ವಸಂತ ನಾಯ್ಕ ಕೊಲೆ ಪ್ರಕರಣ: ಎಲ್ಲಾ ಆರೋಪಿಗಳಿಗೂ ಮತ್ತೆ ಜಾಮೀನು ನಿರಾಕರಣೆ

ಆರೋಪಿಗಳ ಅರ್ಜಿ ತಿರಸ್ಕರಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ – ಸರ್ಕಾರದ ಪರ ಸಮರ್ಥ ವಾದಕ್ಕೆ ಮನ್ನಣೆ

Jul 30, 2026 - 21:47
 0  209
ವಸಂತ ನಾಯ್ಕ ಕೊಲೆ ಪ್ರಕರಣ: ಎಲ್ಲಾ ಆರೋಪಿಗಳಿಗೂ ಮತ್ತೆ ಜಾಮೀನು ನಿರಾಕರಣೆ

ಆಪ್ತನ್ಯೂಸ್ ಸಿದ್ದಾಪುರ:

ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ 2026ರ ಫೆಬ್ರವರಿ 3ರಂದು ನಡೆದ ಬಹುಚರ್ಚಿತ ವಸಂತ ನಾಯ್ಕ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ ಆರೋಪಿಗಳ ಜಾಮೀನು ಅರ್ಜಿಯನ್ನು ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸ್ಪಷ್ಟವಾಗಿ ತಿರಸ್ಕರಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಹೇಮಲತಾ ಹುಲ್ಲೂರ್ ಅವರು ಪ್ರಕರಣದ ಗಂಭೀರತೆ, ತನಿಖೆಯಲ್ಲಿ ಲಭ್ಯವಾಗಿರುವ ದಾಖಲೆಗಳು ಹಾಗೂ ಸರ್ಕಾರದ ಪರ ಮಂಡಿಸಲಾದ ವಾದಗಳನ್ನು ಪರಿಗಣಿಸಿ ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಗಳಾದ ಸುಚಿತ್ರ ಲೋಕನಾಥ ನಾಯ್ಕ, ಕಮಲಾಕರ ವೆಂಕಟರಮಣ ಹೆಗಡೆ (ಭಟ್), ಆಕಾಶ ಎಂ. ಮಲ್ಲಿಕಾರ್ಜುನ, ಈರ್ಫಾನ್ ಅಮಾನುಲ್ಲಾ, ಮಹಮ್ಮದ್ ಅಮೀರ್ ಜಾನ್ ಫೂಜಲ್ ಹಾಗೂ ಮಹಮ್ಮದ್ ಮೆಹಫೂಜ್ ಅಬ್ದುಲ್ ರಶೀದ್ ಅವರು ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯವು ಎಲ್ಲರ ಅರ್ಜಿಗಳನ್ನೂ ತಿರಸ್ಕರಿಸಿದೆ.

ಗಮನಾರ್ಹ ಸಂಗತಿಯೆಂದರೆ, ಈ ಪ್ರಕರಣದಲ್ಲಿ ಪೊಲೀಸ್ ತನಿಖೆ ಪೂರ್ಣಗೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸುವ ಮುನ್ನವೇ ಕೆಲ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳು ಸಹ ತಿರಸ್ಕೃತವಾಗಿದ್ದವು. ಇದೀಗ ತನಿಖೆ ಪೂರ್ಣಗೊಂಡು ದೋಷಾರೋಪಣಾ ಪಟ್ಟಿ ಸಲ್ಲಿಕೆಯಾದ ಬಳಿಕ ಮತ್ತೊಮ್ಮೆ ಎಲ್ಲಾ ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರೂ, ನ್ಯಾಯಾಲಯ ಮತ್ತೊಮ್ಮೆ ಜಾಮೀನು ನಿರಾಕರಿಸಿರುವುದು ಪ್ರಕರಣದ ಗಂಭೀರತೆಯನ್ನು ಪ್ರತಿಬಿಂಬಿಸುತ್ತದೆ.

ಪ್ರಕರಣದಲ್ಲಿ ಸರ್ಕಾರದ ಪರ ಸರಕಾರಿ ಅಭಿಯೋಜಕರಾದ ರಾಜೇಶ ಮಳಗಿಕರ್ ಅವರು ಸಮರ್ಥವಾಗಿ ವಾದ ಮಂಡಿಸಿದರು. ಆರೋಪಿಗಳಿಗೆ ಜಾಮೀನು ನೀಡಿದಲ್ಲಿ ಸಾಕ್ಷ್ಯಾಧಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಾಗೂ ಪ್ರಕರಣದ ಗಂಭೀರತೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು ಎನ್ನಲಾಗಿದೆ.

ಇದೇ ವೇಳೆ, ಪ್ರಕರಣದ ತನಿಖೆ ನಡೆಸಿದ ಡಿವೈಎಸ್‌ಪಿ ಶ್ರೀಮತಿ ಗೀತಾ ಪಾಟಿಲ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ಮೂಲಕ ಮಹತ್ವದ ಆದೇಶ ಹೊರಡಿಸಿದೆ.

ಈ ಆದೇಶದೊಂದಿಗೆ ವಸಂತ ನಾಯ್ಕ ಕೊಲೆ ಪ್ರಕರಣದ ಎಲ್ಲಾ ಪ್ರಮುಖ ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲೇ ಮುಂದುವರಿಯಲಿದ್ದು, ಪ್ರಕರಣದ ಮುಂದಿನ ನ್ಯಾಯಾಂಗ ವಿಚಾರಣೆಯತ್ತ ಎಲ್ಲರ ಗಮನ ನೆಟ್ಟಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0