ಬೇಡ್ತಿ ತಟದಲ್ಲಿ ಹೆಲಿಕಾಪ್ಟರ್ ಹಾರಾಟ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಆಪ್ತ ನ್ಯೂಸ್ ಯಲ್ಲಾಪುರ:
ಬೇಡ್ತಿ–ವರದಾ ನದಿ ತಿರುವು ಯೋಜನೆ ವಿರುದ್ಧ ಜನಾಂದೋಲನ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಯೋಜನಾ ಪ್ರದೇಶದ ಸಮೀಪ ಹೆಲಿಕಾಪ್ಟರ್ ಹಾರಾಟ ನಡೆಸಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಆಗಸ್ಟ್ 31ರಂದು ಮಧ್ಯಾಹ್ನ ಬೇಡ್ತಿ ತಟದ ಪ್ರದೇಶದಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸಿದ್ದು, ಮಾಗೋಡು ಜಲಪಾತದ ಮೇಲ್ಭಾಗದಲ್ಲಿ ಕೆಲಕಾಲ ಸತತವಾಗಿ ಹಾರಾಟ ನಡೆಸಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಬೆಳಗ್ಗೆ ಸುಮಾರು 11.45ರ ವೇಳೆಯಲ್ಲೂ ಈ ಪ್ರದೇಶದಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸಿದೆ ಎನ್ನಲಾಗಿದೆ.
ಬೇಡ್ತಿ–ವರದಾ ನದಿ ತಿರುವು ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಕಂದಾಯ ಸೇರಿದಂತೆ ವಿವಿಧ ಹಂತಗಳಲ್ಲಿ ಹೋರಾಟ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಯೋಜನಾ ಪ್ರದೇಶದ ಮೇಲೆ ಹೆಲಿಕಾಪ್ಟರ್ ಹಾರಾಟ ನಡೆಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಡ್ರೋನ್ ಸರ್ವೆಗೆ ಸ್ಥಳೀಯರ ವಿರೋಧ
ಇತ್ತೀಚೆಗಷ್ಟೇ ಯೋಜನಾ ಪ್ರದೇಶದಲ್ಲಿ ಡ್ರೋನ್ ಮೂಲಕ ಸರ್ವೆ ನಡೆಸುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಡ್ರೋನ್ ಹಾರಾಟದಿಂದ ವನ್ಯಜೀವಿಗಳಿಗೆ ತೊಂದರೆಯಾಗುವ ಸಾಧ್ಯತೆಯಿದ್ದು, ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದಿದ್ದರು.
ಆಗಸ್ಟ್ 11ರಂದು ಯೋಜನಾ ಪ್ರದೇಶದ ಸಮೀಪ ನೂರಾರು ಮರಗಳನ್ನು ಕಡಿದು ಸರ್ವೆ ನಡೆಸಲು ಡ್ರೋನ್ ಬಳಕೆ ಮಾಡಲಾಗಿದೆ ಎಂಬ ಆರೋಪವೂ ಸ್ಥಳೀಯರಿಂದ ಕೇಳಿಬಂದಿತ್ತು.
ಡ್ರೋನ್ ಸರ್ವೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇದೀಗ ಹೆಲಿಕಾಪ್ಟರ್ ಮೂಲಕ ಪ್ರದೇಶದ ಚಿತ್ರಣ ಅಥವಾ ಮಾಹಿತಿ ಸಂಗ್ರಹಿಸುವ ಪ್ರಯತ್ನ ನಡೆದಿದೆಯೇ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿದೆ. ಆದರೆ, ಹೆಲಿಕಾಪ್ಟರ್ ಹಾರಾಟದ ಉದ್ದೇಶವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.
ಸ್ಪಷ್ಟನೆಗೆ ಆಗ್ರಹ
ಬೇಡ್ತಿ ಕಣಿವೆ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶದ ಪರಿಸರ ಸೂಕ್ಷ್ಮತೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಸರ್ವೆ ಅಥವಾ ವೈಮಾನಿಕ ಚಟುವಟಿಕೆ ನಡೆಸುವುದಾದರೆ ಸ್ಥಳೀಯರಿಗೆ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹೆಲಿಕಾಪ್ಟರ್ ಹಾರಾಟಕ್ಕೆ ಸಂಬಂಧಿಸಿದಂತೆ ಯಾವ ಸಂಸ್ಥೆ ಅಥವಾ ಇಲಾಖೆಯಿಂದ ಅನುಮತಿ ಪಡೆಯಲಾಗಿತ್ತು? ಹಾರಾಟದ ಉದ್ದೇಶವೇನು? ಯೋಜನಾ ಪ್ರದೇಶದ ಸಮೀಕ್ಷೆ ನಡೆಸಲಾಗುತ್ತಿತ್ತೇ? ಎಂಬ ಪ್ರಶ್ನೆಗಳು ಇದೀಗ ಮುನ್ನೆಲೆಗೆ ಬಂದಿವೆ.
ನದಿ ತಿರುವು ಯೋಜನೆ ವಿರುದ್ಧ ಹೋರಾಟ ತೀವ್ರಗೊಂಡಿರುವ ಸಂದರ್ಭದಲ್ಲೇ ನಡೆದಿರುವ ಈ ಹೆಲಿಕಾಪ್ಟರ್ ಹಾರಾಟ, ಬೇಡ್ತಿ ಕಣಿವೆಯಲ್ಲಿ ಹೊಸ ಚರ್ಚೆ ಹಾಗೂ ಆತಂಕಕ್ಕೆ ಕಾರಣವಾಗಿದೆ.
What's Your Reaction?
Like
0
Dislike
1
Love
0
Funny
0
Angry
0
Sad
0
Wow
0