ಅರಬೈಲ್ ಘಟ್ಟದಲ್ಲಿ ಭೀಕರ ಅಪಘಾತ! KSRTC ಬಸ್‌ಗೆ ಮಿನಿ ಬಸ್ ಡಿಕ್ಕಿ — 10 ಮಂದಿಗೆ ಗಾಯ

Aug 29, 2026 - 19:51
 0  76
ಅರಬೈಲ್ ಘಟ್ಟದಲ್ಲಿ ಭೀಕರ ಅಪಘಾತ! KSRTC ಬಸ್‌ಗೆ ಮಿನಿ ಬಸ್ ಡಿಕ್ಕಿ — 10 ಮಂದಿಗೆ ಗಾಯ

ಆಪ್ತ ನ್ಯೂಸ್ ಯಲ್ಲಾಪುರ:

ರಾಷ್ಟ್ರೀಯ ಹೆದ್ದಾರಿ 63ರ (ಹೆದ್ದಾರಿ 52) ಅರಬೈಲ್ ಘಟ್ಟದ ಕಡಿದಾದ ತಿರುವಿನಲ್ಲಿ ಕೆಎಸ್ಆರ್‌ಟಿಸಿ ಬಸ್ ಹಾಗೂ ಮಿನಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಓರ್ವ ಮಹಿಳೆಯ ಕೈ ಮೂಳೆ ಮುರಿದಿದೆ.

ಅರಬೈಲ್ ಘಟ್ಟದ ಅಪಾಯಕಾರಿ ತಿರುವಿನಲ್ಲಿ ಮಿನಿ ಬಸ್ ಅತಿವೇಗವಾಗಿ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ನತ್ತ ನುಗ್ಗಿದೆ. ಪರಿಸ್ಥಿತಿಯ ಅಪಾಯವನ್ನು ಅರಿತ ಕೆಎಸ್ಆರ್‌ಟಿಸಿ ಬಸ್ ಚಾಲಕ ತಕ್ಷಣವೇ ಸಮಯಪ್ರಜ್ಞೆ ಮೆರೆದು, ದೊಡ್ಡ ಅನಾಹುತ ತಪ್ಪಿಸುವ ಉದ್ದೇಶದಿಂದ ಬಸ್‌ ಅನ್ನು ರಸ್ತೆ ಬದಿಯ ಗುಡ್ಡದತ್ತ ತಿರುಗಿಸಿದ್ದಾರೆ.

ಈ ವೇಳೆ ನಿಯಂತ್ರಣ ತಪ್ಪಿದ ಮಿನಿ ಬಸ್ ಕೆಎಸ್ಆರ್‌ಟಿಸಿ ಬಸ್‌ನ ಹಿಂಭಾಗಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಭಾಗಶಃ ಜಖಂಗೊಂಡಿವೆ.

ಅಪಘಾತದಲ್ಲಿ ಗಾಯಗೊಂಡ ಸುಮಾರು 10 ಮಂದಿಯನ್ನು ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಓರ್ವ ಮಹಿಳೆಯ ಕೈ ಮೂಳೆ ಮುರಿದಿರುವುದಾಗಿ ತಿಳಿದುಬಂದಿದೆ.

ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ರಸ್ತೆಯಲ್ಲಿ ಅಡ್ಡಲಾಗಿ ನಿಂತಿದ್ದ ಎರಡೂ ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಕೆಎಸ್ಆರ್‌ಟಿಸಿ ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0