ತನಿಖೆ ನೆಪದಲ್ಲಿ ದಲಿತ ಯುವಕನ ಮೇಲೆ ಹಲ್ಲೆ ಆರೋಪ: DRFO ಕಾರ್ತಿಕ ನಾರ್ವೆಕರ್, ಬೀಟ್ ಗಾರ್ಡ್ ರೋಹಿತ ನಾಯ್ಕ್ ಸೇರಿ ಮೂವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲು
ಆಪ್ತ ನ್ಯೂಸ್ ಸಿದ್ದಾಪುರ:
ತನಿಖೆಯ ಹೆಸರಿನಲ್ಲಿ ಅಮಾಯಕ ದಲಿತ ಯುವಕನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತೀವ್ರವಾಗಿ ಥಳಿಸಿರುವ ಆರೋಪ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ವಲಯ ಅರಣ್ಯ ಇಲಾಖೆಯ ಕಾನಸೂರು ಸೆಕ್ಷನ್‌ನ ಡಿಆರ್‌ಎಫ್‌ಒ ಕಾರ್ತಿಕ ನಾರ್ವೆಕರ್, ಬೀಟ್ ಗಾರ್ಡ್ ರೋಹಿತ ನಾಯ್ಕ್ ಹಾಗೂ ಇನ್ನೋರ್ವ ವ್ಯಕ್ತಿಯ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಅಟ್ರಾಸಿಟಿ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ತ್ಯಾಗಲಿ ಸಮೀಪ ಶವವಾಗಿ ಪತ್ತೆಯಾಗಿದ್ದ ಕಡವೆ (ಜಿಂಕೆ) ಪ್ರಕರಣದ ತನಿಖೆ ವೇಳೆ ಈ ಘಟನೆ ನಡೆದಿರುವುದಾಗಿ ಆರೋಪಿಸಲಾಗಿದೆ. ನಾಣಿಕಟ್ಟ ಗ್ರಾಮದ ಕೂಲಿ ಕಾರ್ಮಿಕ ಯುವಕ ನಾಗರಾಜ ಬಂಗಾರ್ಯ ಚೆನ್ನಯ್ಯ ಎಂಬಾತನನ್ನು ಸಂಶಯದ ಮೇರೆಗೆ ಆತನ ಮನೆಯಿಂದ ಕರೆದೊಯ್ದು, ಕಾನಸೂರು ನರ್ಸರಿ ಆವರಣದಲ್ಲಿ ವಿಚಾರಣೆ ನಡೆಸುವ ನೆಪದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನರ್ಸರಿಯಲ್ಲಿ ಥಳಿತ ಆರೋಪ
ಮೂಲಗಳ ಪ್ರಕಾರ, ಯುವಕನನ್ನು ವಿಚಾರಣೆಗೆಂದು ಕರೆಸಿಕೊಂಡ ಬಳಿಕ ಹಲವು ಗಂಟೆಗಳ ಕಾಲ ಕಿರುಕುಳ ನೀಡಿ, ದೈಹಿಕ ಹಲ್ಲೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಘಟನೆಯ ಬಳಿಕ ಯುವಕನ ಆರೋಗ್ಯ ಹದಗೆಟ್ಟಿದ್ದು, ಪ್ರಕರಣ ಬೆಳಕಿಗೆ ಬಂದ ನಂತರ ಸ್ಥಳೀಯ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಭೀಮ ಘರ್ಜನೆ ಸಂಘಟನೆಯ ಪ್ರತಿಭಟನೆ
ಹಲ್ಲೆಗೆ ಒಳಗಾದ ನಾಗರಾಜ ದಲಿತ ಸಮುದಾಯಕ್ಕೆ ಸೇರಿದವನಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಭೀಮ ಘರ್ಜನೆ ಸಂಘಟನೆ ತೀವ್ರ ಪ್ರತಿಭಟನೆ ನಡೆಸಿತ್ತು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅಧಿಕಾರ ದುರುಪಯೋಗ ಮಾಡಿದವರನ್ನು ಅಮಾನತುಗೊಳಿಸಬೇಕು ಎಂದು ಸಂಘಟನೆ ಒತ್ತಾಯಿಸಿತ್ತು.
ಪ್ರತಿಭಟನೆ ಹಾಗೂ ಸಾರ್ವಜನಿಕ ಒತ್ತಡದ ನಡುವೆಯೇ ಜೂನ್ 13ರಂದು ತಡರಾತ್ರಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಆರ್‌ಎಫ್‌ಒ ಕಾರ್ತಿಕ ನಾರ್ವೆಕರ್, ಬೀಟ್ ಗಾರ್ಡ್ ರೋಹಿತ ನಾಯ್ಕ್ ಹಾಗೂ ಇನ್ನೋರ್ವನ ವಿರುದ್ಧ ಅಟ್ರಾಸಿಟಿ ಕಾಯ್ದೆ ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೂರನೇ ಆರೋಪಿ ಯಾರು?
ಪ್ರಕರಣದಲ್ಲಿ ಇಬ್ಬರು ಅರಣ್ಯ ಸಿಬ್ಬಂದಿಯ ಹೆಸರು ಬಹಿರಂಗವಾಗಿದ್ದರೂ, ಹಲ್ಲೆಯಲ್ಲಿ ಭಾಗಿಯಾಗಿದ್ದರೆಂದು ಹೇಳಲಾಗುತ್ತಿರುವ ಮೂರನೇ ವ್ಯಕ್ತಿಯ ಗುರುತು ಇನ್ನೂ ಸ್ಪಷ್ಟವಾಗಿಲ್ಲ. ಆತ ಯಾರು? ಯಾವ ಹುದ್ದೆಯಲ್ಲಿದ್ದಾನೆ? ಅಥವಾ ಇಲಾಖೆಗೆ ಸಂಬಂಧಿಸಿದ ವ್ಯಕ್ತಿಯೇ ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಪಾರದರ್ಶಕ ತನಿಖೆಗೆ ಒತ್ತಾಯ
ದಲಿತ ಯುವಕನ ಮೇಲೆ ನಡೆದಿರುವ ಈ ದೌರ್ಜನ್ಯ ಆರೋಪ ಅರಣ್ಯ ಇಲಾಖೆಯ ಕಾರ್ಯವೈಖರಿಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತನಿಖೆಯ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಲು ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ವಿವಿಧ ದಲಿತ ಸಂಘಟನೆಗಳು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಸ್ತುತ ಪ್ರಕರಣದ ತನಿಖೆಯನ್ನು ಸಿದ್ದಾಪುರ ಪೊಲೀಸರು ಮುಂದುವರಿಸಿದ್ದು, ಮುಂದಿನ ಬೆಳವಣಿಗೆಗಳತ್ತ ಜಿಲ್ಲೆಯ ಜನರ ಗಮನ ನೆಟ್ಟಿದೆ.
What's Your Reaction?
Like
0
Dislike
0
Love
0
Funny
0
Angry
1
Sad
0
Wow
0



