ಹೆಂಡತಿಯೊಂದಿಗೆ ಜಗಳ; ಬಾತ್‌ರೂಮ್‌ನಲ್ಲಿ ಕುತ್ತಿಗೆಗೆ ಬ್ಲೇಡ್‌ ಹೊಡೆದು ಪತಿ ಆತ್ಮಹತ್ಯೆ

Jun 21, 2026 - 13:40
 0  589
ಹೆಂಡತಿಯೊಂದಿಗೆ ಜಗಳ; ಬಾತ್‌ರೂಮ್‌ನಲ್ಲಿ ಕುತ್ತಿಗೆಗೆ ಬ್ಲೇಡ್‌ ಹೊಡೆದು ಪತಿ ಆತ್ಮಹತ್ಯೆ

ಆಪ್ತ ನ್ಯೂಸ್ ಶಿರಸಿ:

ಹೆಂಡತಿಯೊಂದಿಗೆ ನಡೆದ ಕುಟುಂಬ ಕಲಹವು ಪತಿಯ ಆತ್ಮಹತ್ಯೆಯಲ್ಲಿ ಅಂತ್ಯಗೊಂಡ ದಾರುಣ ಘಟನೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಎಸಳೆ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಮೃತರನ್ನು ಎಲ್.ಕೆ. ಹೆಗಡೆ (56) ಎಂದು ಗುರುತಿಸಲಾಗಿದೆ. ಅವರು ಮೂಲತಃ ಕಾನಗೋಡು ಗ್ರಾಮದವರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಎಸಳೆ ಗ್ರಾಮದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಅಡಿಕೆ ವ್ಯಾಪಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಲಭ್ಯವಾದ ಮಾಹಿತಿಯ ಪ್ರಕಾರ, ಭಾನುವಾರ ಬೆಳಿಗ್ಗೆ ಎಲ್.ಕೆ. ಹೆಗಡೆ ಹಾಗೂ ಅವರ ಪತ್ನಿಯ ನಡುವೆ ಯಾವುದೋ ಕುಟುಂಬ ವಿಚಾರವಾಗಿ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಜಗಳದ ಬಳಿಕ ಮನನೊಂದ ಹೆಗಡೆ ಅವರು ಮನೆಯ ಬಾತ್‌ರೂಮ್‌ಗೆ ತೆರಳಿ ಕುತ್ತಿಗೆಗೆ ಬ್ಲೇಡ್‌ನಿಂದ ಗಾಯ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಕುಟುಂಬದ ಸದಸ್ಯರು ಗಮನಿಸಿ ತಕ್ಷಣ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಅಷ್ಟರಲ್ಲಾಗಲೇ ಅವರು ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿ ಮರಣೋತ್ತರ ಪರೀಕ್ಷೆಗಾಗಿ ಶಿರಸಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ನಿಖರ ಕಾರಣ ಹಾಗೂ ಆತ್ಮಹತ್ಯೆಗೆ ಕಾರಣವಾದ ಸಂದರ್ಭಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0