ಬೇಡ್ತಿ ಯೋಜನೆ ತಡೆಯಲು ಗಂಗಾವಳಿ ತುದಿವರೆಗೂ ಜಾಗೃತಿ ಮೂಡಿಸಿ: ಸ್ವರ್ಣವಲ್ಲೀ ಶ್ರೀಗಳ ಕರೆ

Jun 11, 2026 - 09:32
 0  94
ಬೇಡ್ತಿ ಯೋಜನೆ ತಡೆಯಲು ಗಂಗಾವಳಿ ತುದಿವರೆಗೂ ಜಾಗೃತಿ ಮೂಡಿಸಿ: ಸ್ವರ್ಣವಲ್ಲೀ ಶ್ರೀಗಳ ಕರೆ

ಆಪ್ತ ನ್ಯೂಸ್ ಯಲ್ಲಾಪುರ:

ಸರ್ಕಾರಕ್ಕೆ ಬೇಡ್ತಿ ಯೋಜನೆ ಜಾರಿಗೊಳಿಸುವುದರಲ್ಲಿ ಅಪಾರ ಆಸಕ್ತಿ ಹಾಗೂ ತುರ್ತು ಮನೋಭಾವವಿದೆ. ಆದ್ದರಿಂದ ಬೇಡ್ತಿ ನದಿಯ ದಡದಿಂದ ಗಂಗಾವಳಿ ನದಿಯ ಸಂಗಮ ತುದಿವರೆಗೂ ಜನಜಾಗೃತಿ ಅಭಿಯಾನ ನಡೆಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಕರೆ ನೀಡಿದರು.

ಬೇಡ್ತಿ ನದಿಯ ತಟದಲ್ಲಿರುವ ಹೊಳೆ ಹುಲಿಯಪ್ಪ ದೇವಸ್ಥಾನ ಸಮೀಪ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ವೃಕ್ಷಾರೋಪಣ ಹಾಗೂ ಹಸಿರು ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನದಿ ಮತ್ತು ಪರಿಸರ ಸಂರಕ್ಷಣೆಯ ಅಗತ್ಯತೆಯನ್ನು ಒತ್ತಿ ಹೇಳಿದರು.

ಮಲೆನಾಡಿನ ರೈತರ ಬದುಕಿನ ಪ್ರಶ್ನೆ

"ಬಯಲುಸೀಮೆ ಪ್ರದೇಶಗಳಲ್ಲಿ ಎರಡು-ಮೂರು ಬೆಳೆ ಬೆಳೆಯುವ ಅವಕಾಶವಿದ್ದು, ಅನೇಕ ರೈತರು ನೂರಾರು ಎಕರೆ ಜಮೀನು ಹೊಂದಿದ್ದಾರೆ. ಆದರೆ ಮಲೆನಾಡಿನ ರೈತರಿಗೆ ಮೂರು ಎಕರೆ ಜಮೀನಿದ್ದರೂ ಅದು ದೊಡ್ಡ ವಿಷಯ. ಆದ್ದರಿಂದ ಈ ನೀರನ್ನು ಅದರ ಸ್ವಾಭಾವಿಕ ಹರಿವಿನಲ್ಲಿಯೇ ಹರಿಯಲು ಬಿಡುವುದು ಉತ್ತಮ" ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಬೇಡ್ತಿ ಯೋಜನೆ ವಿರುದ್ಧದ ಹೋರಾಟ ನಿರಂತರವಾಗಿ ಸಾಗಬೇಕು. ಹೋರಾಟದ ಸರಪಳಿಯ ಯಾವುದೇ ಕೊಂಡಿ ಕಳಚದಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಪ್ರಸ್ತಾಪಿತ ಯೋಜನೆ ಅವೈಜ್ಞಾನಿಕ ಎಂಬುದು ಈಗಾಗಲೇ ಸ್ಪಷ್ಟವಾಗಿದೆ ಎಂದರು.

ಭೂಕುಸಿತಗಳ ಆತಂಕ

ಜಿಲ್ಲೆಯ ನದಿಗಳು, ಕಣಿವೆಗಳು ಮತ್ತು ಪರಿಸರದ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಪ್ರಕೃತಿ ವಿರುದ್ಧದ ಅವೈಜ್ಞಾನಿಕ ಯೋಜನೆಗಳಿಂದ ಭೂಕುಸಿತ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶ್ರೀಗಳು ಎಚ್ಚರಿಕೆ ನೀಡಿದರು.

ಜನಪ್ರತಿನಿಧಿಗಳು ಒಗ್ಗಟ್ಟಾದರೆ ಯೋಜನೆ ಸಾಧ್ಯವಿಲ್ಲ

ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಜಿಲ್ಲೆಯ ಆರು ಶಾಸಕರು, ಸಂಸದರು, ಇಬ್ಬರು ವಿಧಾನ ಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ನಿಂತು ಗಟ್ಟಿ ನಿರ್ಣಯ ಕೈಗೊಂಡರೆ ಬೇಡ್ತಿ ಯೋಜನೆ ಜಾರಿಯಾಗುವುದು ಅಸಾಧ್ಯ ಎಂದರು.

ಸಾವಿರಾರು ಕೋಟಿ ವೆಚ್ಚದ ಯೋಜನೆಗೆ ವಿರೋಧ

ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ನಡೆದ ಎಲ್ಲ ಹೋರಾಟಗಳು ಯಶಸ್ವಿಯಾಗಿವೆ. ಹಿಂದೆ 26 ಕೋಟಿ ರೂಪಾಯಿ ವೆಚ್ಚದಲ್ಲಿ ಬೇಡ್ತಿಯಿಂದ ಯಲ್ಲಾಪುರಕ್ಕೆ ನೀರು ತರುವ ಯೋಜನೆಯೇ ವಿಫಲವಾಗಿತ್ತು. ಯಲ್ಲಾಪುರಕ್ಕೆ ನೀರು ತರಲಾಗದ ಸರ್ಕಾರ ಬಯಲುಸೀಮೆಗೆ ನೀರು ಸಾಗಿಸುವುದಾಗಿ ಹೇಳುತ್ತಿರುವುದು ಅಚ್ಚರಿಯ ಸಂಗತಿ ಎಂದು ಟೀಕಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಏಳು ಜಲವಿದ್ಯುತ್ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಕಳಚೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗುಡ್ಡ ಕುಸಿತಗಳು ಸಂಭವಿಸುತ್ತಿವೆ. ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ರೂಪಿಸಲಾಗುತ್ತಿರುವ ಈ ಯೋಜನೆ ನೀರಾವರಿ ಉದ್ದೇಶಕ್ಕಿಂತ ಹಣದ ದುರುಪಯೋಗಕ್ಕೆ ಹೆಚ್ಚು ಅವಕಾಶ ಕಲ್ಪಿಸುವಂತಿದೆ ಎಂದು ಆರೋಪಿಸಿದರು.

ಹೋರಾಟಕ್ಕೆ ಇಚ್ಛಾಶಕ್ತಿ ಅಗತ್ಯ

ಸ್ವರ್ಣವಲ್ಲೀ ಶ್ರೀಮಠದ ಕಾರ್ಯಾಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಸರ ಸಂರಕ್ಷಣೆಯ ಹೋರಾಟದಲ್ಲಿ ಜನರ ಇಚ್ಛಾಶಕ್ತಿ ಮತ್ತಷ್ಟು ಬಲಗೊಳ್ಳಬೇಕು. ಗುರುಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಹೋರಾಟದ ಸ್ವರೂಪ ಹಾಗೂ ಅದರ ಮಹತ್ವವನ್ನು ಜನತೆ ಈಗಾಗಲೇ ಅರಿತಿದ್ದಾರೆ ಎಂದರು.

ಸಮಿತಿಯ ಪ್ರಮುಖ ಅನಂತ ಭಟ್ಟ ಹುಳಗೋಳ ಅವರು ಹೋರಾಟದ ಮುಂದಿನ ಕಾರ್ಯಯೋಜನೆ ಹಾಗೂ ಪತ್ರಚಳುವಳಿ ಕುರಿತು ಮಾಹಿತಿ ನೀಡಿದರು.

ವೃಕ್ಷಾರೋಪಣ, ಪರಿಸರ ಗೀತೆ, ಫಲ ಸಮರ್ಪಣೆ

ಕಾರ್ಯಕ್ರಮದ ಆರಂಭದಲ್ಲಿ ವೇ. ಲಕ್ಷ್ಮೀನಾರಾಯಣ ಭಟ್ಟ ತಾರಿಮಕ್ಕಿ ಹಾಗೂ ಹರೀಶ ಹೆಗಡೆ ವೇದಘೋಷ ನೆರವೇರಿಸಿದರು. ಮಳಲಗಾಂವ್ ಗ್ರಾಮದ ಪರವಾಗಿ ನಾಗೇಶ ಸುಬ್ರಾಯ ಭಟ್ಟ ದಂಪತಿ ಶ್ರೀಗಳಿಗೆ ಫಲ ಸಮರ್ಪಿಸಿದರು.

ಶ್ರೀಲತಾ ರಾಜೀವ ಹೆಗಡೆ ಪರಿಸರ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಕೊಳ್ಳ ಸಂರಕ್ಷಣಾ ಸಮಿತಿ ಸಂಚಾಲಕ ನರಸಿಂಹ ಸಾತೊಡ್ಡಿ ಸ್ವಾಗತಿಸಿ, ತಾಲೂಕಿನಲ್ಲಿ ಕೈಗೊಳ್ಳಲಿರುವ ವೃಕ್ಷಾರೋಪಣ ಕಾರ್ಯಕ್ರಮಗಳ ರೂಪುರೇಷೆ ವಿವರಿಸಿದರು. ಎಂ.ಕೆ. ಭಟ್ಟ ಯಡಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸುಬ್ಬಣ್ಣ ಉದ್ದಾಬೈಲ್ ವಂದಿಸಿದರು.

ನೂರಾರು ಪರಿಸರ ಹೋರಾಟಗಾರರ ಭಾಗವಹಿಕೆ

ಕಾರ್ಯಕ್ರಮದಲ್ಲಿ ಕೆಎಂಎಫ್ ಉಪಾಧ್ಯಕ್ಷ ಸುರೇಶ್ಚಂದ್ರ ಕೇಶಿನಮನೆ, ಸೀಮಾಧ್ಯಕ್ಷ ಶ್ರೀಪಾದ ಹೆಗಡೆ, ನಾಗೇಶ ಪಣತಗೇರಿ, ವಿಶ್ವನಾಥ ಹೆಗಡೆ ಶೀಗೆಮನೆ, ಕೇಂದ್ರ ಮಾತೃಮಂಡಳಿಯ ಗೀತಾ ಶಿಗೆಮನೆ ಸೇರಿದಂತೆ ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು, ಮಾತೃಮಂಡಳಿಯ ಸದಸ್ಯರು, ಪರಿಸರ ಹೋರಾಟಗಾರರು, ವೈದಿಕ ಪರಿಷತ್ ಪ್ರತಿನಿಧಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

ಶಿರಸಿ, ಯಲ್ಲಾಪುರ ಸೇರಿದಂತೆ ವಿವಿಧ ಭಾಗಗಳಿಂದ ಸುಮಾರು 450ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೇಡ್ತಿ ನದಿ ಸಂರಕ್ಷಣೆಯ ಸಂಕಲ್ಪ ವ್ಯಕ್ತಪಡಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0