ಪಿಎಸ್ಐ ಹುದ್ದೆಗೆ ಕಿತ್ತಾಟ? ಮೂವರು ಅಧಿಕಾರಿಗಳದ್ದು ಎನ್ನಲಾದ ಆಡಿಯೋ ವೈರಲ್!
ಹಳಿಯಾಳ ಪೊಲೀಸ್ ಠಾಣೆಯ ‘ಮಾಸಿಕ ಕಮಾಯಿ’ ಬಗ್ಗೆ ಚರ್ಚೆ ಆರೋಪ | ಆಡಿಯೋ ಅಸಲಿಯತ್ತಿನ ಬಗ್ಗೆ ತನಿಖೆ
ಆಪ್ತ ನ್ಯೂಸ್ ಹಳಿಯಾಳ:
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಹುದ್ದೆಯನ್ನು ಕೇಂದ್ರವಾಗಿಟ್ಟುಕೊಂಡು ಮೂವರು ಪೊಲೀಸ್ ಅಧಿಕಾರಿಗಳು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಇಲಾಖೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಆಡಿಯೋವನ್ನು ಜೆಡಿಎಸ್ ಪಕ್ಷ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡು ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದೆ. ಇದರ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲೂ ಮುಜುಗರದ ಪರಿಸ್ಥಿತಿ ನಿರ್ಮಾಣವಾಗಿದೆ.
ಆಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ಆಡಿಯೋದಲ್ಲಿ ಪಿಎಸ್ಐ ಕೃಷ್ಣ ಅರಗೇರಿ, ಈ ಹಿಂದೆ ಹಳಿಯಾಳ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪಿಎಸ್ಐ ವಿನೋದ ರೆಡ್ಡಿ ಹಾಗೂ ಪಿಎಸ್ಐ ಕಿರಣ ಪಾಟೀಲ್ ಅವರದ್ದು ಎನ್ನಲಾದ ಧ್ವನಿಗಳು ಕೇಳಿಬರುತ್ತವೆ.
ರೌಡಿಶೀಟರ್‌ವೊಬ್ಬನ ಅರ್ಧ ಹೆಸರನ್ನು ಉಲ್ಲೇಖಿಸುವ ಸಂದರ್ಭದಲ್ಲಿ ತಮಗೆ ₹1.50 ಲಕ್ಷ ಬಾಕಿ ಉಳಿಸಿಕೊಂಡು ಮೋಸ ಮಾಡಿದ್ದಾನೆ ಎಂದು ಕೃಷ್ಣ ಅರಗೇರಿ ಅವರು ನೋವು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಹಳಿಯಾಳ ಠಾಣೆಗೆ ಬರುವ ‘ಮಾಸಿಕ ಕಮಾಯಿ’, ಯಾವ ಅಧಿಕಾರಿ ಠಾಣೆಗೆ ಬಂದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ, ಅಧಿಕಾರಿಗಳನ್ನು ಒಲಿಸಿಕೊಳ್ಳುವ ಕುರಿತು ಮಾತುಕತೆ ಸೇರಿದಂತೆ ಹಲವು ವಿಚಾರಗಳು ಆಡಿಯೋದಲ್ಲಿವೆ ಎನ್ನಲಾಗುತ್ತಿದೆ.
ಅದರಲ್ಲೂ ‘ಡಿವೈಎಸ್ಪಿಗೆ ಮಸ್ಕಾ ಹೊಡೆದು ದುಡ್ಡು ಕೊಟ್ಟು ಬರುತ್ತೇನೆ’ ಎಂದು ಕಿರಣ ಪಾಟೀಲ್ ಹೇಳಿದ್ದು ಎನ್ನಲಾದ ಮಾತು ಹಾಗೂ ಅದಕ್ಕೆ ‘ಅವರಿಗೆ ಅಂತಹ ಆಸೆ ಇಲ್ಲ’ ಎಂದು ಕೃಷ್ಣ ಅರಗೇರಿ ಉತ್ತರಿಸಿರುವುದು ಎನ್ನಲಾದ ಸಂಭಾಷಣೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹುದ್ದೆಗಾಗಿ ಅಧಿಕಾರಿಗಳ ನಡುವೆ ಪೈಪೋಟಿ?
ಹಳಿಯಾಳ ಠಾಣೆಯಲ್ಲಿ ಈ ಹಿಂದೆ ಕರ್ತವ್ಯದಲ್ಲಿದ್ದ ಪಿಎಸ್ಐ ಬಸವರಾಜ ಮಬನೂರು ಅವರು ಪೊಲೀಸರ ಮೇಲೆ ರೌಡಿಯೊಬ್ಬ ಹಲ್ಲೆ ನಡೆಸಿದ ಸಂದರ್ಭದಲ್ಲಿ ತುರ್ತು ಕ್ರಮ ಕೈಗೊಳ್ಳುವಲ್ಲಿ ವಿಫಲರಾದ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದರು ಎನ್ನಲಾಗಿದೆ.
ಅವರ ಸ್ಥಾನಕ್ಕೆ ಹೊಸ ಪಿಎಸ್ಐ ನೇಮಕವಾಗುವ ಸಂದರ್ಭದಲ್ಲಿ ಅಧಿಕಾರಿಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಇದೇ ವಿಚಾರವೂ ವೈರಲ್ ಆಡಿಯೋದಲ್ಲಿ ಪ್ರಸ್ತಾಪವಾಗಿರುವಂತೆ ಕಂಡುಬರುತ್ತಿದೆ.
ಇನ್ನು ವಿನೋದ ರೆಡ್ಡಿ ಅವರಿಗೆ ಹುದ್ದೆ ಸಿಗದ ಹಿನ್ನೆಲೆಯಲ್ಲಿ ಅವರು ನಿರಾಸೆಯಿಂದ ಮಾತನಾಡಿದಂತೆ ಕೇಳಿಬರುವ ಸಂಭಾಷಣೆಯೂ ಆಡಿಯೋದಲ್ಲಿದೆ ಎನ್ನಲಾಗಿದೆ. ಪರಿಚಯಸ್ಥ ವೈದ್ಯರಿಂದ ಮೆಡಿಕಲ್ ಸರ್ಟಿಫಿಕೇಟ್ ಪಡೆದು ರಜೆ ಮಾಡುವ ಕುರಿತ ಮಾತುಕತೆಯೂ ದಾಖಲಾಗಿದೆ ಎಂದು ಹೇಳಲಾಗುತ್ತಿದೆ.
ಇದು ನಿಜವಾದ ಆಡಿಯೋ? AI ಸೃಷ್ಟಿಯೇ?
ಆಡಿಯೋದಲ್ಲಿ ಕೆಲವೆಡೆ ಆಕ್ಷೇಪಾರ್ಹ ಪದಬಳಕೆ ಕಂಡುಬಂದಿದ್ದು, ಧ್ವನಿಮುದ್ರಿಕೆಯನ್ನು ಅಲ್ಲಲ್ಲಿ ಎಡಿಟ್ ಮಾಡಿರುವ ಅನುಮಾನವೂ ವ್ಯಕ್ತವಾಗಿದೆ. ಹೀಗಾಗಿ ಇದು ನಿಜವಾಗಿಯೂ ಸಂಬಂಧಪಟ್ಟ ಅಧಿಕಾರಿಗಳ ಧ್ವನಿಯೇ ಅಥವಾ AI ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ನಕಲಿ ಆಡಿಯೋವೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.
ಆಡಿಯೋವನ್ನು ಯಾರು ರೆಕಾರ್ಡ್ ಮಾಡಿದ್ದಾರೆ? ಯಾರು ಎಡಿಟ್ ಮಾಡಿದ್ದಾರೆ? ಸಾಮಾಜಿಕ ಜಾಲತಾಣಗಳಲ್ಲಿ ಯಾರು ಮೊದಲು ಹರಿಬಿಟ್ಟರು? ಸಂಭಾಷಣೆ ನೈಜವೇ ಅಥವಾ ಕೃತಕವಾಗಿ ಸೃಷ್ಟಿಸಲಾಗಿದೆಯೇ? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಇನ್ನಷ್ಟೇ ಸಿಗಬೇಕಿದೆ.
ವೈರಲ್ ಆಡಿಯೋದ ಅಸಲಿಯತ್ತನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆ ತನಿಖೆ ಕೈಗೆತ್ತಿಕೊಂಡಿದೆ ಎನ್ನಲಾಗಿದ್ದು, ತನಿಖೆಯ ಬಳಿಕವೇ ಆಡಿಯೋದ ನೈಜತೆ ಹಾಗೂ ಅದರಲ್ಲಿರುವ ಆರೋಪಗಳ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ. ಸದ್ಯಕ್ಕೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋದಲ್ಲಿನ ಆರೋಪಗಳು ದೃಢಪಟ್ಟಿಲ್ಲ ಎಂಬುದನ್ನು ಗಮನಿಸುವುದು ಅಗತ್ಯ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0