ರಾಮಕೃಷ್ಣ ಹೆಗಡೆ ಅವರಂಥ ತತ್ವನಿಷ್ಠ ನಾಯಕರು ಮತ್ತೆ ತಯಾರಾಗಬೇಕು: ವಿ.ಎನ್. ಭಾಗ್ವತ

ಶಿರಸಿಯಲ್ಲಿ ಅಭಿಮಾನ ಸಾಂಸ್ಕೃತಿಕ ವೇದಿಕೆಯಿಂದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಆಚರಣೆ

Aug 30, 2026 - 09:35
 0  29
ರಾಮಕೃಷ್ಣ ಹೆಗಡೆ ಅವರಂಥ ತತ್ವನಿಷ್ಠ ನಾಯಕರು ಮತ್ತೆ ತಯಾರಾಗಬೇಕು: ವಿ.ಎನ್. ಭಾಗ್ವತ

ಆಪ್ತ ನ್ಯೂಸ್ ಶಿರಸಿ:

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ನಾಯಕ ಹಾಗೂ ತತ್ವನಿಷ್ಠ ರಾಜಕಾರಣಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವವನ್ನು ಶಿರಸಿಯ ಅಭಿಮಾನ ಸಾಂಸ್ಕೃತಿಕ ವೇದಿಕೆ ವತಿಯಿಂದ ಯೋಗಮಂದಿರದಲ್ಲಿ ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ವಿ.ಎನ್. ಭಾಗ್ವತ ಬರಬಳ್ಳಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಮಕೃಷ್ಣ ಹೆಗಡೆಯವರೊಂದಿಗಿನ ತಮ್ಮ ಅಭಿಮಾನ ಮತ್ತು ಶತಮಾನೋತ್ಸವ ಆಚರಣೆಯ ಹಿಂದಿನ ಉದ್ದೇಶವನ್ನು ಹಂಚಿಕೊಂಡರು.

“1990ರಲ್ಲಿ ಒಂದು ಪತ್ರಿಕೆಯಲ್ಲಿ ‘ರಾಮಕೃಷ್ಣ ಹೆಗಡೆಯವರು ಮೊರಾರ್ಜಿ ದೇಸಾಯಿ ಅವರ ಬದಲು ಪ್ರಧಾನಿಯಾಗಿದ್ದರೆ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸುತ್ತಿತ್ತು’ ಎಂಬ ಅಭಿಪ್ರಾಯವನ್ನು ಓದಿದ್ದೆ. ಆ ಸಂದರ್ಭದಲ್ಲಿಯೇ ಹೆಗಡೆಯವರ ಜನ್ಮದಿನವನ್ನು ಆಚರಿಸಬೇಕು ಎಂಬ ನಿರ್ಧಾರ ಕೈಗೊಂಡೆ. ಅಂದಿನಿಂದ ಇಂದಿನವರೆಗೂ ಅಭಿಮಾನಿಗಳ ಸಹಕಾರದಿಂದ ಈ ಕಾರ್ಯಕ್ರಮ ಮುಂದುವರಿಯುತ್ತಿದೆ” ಎಂದು ಅವರು ಹೇಳಿದರು.

ಹೆಗಡೆಯವರ ಆಡಳಿತದ ಅವಧಿಯಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ಗೌರವ ಮತ್ತು ಉತ್ತಮ ಸಂಬಂಧಗಳ ವಾತಾವರಣವಿತ್ತು. ಇಂದಿನ ರಾಜಕೀಯದಲ್ಲಿ ಅಂತಹ ವಾತಾವರಣ ಕಾಣಿಸದಿರುವುದು ವಿಷಾದನೀಯ ಎಂದ ಅವರು, “ಹೆಗಡೆಯವರ ಪ್ರಭಾವಳಿಯೇ ಅಂತಹದ್ದು. ಅವರಂಥ ತತ್ವನಿಷ್ಠ ಹಾಗೂ ಮೌಲ್ಯಾಧಾರಿತ ರಾಜಕಾರಣಿಗಳು ಮತ್ತೆ ತಯಾರಾಗಬೇಕು” ಎಂದು ಆಶಿಸಿದರು.

ಜನರನ್ನು ಮೆಚ್ಚಿಸಲು ಅಲ್ಲ, ಜನರಿಗಾಗಿ ಕೆಲಸ ಮಾಡಿದ್ದ ನಾಯಕ

ಕಾರ್ಯಕ್ರಮದಲ್ಲಿ ‘ಸಮಾಜಮುಖಿ–ಭಾಗ 2’ ಕೃತಿಯನ್ನು ಕೆ.ಎನ್. ಹೊಸ್ಮನಿ ಅವರು ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು ರಾಮಕೃಷ್ಣ ಹೆಗಡೆಯವರ ರಾಜಕೀಯ ಜೀವನ, ವ್ಯಕ್ತಿತ್ವ ಹಾಗೂ ಆಡಳಿತದ ಹಲವು ಆಯಾಮಗಳನ್ನು ಸ್ಮರಿಸಿದರು.

ಹೆಗಡೆಯವರ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ವಿನೋಬಾ ಭಾವೆಯವರ ಪ್ರಭಾವ ಮಹತ್ವದ್ದಾಗಿತ್ತು ಎಂದು ಅವರು ವಿವರಿಸಿದರು. ಹೆಗಡೆಯವರು ಮಾತನಾಡುತ್ತಿದ್ದಾಗ ಅವರ ವಿರೋಧಿಗಳೂ ಸಹ ತಲೆಯಾಡಿಸುವಂತಹ ವ್ಯಕ್ತಿತ್ವ ಅವರದ್ದಾಗಿತ್ತು. ಜನರ ಮೆಚ್ಚುಗೆಗಾಗಿ ಸೇವೆ ಮಾಡುವ ಬದಲು ನಿಜವಾದ ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಿದ್ದರು ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಹೆಗಡೆಯವರು “ಶುದ್ಧಹಸ್ತ” ರಾಜಕಾರಣದ ಉದಾಹರಣೆಯಾಗಿದ್ದರು. ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ ಅವರು, ಅರ್ಹತೆ ಮತ್ತು ನ್ಯಾಯದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ದೊರೆಯುವ ವ್ಯವಸ್ಥೆಗೆ ಒತ್ತು ನೀಡಿದ್ದರು ಎಂದು ಉದಾಹರಣೆಗಳೊಂದಿಗೆ ವಿವರಿಸಲಾಯಿತು.

‘ಬಾವಲಿ ಮತ್ತು ಇತರ ಕತೆಗಳು’ ಲೋಕಾರ್ಪಣೆ

ವಿ.ಎನ್. ಭಾಗ್ವತ ಅವರ ‘ಬಾವಲಿ ಮತ್ತು ಇತರ ಕತೆಗಳು’ ಕೃತಿಯನ್ನು ನಿವೃತ್ತ ಪ್ರಾಂಶುಪಾಲ ಆರ್.ಡಿ. ಹೆಗಡೆ ಆಲ್ಮನೆ ಅವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆಯವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಸಂದರ್ಭವನ್ನು ಸ್ಮರಿಸಿದರು. “ಅವರು ರಾಜೀನಾಮೆ ನೀಡಿದಾಗ ಜನರು ಪ್ರತಿಭಟನೆ ನಡೆಸಲಿಲ್ಲ. ರಾಜೀನಾಮೆ ನೀಡದಂತೆ ಒತ್ತಾಯಿಸಬೇಕಿತ್ತು” ಎಂದು ಅಭಿಪ್ರಾಯಪಟ್ಟರು.

‘ಬಾವಲಿ ಮತ್ತು ಇತರ ಕತೆಗಳು’ ಮಕ್ಕಳಿಗೆ ಪಾಲಕರು ಓದಿ ಹೇಳಬೇಕಾದ ಕೃತಿ ಎಂದು ಬಣ್ಣಿಸಿದ ಅವರು, ಕಥೆಗಳಲ್ಲಿ ಹೊಡೆದಾಟ, ಬಡಿದಾಟ ಅಥವಾ ಅನಗತ್ಯ ಕೂಗಾಟಗಳಿಲ್ಲ. ಬದಲಿಗೆ ನೈತಿಕ ಮೌಲ್ಯಗಳನ್ನು ಸರಳವಾಗಿ ಹೇಳುವ ಕಥೆಗಳಿವೆ. ಲೇಖಕರು ಹೇಳಬೇಕಾದುದನ್ನು ನೇರವಾಗಿ ಹೇಳಿದ್ದಾರೆ. ಆದ್ದರಿಂದ ಇದು ಓದಲೇಬೇಕಾದ ಪುಸ್ತಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉತ್ತರ ಕನ್ನಡಕ್ಕೆ ಹೆಗಡೆಯವರ ಕೊಡುಗೆ ಅಪಾರ

ಹಿರಿಯ ವಕೀಲ ಆರ್.ಜಿ. ಹೆಗಡೆ ಕೇರಿಮನೆ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಗೆ ರಾಮಕೃಷ್ಣ ಹೆಗಡೆಯವರು ನೀಡಿದ ಕೊಡುಗೆಯನ್ನು ಸ್ಮರಿಸಿದರು.

“ಹೆಗಡೆಯವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಂಜೂರಾದ ಅನೇಕ ಅಭಿವೃದ್ಧಿ ಕಾಮಗಾರಿಗಳು ಇಂದಿಗೂ ನಡೆಯುತ್ತಿವೆ. ಆದರೆ ಉತ್ತರ ಕನ್ನಡದ ಜನರು ಹೆಗಡೆಯವರಿಗೆ ನೀಡಬೇಕಾದಷ್ಟು ಬೆಂಬಲ ನೀಡಲಿಲ್ಲ” ಎಂದು ಅವರು ವಿಷಾದಿಸಿದರು.

ತಮ್ಮ ತಂದೆ ಹಾಗೂ ರಾಮಕೃಷ್ಣ ಹೆಗಡೆಯವರ ನಡುವಿನ ಉತ್ತಮ ಬಾಂಧವ್ಯವನ್ನು ನೆನಪಿಸಿಕೊಂಡ ಅವರು, ಅತ್ಯಂತ ಬಡತನದಿಂದ ಮೇಲೆದ್ದು ಬಂದ ಹೆಗಡೆಯವರನ್ನು ಅವರಿಂದ ಮೇಲೆ ಬಂದವರೇ ಸಮರ್ಪಕವಾಗಿ ಬೆಂಬಲಿಸಲಿಲ್ಲ ಎಂದು ಹೇಳಿದರು.

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ಹೆಗಡೆಯವರ ಕುಟುಂಬ ಬ್ರಿಟಿಷರ ದಮನದಿಂದ ಸಾಕಷ್ಟು ನಷ್ಟ ಅನುಭವಿಸಿತ್ತು. ಬಳಿಕ ಮೋಟಿನ್ಸರ ಹೆಗಡೆಯವರು ಅವರನ್ನು ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯನ್ನಾಗಿ ಮಾಡಿದ ನಂತರ ಅವರ ರಾಜಕೀಯ ಜೀವನದಲ್ಲಿ ಮಹತ್ವದ ಬದಲಾವಣೆ ಉಂಟಾಯಿತು ಎಂದು ವಿವರಿಸಿದರು.

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ ಹೆಗಡೆಯವರು ತಮ್ಮ ಮನೆಗೆ ಭೇಟಿ ನೀಡಿದಾಗ ಯಾವುದೇ ಬೆಂಗಾವಲು ಪಡೆಯಿಲ್ಲದೆ ಸಾಮಾನ್ಯರಂತೆ ಉಳಿದುಕೊಂಡಿದ್ದ ಘಟನೆಯನ್ನು ಸ್ಮರಿಸಿದ ಅವರು, ಅವರ ಸರಳತೆ ಮತ್ತು ಜನಸಾಮಾನ್ಯರೊಂದಿಗೆ ಬೆರೆತುಹೋಗುವ ಗುಣವನ್ನು ಮೆಲುಕು ಹಾಕಿದರು. ಹೆಗಡೆಯವರ ಕೊನೆಯ ದಿನಗಳಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಧನ ಸಹಾಯ ಮಾಡಿದ ವಿಚಾರವನ್ನೂ ಅವರು ಪ್ರಸ್ತಾಪಿಸಿದರು.

“ಹೆಗಡೆಯವರ ಸಂಬಂಧಿ ಎನ್ನಲು ನನಗೆ ಹೆಮ್ಮೆ”

ಉಪನ್ಯಾಸಕಿ ಹಾಗೂ ಲೇಖಕಿ ಎನ್.ಆರ್. ರೂಪಶ್ರೀ ಮಾತನಾಡಿ, “ನಾನು ರಾಮಕೃಷ್ಣ ಹೆಗಡೆಯವರ ಸಂಬಂಧಿ ಎಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ. ಮೈಸೂರಿನಲ್ಲಿ ಹೆಗಡೆಯವರ ಊರಿನವಳು ಎಂದು ಹೇಳಿದಾಗಲೂ ಜನರು ಗೌರವದಿಂದ ಕಾಣುತ್ತಾರೆ” ಎಂದರು.

ಹೆಗಡೆಯವರಿಗೆ ಉತ್ತರ ಕನ್ನಡಕ್ಕಿಂತ ಉತ್ತರ ಕರ್ನಾಟಕ ಭಾಗದ ಜನರು ಹೆಚ್ಚಿನ ಬೆಂಬಲ ನೀಡಿದ್ದರು ಎಂದು ಅವರು ಅಭಿಪ್ರಾಯಪಟ್ಟರು.

ಮಾನವೀಯ ಗುಣಗಳನ್ನು ಹೊಂದಿದ್ದ ಹೆಗಡೆಯವರು ಭ್ರಷ್ಟಾಚಾರದ ವಿರುದ್ಧ ನಿಲುವು ಹೊಂದಿದ್ದ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಜಾತಿ-ಧರ್ಮದ ಭೇದವಿಲ್ಲದೆ ನಿಜವಾದ ಬಡವರನ್ನು ಗುರುತಿಸಿ ಅವರ ಪರವಾಗಿ ಕೆಲಸ ಮಾಡುತ್ತಿದ್ದರು. ಇಂತಹ ನಾಯಕರು ಇಂದಿನ ಸಮಾಜಕ್ಕೆ ಮತ್ತೆ ಅಗತ್ಯವಿದ್ದಾರೆ ಎಂದು ಹೇಳಿದರು.

ಹೆಗಡೆಯವರು ಉತ್ತಮ ಹಣಕಾಸು ತಜ್ಞರಾಗಿದ್ದರು. ಹನ್ನೆರಡು ಬಾರಿ ಹಣಕಾಸು ಆಯವ್ಯಯ ಪತ್ರ ಮಂಡಿಸಿದ ಹೆಗ್ಗಳಿಕೆ ಅವರದ್ದಾಗಿದೆ ಎಂದು ಅವರು ತಿಳಿಸಿದರು.

ವಿ.ಎನ್. ಭಾಗ್ವತ ಅವರು ಹಲವು ವರ್ಷಗಳಿಂದ ರಾಮಕೃಷ್ಣ ಹೆಗಡೆಯವರ ಸ್ಮರಣೆಯನ್ನು ಜೀವಂತವಾಗಿಡುವ ಕಾರ್ಯ ಮಾಡುತ್ತಿರುವುದನ್ನು ಶ್ಲಾಘಿಸಿದ ಅವರು, ಸಾಮಾನ್ಯವಾಗಿ ಕಾರ್ಯಕ್ರಮ ಆಯೋಜಿಸುವವರು ವೇದಿಕೆಯಲ್ಲಿ ಕುಳಿತುಕೊಳ್ಳುತ್ತಾರೆ. ಆದರೆ ಭಾಗ್ವತ ಅವರು ಸಭಿಕರ ಸಾಲಿನಲ್ಲಿ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸುವುದು ಅವರ ಸರಳತೆ ಮತ್ತು ಸಂಘಟನಾ ಮನೋಭಾವಕ್ಕೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಳಮದ್ದಳೆ, ಲೇಖನ ಸ್ಪರ್ಧೆ ವಿಜೇತರಿಗೆ ಬಹುಮಾನ

ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ತಾಳಮದ್ದಳೆ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಲೇಖನ ಸ್ಪರ್ಧೆಯ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.

ಶತಮಾನೋತ್ಸವದ ಪ್ರಯುಕ್ತ ಲೇಖನಗಳನ್ನು ಕಳುಹಿಸಿದ್ದವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಆರ್.ಎನ್. ಹೆಗಡೆ ಬಂಡಿಮನೆ ಅವರು ರಾಮಕೃಷ್ಣ ಹೆಗಡೆಯವರೊಂದಿಗೆ ತಮ್ಮ ಕುಟುಂಬಕ್ಕಿದ್ದ ಆತ್ಮೀಯ ಸಂಬಂಧವನ್ನು ಸ್ಮರಿಸಿ ಸಮಾರೋಪ ಭಾಷಣ ಮಾಡಿದರು.

ಕಾರ್ಯಕ್ರಮಕ್ಕೆ ಕೆವಿಜಿ ನಿವೃತ್ತ ಮ್ಯಾನೇಜರ್ ಜಿ.ವಿ. ಹೆಗಡೆ, ವಕೀಲ ಚಿನ್ಮಯ ಭಾಗ್ವತ ಸೇರಿದಂತೆ ಹಲವರು ಸಹಕರಿಸಿದರು. ವಿ. ಬಾಲಚಂದ್ರ ಭಟ್ಟ ಕರಸುಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ನಿವೃತ್ತ ಪ್ರಾಂಶುಪಾಲ ಎಂ.ಎನ್. ಹೆಗಡೆ ವಂದಿಸಿದರು.

ರಾಜಕೀಯದಲ್ಲಿ ಅಧಿಕಾರಕ್ಕಿಂತ ಮೌಲ್ಯ, ನೈತಿಕತೆ ಮತ್ತು ಜನಪರ ಕಾಳಜಿಗೆ ಆದ್ಯತೆ ನೀಡಿದ ರಾಮಕೃಷ್ಣ ಹೆಗಡೆಯವರ ಸ್ಮರಣೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0