ಬಂಡಲ–ಕಾನಸೂರು ದುರಂತಗಳ ಬೆನ್ನಲ್ಲೇ ಅಧಿಕಾರಿಗಳಿಗೆ ಶಾಸಕ ಭೀಮಣ್ಣ ನಾಯ್ಕ್ ಖಡಕ್ ಎಚ್ಚರಿಕೆ!
“ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ”: ಭೀಮಣ್ಣ ನಾಯ್ಕ
ಆಪ್ತ ನ್ಯೂಸ್ ಶಿರಸಿ:
ಶಿರಸಿ ತಾಲೂಕಿನ ಬಂಡಲ ವಸತಿ ನಿಲಯದಲ್ಲಿ ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿ ಬಳಿಕ ಮಗು ಸಾವಿಗೀಡಾದ ಪ್ರಕರಣ ಹಾಗೂ ಸಿದ್ದಾಪುರ ತಾಲೂಕಿನ ಕಾನಸೂರು ಇಂದಿರಾಗಾಂಧಿ ವಸತಿ ನಿಲಯದಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಜಿಲ್ಲೆಯಲ್ಲಿ ತೀವ್ರ ಆಘಾತ ಮೂಡಿಸಿರುವ ಬೆನ್ನಲ್ಲೇ, ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕ್ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ ವಿವಿಧ ವಸತಿ ಶಾಲೆಗಳು, ವಿದ್ಯಾರ್ಥಿ ನಿಲಯಗಳು ಮತ್ತು ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಸೋಮವಾರ ನಡೆದ ಮಹತ್ವದ ಸಭೆಯಲ್ಲಿ ಮಾತನಾಡಿದ ಅವರು, “ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ” ಎಂದು ಸ್ಪಷ್ಟಪಡಿಸಿದರು.
“ಮರೆಯಲಾಗದ ದುರಂತಗಳು”
ಬಂಡಲ್ ಹಾಗೂ ಕಾನಸೂರಿನಲ್ಲಿ ನಡೆದ ಘಟನೆಗಳು ಸಮಾಜವನ್ನು ಬೆಚ್ಚಿಬೀಳಿಸಿದ್ದು, ವಿದ್ಯಾರ್ಥಿಗಳ ಮೇಲ್ವಿಚಾರಣೆ ಮತ್ತು ಸುರಕ್ಷತಾ ವ್ಯವಸ್ಥೆಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ. ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಶಾಸಕ ಭೀಮಣ್ಣ ನಾಯ್ಕ್, “ಈ ಘಟನೆಗಳು ಎಂದಿಗೂ ಮರೆಯಲಾಗದಂತಹವು. ಇದರ ಹಿಂದೆ ಯಾರೇ ನಿರ್ಲಕ್ಷ್ಯ ತೋರಿದ್ದರೂ ಅವರು ಕಠಿಣ ಶಿಕ್ಷೆ ಎದುರಿಸಲೇಬೇಕು” ಎಂದು ಹೇಳಿದರು.
ಕಟ್ಟುನಿಟ್ಟಿನ ತನಿಖೆಗೆ ಆಗ್ರಹ
ಪ್ರಕರಣಗಳ ಸಂಪೂರ್ಣ ಸತ್ಯಾಂಶ ಹೊರಬರಬೇಕಿದ್ದು, ಪೊಲೀಸ್ ಇಲಾಖೆ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಬೇಕೆಂದು ಶಾಸಕ ಭೀಮಣ್ಣ ನಾಯ್ಕ್ ಒತ್ತಾಯಿಸಿದರು. ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ವಾರ್ಡನ್‌ಗಳು, ಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ
ಸಭೆಯಲ್ಲಿ ವಸತಿ ಶಾಲೆಗಳ ವಾರ್ಡನ್‌ಗಳು, ಶಿಕ್ಷಕರು ಹಾಗೂ ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ, ಸುರಕ್ಷತೆ, ಹಾಜರಾತಿ ಮೇಲ್ವಿಚಾರಣೆ ಮತ್ತು ರಾತ್ರಿ ಸಮಯದ ನಿಗಾ ವ್ಯವಸ್ಥೆ ಕುರಿತು ವಿಶೇಷ ಸೂಚನೆಗಳನ್ನು ನೀಡಲಾಯಿತು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ಪರಿಹರಿಸುವಂತೆ ತಿಳಿಸಲಾಯಿತು.
ಅಧಿಕಾರಿಗಳ ಉಪಸ್ಥಿತಿ
ಸಭೆಯಲ್ಲಿ ಉಪವಿಭಾಗಾಧಿಕಾರಿ ಚಂದ್ರಶೇಖರ ಆರ್.ಜೆ., ತಹಶೀಲ್ದಾರ್ ಪಟ್ಟರಾಜ ಗೌಡ್ರು, ಡಿವೈಎಸ್ಪಿ ಗೀತಾ ಪಾಟೀಲ್, ಸಿಪಿಐ ಸಂಪತ್ ಕುಮಾರ್, ಪೌರಾಯುಕ್ತ ಪ್ರಕಾಶ್ ಚನ್ನಪ್ಪನವರ್, ಗ್ಯಾರಂಟಿ ಸಮಿತಿ ಅಧ್ಯಕ್ಷೆ ಸುಮಾ ಉಗ್ರಾಣಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಸುರಕ್ಷತೆಗೆ ಹೊಸ ಕ್ರಮಗಳ ಸಾಧ್ಯತೆ
ಬಂಡಲ ಮತ್ತು ಕಾನಸೂರು ಘಟನೆಗಳ ನಂತರ ವಸತಿ ನಿಲಯಗಳಲ್ಲಿ ಭದ್ರತಾ ವ್ಯವಸ್ಥೆ ಬಲಪಡಿಸುವುದು, ನಿಯಮಿತ ಪರಿಶೀಲನೆ ನಡೆಸುವುದು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವ ಕುರಿತು ಸರ್ಕಾರದ ಮಟ್ಟದಲ್ಲೂ ಗಂಭೀರ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



