ಕಾರದ ಅರ್ಥದ ಬಗ್ಗೆ ಹೊಸ ಚರ್ಚೆಗೆ ನಾಂದಿ ಹಾಡಿದೆ.

What's Your Reaction?

Like Like 2
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0