"ಇನ್ನೊಂದು ತಿಂಗಳಲ್ಲಿ ಅಕ್ರಮ ಸಾರಾಯಿ-ಗಾಂಜಾ ಹತೋಟಿಗೆ ಬರದಿದ್ದರೆ ಹಳ್ಳಿ ಹಳ್ಳಿಗಳಿಂದ ಜನರ ದಂಗೆ": ಶಾಸಕರು, ಸರ್ಕಾರಕ್ಕೆ ಅನಂತಮೂರ್ತಿ ಹೆಗಡೆ ಎಚ್ಚರಿಕೆ

Jun 16, 2026 - 21:28
 0  84
"ಇನ್ನೊಂದು ತಿಂಗಳಲ್ಲಿ ಅಕ್ರಮ ಸಾರಾಯಿ-ಗಾಂಜಾ ಹತೋಟಿಗೆ ಬರದಿದ್ದರೆ ಹಳ್ಳಿ ಹಳ್ಳಿಗಳಿಂದ ಜನರ ದಂಗೆ": ಶಾಸಕರು, ಸರ್ಕಾರಕ್ಕೆ ಅನಂತಮೂರ್ತಿ ಹೆಗಡೆ ಎಚ್ಚರಿಕೆ

ಶಿರಸಿಯಲ್ಲಿ ಬೃಹತ್ ಪ್ರತಿಭಟನೆ; ಅಕ್ರಮ ಮದ್ಯ, ಡ್ರಗ್ಸ್ ಜಾಲದ ವಿರುದ್ಧ ಜನಾಕ್ರೋಶ

ಆಪ್ತ ನ್ಯೂಸ್ ಶಿರಸಿ:

ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಕ್ರಮ ಸಾರಾಯಿ ಮಾರಾಟ, ಗಾಂಜಾ ಸೇವನೆ ಹಾಗೂ ಡ್ರಗ್ಸ್ ಜಾಲದ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಮಂಗಳವಾರ ಶಿರಸಿ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅಕ್ರಮ ಚಟುವಟಿಕೆಗಳನ್ನು ಒಂದು ತಿಂಗಳೊಳಗೆ ನಿಯಂತ್ರಿಸದಿದ್ದರೆ ಹಳ್ಳಿ ಹಳ್ಳಿಗಳಿಂದ ಜನರನ್ನು ಸಂಘಟಿಸಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

"ಹೆಂಡದ ವಿಷದಿಂದ ಗ್ರಾಮೀಣ ಬದುಕು ನಾಶವಾಗುತ್ತಿದೆ"

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಬ್ರಹ್ಮರ್ಷಿ ನಾರಾಯಣ ಗುರುಗಳ ಸಂದೇಶವನ್ನು ಉಲ್ಲೇಖಿಸಿ, "ಸಾರಾಯಿ ವಿಷ, ಅದನ್ನು ಮಾರಬೇಡ, ಮಾಡಬೇಡ, ಕುಡಿಯಬೇಡ" ಎಂಬ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.

ಸಣ್ಣ ಹಳ್ಳಿಗಳಲ್ಲಿಯೂ ಮದ್ಯದ ಹಾವಳಿ ಹೆಚ್ಚಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸುಲಭವಾಗಿ ದೊರೆಯುತ್ತಿರುವ ಅಕ್ರಮ ಸಾರಾಯಿ ಜನರ ಆರೋಗ್ಯವನ್ನು ಹಾಳು ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅಕ್ರಮವಾಗಿ ಮಾರಾಟವಾಗುತ್ತಿರುವ ಕಳಪೆ ಗುಣಮಟ್ಟದ ಸಾರಾಯಿ ಕಿಡ್ನಿ, ಲಿವರ್ ಸೇರಿದಂತೆ ದೇಹದ ಪ್ರಮುಖ ಅಂಗಾಂಗಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಈಗಾಗಲೇ ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿವೆ ಎಂದು ಹೇಳಿದರು.

"ಪಟ್ಟಣಕ್ಕೆ ಹೋಗಿ ಕುಡಿಯುವ ಬದಲು ಹಳ್ಳಿಯಲ್ಲೇ ಸುಲಭವಾಗಿ ಮದ್ಯ ಸಿಗುತ್ತಿರುವುದರಿಂದ ಜನರು ಪ್ರತಿದಿನ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ಆರೋಗ್ಯ ಮಾತ್ರವಲ್ಲ, ಕುಟುಂಬಗಳ ಆರ್ಥಿಕ ಸ್ಥಿತಿಯೂ ಕುಸಿಯುತ್ತಿದೆ" ಎಂದು ಅವರು ಹೇಳಿದರು.

"ಯುವಜನಾಂಗವನ್ನು ನುಂಗುತ್ತಿರುವ ಗಾಂಜಾ ಜಾಲ"

ಗಾಂಜಾ ಹಾಗೂ ಡ್ರಗ್ಸ್ ಮಾರಾಟ ಯುವಜನತೆಯನ್ನು ನೇರವಾಗಿ ಬಲಿಪಶು ಮಾಡುತ್ತಿದೆ ಎಂದು ಆರೋಪಿಸಿದ ಅನಂತಮೂರ್ತಿ ಹೆಗಡೆ, "ದೇಶದ ಸಂಪತ್ತಾಗಬೇಕಾದ ವಿದ್ಯಾರ್ಥಿಗಳು ಮತ್ತು ಯುವಕರು ಮಾದಕ ವ್ಯಸನಕ್ಕೆ ಒಳಗಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದ ಕಾರಣ ದಂಧೆ ಇನ್ನಷ್ಟು ವಿಸ್ತರಿಸುತ್ತಿದೆ" ಎಂದು ಕಿಡಿಕಾರಿದರು.

"ಇನ್ನೊಂದು ತಿಂಗಳೊಳಗೆ ಅಕ್ರಮ ಸಾರಾಯಿ, ಗಾಂಜಾ ಹಾಗೂ ಡ್ರಗ್ಸ್ ಚಟುವಟಿಕೆಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ತರದಿದ್ದರೆ ಹಳ್ಳಿ ಹಳ್ಳಿಗಳಿಂದ ಜನರು ಬೀದಿಗಿಳಿದು ತಕ್ಕ ಉತ್ತರ ನೀಡಲಿದ್ದಾರೆ" ಎಂದು ಎಚ್ಚರಿಕೆ ನೀಡಿದರು.

"ಕಾರ್‌ಗಳಲ್ಲಿ ಸಾಗುತ್ತಿದೆ ಅಕ್ರಮ ಸಾರಾಯಿ"

ಸಿದ್ದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಎಂ.ಕೆ. ತಿಮ್ಮಪ್ಪ ಮಾತನಾಡಿ, ಅಕ್ರಮ ಮದ್ಯ ಮಾರಾಟಗಾರರು ಯಾವುದೇ ಭಯವಿಲ್ಲದೆ ಕಾರು ಹಾಗೂ ಖಾಸಗಿ ವಾಹನಗಳಲ್ಲಿ ಸಾರಾಯಿಯನ್ನು ಸಾಗಿಸಿ ಬಹಿರಂಗವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

"ಚಾಕೊಲೇಟ್ ರೂಪದಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ"

ಸಾಮಾಜಿಕ ಹೋರಾಟಗಾರ ಮಹಾಂತೇಶ ಹಾದಿಮನಿ ಮಾತನಾಡಿ, ಗಾಂಜಾ ದಂಧೆ ಈಗ ಭಯಾನಕ ಮಟ್ಟ ತಲುಪಿದ್ದು, ಕೆಲವೆಡೆ ವಿದ್ಯಾರ್ಥಿಗಳ ಕೈಗೆ ಚಾಕೊಲೇಟ್ ರೂಪದಲ್ಲಿಯೂ ಮಾದಕ ವಸ್ತುಗಳು ತಲುಪುತ್ತಿರುವ ಮಾಹಿತಿ ಇದೆ ಎಂದು ಹೇಳಿದರು.

ನಗರದ ಕೆಲ ಪ್ರದೇಶಗಳನ್ನು ಗಾಂಜಾ ಮಾರಾಟಗಾರರು ಅಡ್ಡೆಯಾಗಿ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ರಾಜಕೀಯ ಒತ್ತಡವಿಲ್ಲದೆ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಲು ಅವಕಾಶ ನೀಡಿದರೆ ಈ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

"ಕುಟುಂಬಗಳನ್ನು ನಾಶ ಮಾಡುತ್ತಿದೆ ಡ್ರಗ್ಸ್"

ಸಾಂತ್ವಾನ ಮಹಿಳಾ ವೇದಿಕೆಯ ಜ್ಯೋತಿ ಭಟ್ ಮಾತನಾಡಿ, ಡ್ರಗ್ಸ್ ವ್ಯಸನದಿಂದ ಎಷ್ಟೋ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂಬುದು ತಮ್ಮ ಸಾಮಾಜಿಕ ಕಾರ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದೆ ಎಂದರು.

"ಮಾದಕ ವಸ್ತು ಸೇವಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ಮಾತ್ರ ಸಾಲದು. ಮಾರಾಟ ಜಾಲವನ್ನು ಬುಡಸಮೇತ ಕಿತ್ತುಹಾಕಿದಾಗ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ" ಎಂದು ಹೇಳಿದರು.

"ಮೂಲ ಪತ್ತೆ ಮಾಡಿ ಜಾಲ ನಿರ್ಮೂಲನೆ ಮಾಡಿ"

ಸುರೇಶ್ ನಾಯ್ಕ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟವಾಗುತ್ತಿರುವ ಸೆಕೆಂಡ್ಸ್ ಸಾರಾಯಿ ಸಂಪೂರ್ಣ ನಿಲ್ಲಬೇಕು. ಗಾಂಜಾ ಎಲ್ಲಿಂದ ಬರುತ್ತಿದೆ ಎಂಬುದರ ಮೂಲ ಪತ್ತೆಹಚ್ಚಿ ಯಾವುದೇ ಒತ್ತಡಕ್ಕೆ ಮಣಿಯದೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

"ಅಕ್ರಮ ಸಾರಾಯಿ ನಿಲ್ಲಿಸದಿದ್ದರೆ ಉಗ್ರ ಹೋರಾಟ"

ಬಿಜೆಪಿ ಜಿಲ್ಲಾ ವಿಶೇಷ ಆಹ್ವಾನಿತ ಸದಸ್ಯ ಮಾರುತಿ ನಾಯ್ಕ್ ಹೊಸೂರು ಮಾತನಾಡಿ, ಕೆಲವು ಪ್ರದೇಶಗಳಲ್ಲಿ ವೈನ್ ಸ್ಟೋರ್‌ಗಳ ಸುತ್ತ ಅಕ್ರಮ ಮದ್ಯದ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ರೈತರು ಕೃಷಿ ಚಟುವಟಿಕೆ ನಡೆಸಲು ಸಹ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ, ಕಾನಸೂರು ವಸತಿ ಶಾಲೆಯಲ್ಲಿ ನಡೆದ ವಿದ್ಯಾರ್ಥಿ ಸಾವಿನ ಪ್ರಕರಣದ ಕುರಿತು ಅನುಮಾನ ವ್ಯಕ್ತಪಡಿಸಿದ ಅವರು, ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

"ಹಿಡಿದು ಬಿಡುವುದು ನಿಲ್ಲಬೇಕು"

ಗಣೇಶ್ ಕ್ಷತ್ರಿಯ ಮಾತನಾಡಿ, ಬನವಾಸಿ ಸೇರಿದಂತೆ ತಾಲೂಕಿನ ಹಲವೆಡೆ ಗಾಂಜಾ ಸೇವನೆ ಹಾಗೂ ಮಾರಾಟ ಹೆಚ್ಚಾಗಿದ್ದು, ಬಂಧನದ ನಂತರ ಆರೋಪಿಗಳನ್ನು ಸುಲಭವಾಗಿ ಬಿಡುಗಡೆ ಮಾಡುವ ಪ್ರವೃತ್ತಿ ನಿಲ್ಲಬೇಕು ಎಂದು ಹೇಳಿದರು.

ಪ್ರಮುಖರ ಉಪಸ್ಥಿತಿ

ಪ್ರತಿಭಟನೆಯಲ್ಲಿ ವಿ.ಎಂ. ಭಟ್, ಅಣ್ಣಪ್ಪ ಹಸ್ಲರ್, ಶ್ರೀಕಾಂತ್ ಬಳ್ಳಾರಿ, ಹರೀಶ್ ಪಾಲೇಕರ್, ವಿನಾಯಕ ನಾಯ್ಕ್, ಅನಸೂಯ ಹೆಗಡೆ, ಯುವರಾಜ ಗೌಡ ಸಂತೊಳ್ಳಿ, ಮಂಜುನಾಥ ನಾಯ್ಕ್, ರಾಘವೇಂದ್ರ ನಾಯ್ಕ್, ಶಂಕರ್ ಹೆಗಡೆ, ಕೃಷ್ಣಮೂರ್ತಿ ಐಸೂರ್, ಗಣಪತಿ ಹೆಗಡೆ, ಶ್ರೀಪಾದ್ ಹೆಗಡೆ, ನಾರಾಯಣ ಹೆಗಡೆ, ಮಹೇಂದ್ರ ಭಟ್, ಜಿ.ಎಸ್. ಹೆಗಡೆ, ಮಂಜುನಾಥ ಪಾಟೀಲ್, ಪ್ರದೀಪ್ ಹೆಗಡೆ, ಉಪೇಂದ್ರ ಮೇಸ್ತ ಸೇರಿದಂತೆ ಹಲವರು ಭಾಗವಹಿಸಿದ್ದರು.

ಶಿರಸಿ ತಾಲೂಕು ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ರಮೇಶ್ ಕುಪ್ಪಳ್ಳಿ ಮನವಿ ಪತ್ರ ವಾಚಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0