ಪಶ್ಚಿಮ ಘಟ್ಟ ಸಂರಕ್ಷಣೆಗೆ ಚಾತುರ್ಮಾಸ್ಯದ ಮೂಲಕ ಮಹಾಸಂಕಲ್ಪ

ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರಿಂದ ಐತಿಹಾಸಿಕ ಘೋಷಣೆ – ಪರಿಸರ ಜಾಗೃತಿಗೆ ವಾರವಾರ ವಿಚಾರ ಸಂಕಿರಣ

Jul 30, 2026 - 19:12
 0  135
ಪಶ್ಚಿಮ ಘಟ್ಟ ಸಂರಕ್ಷಣೆಗೆ ಚಾತುರ್ಮಾಸ್ಯದ ಮೂಲಕ ಮಹಾಸಂಕಲ್ಪ

ಆಪ್ತ ನ್ಯೂಸ್‌ ಬಂಗಾರಮಕ್ಕಿ, ಗೇರುಸೊಪ್ಪಾ:

ಪರಿಸರ ಸಂರಕ್ಷಣೆ, ಆಧ್ಯಾತ್ಮಿಕತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಅಪರೂಪದ ಸಂಕಲ್ಪಕ್ಕೆ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಚಾಲನೆ ದೊರೆತಿದ್ದು, ಈ ವರ್ಷದ ಚಾತುರ್ಮಾಸ್ಯವನ್ನು "ಪಶ್ಚಿಮ ಘಟ್ಟ ಸಂರಕ್ಷಣಾ ಚಾತುರ್ಮಾಸ್ಯ" ಎಂದು ವಿಶೇಷವಾಗಿ ಆಚರಿಸುವ ಐತಿಹಾಸಿಕ ನಿರ್ಧಾರವನ್ನು ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು ಘೋಷಿಸಿದರು.

ಭಕ್ತಿಭಾವ, ಪರಿಸರ ಕಾಳಜಿ ಹಾಗೂ ಸಾಮಾಜಿಕ ಜಾಗೃತಿಯ ಸಂದೇಶದೊಂದಿಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಗಣ್ಯರು, ಪರಿಸರ ಪ್ರೇಮಿಗಳು, ಭಕ್ತರು ಹಾಗೂ ಸಂತರು ಭಾಗವಹಿಸಿ ಈ ವಿಶಿಷ್ಟ ಸಂಕಲ್ಪಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು, ಪ್ರಕೃತಿ ನಮ್ಮ ಪೂರ್ವಜರಿಂದ ಬಂದ ಆಸ್ತಿ ಅಲ್ಲ; ಮುಂದಿನ ಪೀಳಿಗೆಯಿಂದ ಪಡೆದ ಹೊಣೆಗಾರಿಕೆ ಎಂಬ ಸಂದೇಶವನ್ನು ಸಾರಿದರು. ಕಾಡು, ನದಿ, ಬೆಟ್ಟ ಹಾಗೂ ಜೀವ ವೈವಿಧ್ಯತೆಯನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ನಾಶವನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ವಿಶ್ವದ ಅನೇಕ ರಾಷ್ಟ್ರಗಳು ಪರಿಸರ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡುತ್ತಿರುವ ಈ ಸಂದರ್ಭದಲ್ಲಿ, ನಮ್ಮ ದೇಶದಲ್ಲಿ 38 ವಿನಾಶಕಾರಿ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಪ್ರಶ್ನಿಸಿದ ಗುರೂಜಿಯವರು, ಪಶ್ಚಿಮ ಘಟ್ಟದಂತಹ ವಿಶ್ವಪ್ರಸಿದ್ಧ ಜೀವವೈವಿಧ್ಯ ಪ್ರದೇಶಗಳನ್ನು ಉಳಿಸುವ ನಿಟ್ಟಿನಲ್ಲಿ ಜನಜಾಗೃತಿ ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಚಾತುರ್ಮಾಸ್ಯದ ನಾಲ್ಕು ತಿಂಗಳ ಅವಧಿಯಲ್ಲಿ ಪ್ರತಿವಾರ ಪರಿಸರ ಸಂರಕ್ಷಣೆಯ ಕುರಿತಂತೆ ಪತ್ರಕರ್ತರು, ವಿಜ್ಞಾನಿಗಳು, ಪರಿಸರ ತಜ್ಞರು, ಪರಿಸರ ಹೋರಾಟಗಾರರು, ಚಿಂತಕರು ಹಾಗೂ ನೂರಾರು ಸಂತರು ಭಾಗವಹಿಸುವ ವಿಚಾರ ಸಂಕಿರಣ, ಸಂವಾದ, ಚರ್ಚೆ ಹಾಗೂ ಜ್ಞಾನಯಜ್ಞಗಳನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು. ಈ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಪರಿಸರದ ಕುರಿತು ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದರು.

ವ್ಯಾಸ ಪೂರ್ಣಿಮೆಯ ಮಹತ್ವವನ್ನು ವಿವರಿಸಿದ ಗುರೂಜಿಯವರು, ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆಯನ್ನು ನೆನಪಿಸಿದರು. ತಾಯಿ-ತಂದೆಯಿಂದ ಆರಂಭವಾಗಿ ಗುರುಗಳು, ಸಾಧು-ಸಂತರು ಹಾಗೂ ಸಮಾಜದ ಮಹನೀಯರು ಜೀವನಕ್ಕೆ ದಾರಿದೀಪವಾಗುತ್ತಾರೆ. ಜ್ಞಾನವೇ ಮಾನವನ ಬದುಕಿಗೆ ಬೆಳಕು ನೀಡುವ ಶಕ್ತಿ. ಪ್ರತಿಯೊಬ್ಬರೂ ಜ್ಞಾನಪಿಪಾಸುಗಳಾಗಿ ಬದುಕನ್ನು ಸಾರ್ಥಕಗೊಳಿಸಬೇಕು ಎಂದು ಕರೆ ನೀಡಿದರು.

ದೆಹಲಿಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಸಹಾಧ್ಯಕ್ಷರಾದ ಅಶೋಕ ಕುಮಾರ ಸಿಂಗ್ ಮಾತನಾಡಿ, ಭಕ್ತಿ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ಒಂದೇ ವೇದಿಕೆಯಲ್ಲಿ ಜನರಿಗೆ ತಲುಪಿಸುತ್ತಿರುವ ಪರಮ ಪೂಜ್ಯ ಮಾರುತಿ ಗುರೂಜಿಯವರ ಕಾರ್ಯ ದೇಶಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಹಿಮಾಲಯ ಕನ್ಸ್ಟ್ರಕ್ಷನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆನಂದ ಅನು ಸಿಂಗ್ ಮಾತನಾಡಿ, ಆಧ್ಯಾತ್ಮಿಕತೆಯೊಂದಿಗೆ ಪರಿಸರ ಕಾಳಜಿಯನ್ನು ಜನಾಂದೋಲನವಾಗಿ ರೂಪಿಸುವ ಗುರೂಜಿಯವರ ಚಿಂತನೆ ಅನುಕರಣೀಯವಾಗಿದ್ದು, ಇಂತಹ ಕಾರ್ಯಗಳು ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ನೀಡಲಿವೆ ಎಂದರು.

ಉಡುಪಿ ವೈಟ್ ಲೋಟಸ್ ಹೋಟೆಲ್ನ ಸಿ.ಎಂ.ಡಿ. ಅಜಯ ಪುರುಷೋತ್ತಮ ಶೆಟ್ಟಿ ಮಾತನಾಡಿ, ಪಶ್ಚಿಮ ಘಟ್ಟ ಸಂರಕ್ಷಣಾ ಚಾತುರ್ಮಾಸ್ಯದ ಮೂಲಕ ಪರಿಸರ ಜಾಗೃತಿ ಮತ್ತು ಜ್ಞಾನಯಜ್ಞವನ್ನು ಸಮಾಜದ ಮೂಲೆಮೂಲೆಗೂ ತಲುಪಿಸುವ ಗುರೂಜಿಯವರ ಸಂಕಲ್ಪ ಅತ್ಯಂತ ಶ್ಲಾಘನೀಯವಾಗಿದೆ. ಪ್ರತಿಯೊಬ್ಬರೂ ಈ ಮಹತ್ಕಾರ್ಯದಲ್ಲಿ ಕೈಜೋಡಿಸಿ ಪ್ರಕೃತಿಯನ್ನು ಉಳಿಸುವ ಜವಾಬ್ದಾರಿ ವಹಿಸಬೇಕು ಎಂದು ಕರೆ ನೀಡಿದರು.

ವಿಶ್ರಾಂತ ಪ್ರಾಚಾರ್ಯ ವಿ.ಜಿ. ಹೆಗಡೆ ಗುಡ್ಗೆ ಮಾತನಾಡಿ, ವ್ರತಾಚರಣೆ ಯತಿಗಳಿಗೆ ಮಾತ್ರ ಸೀಮಿತವಲ್ಲ; ಸಾಮಾನ್ಯ ಜನರೂ ಶಿಸ್ತು, ಮೌಲ್ಯ ಹಾಗೂ ಆತ್ಮಸಾಕ್ಷಾತ್ಕಾರದ ಬದುಕಿಗಾಗಿ ವ್ರತಾಚರಣೆ ಮಾಡಬಹುದು. ಪರಿಸರ ಸಂರಕ್ಷಣೆಯನ್ನು ಧರ್ಮದ ಭಾಗವಾಗಿ ಸ್ವೀಕರಿಸಿ ಎಲ್ಲರೂ ಪಶ್ಚಿಮ ಘಟ್ಟ ರಕ್ಷಣೆಗೆ ಕಟಿಬದ್ಧರಾಗಬೇಕು ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ವಿಶ್ವನಾಥ ನಾಯಕ, ಮಂಜುನಾಥ ಹೆಗಡೆ ಹಾಗೂ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷೆ ಸುನೀತಾ ಹೆಗಡೆ ಮಾತನಾಡಿ, ಪೂಜ್ಯ ಮಾರುತಿ ಗುರೂಜಿಯವರ ಪರಿಸರ ಕಾಳಜಿ, ದೂರದೃಷ್ಟಿಯ ಚಿಂತನೆ ಹಾಗೂ ಸಮಾಜಮುಖಿ ಸೇವಾ ಮನೋಭಾವ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶ್ರೀ ಜಿ.ಟಿ. ಹೆಗಡೆ ಸ್ವಾಗತಿಸಿದರು. ಶ್ರೀ ಮಂಜುನಾಥ ಗೌಡ ವಂದನಾರ್ಪಣೆ ಸಲ್ಲಿಸಿದರು. ಶ್ರೀ ಶೈಲೇಶ್ ಕುಮಟಾ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಚಾತುರ್ಮಾಸ್ಯ ಕೇವಲ ಧಾರ್ಮಿಕ ಆಚರಣೆಯಾಗದೆ, ಪಶ್ಚಿಮ ಘಟ್ಟ ಸಂರಕ್ಷಣೆ, ಪರಿಸರ ಜಾಗೃತಿ, ಜ್ಞಾನ ಪ್ರಸಾರ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಒಗ್ಗೂಡಿಸುವ ಜನಾಂದೋಲನವಾಗಿ ರೂಪುಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0